ADVERTISEMENT

Toxic Movie: ‘ಟಾಕ್ಸಿಕ್‌’ ಆಫರ್ ಕೈ ಬಿಡಲು ಕಾರಣ ತಿಳಿಸಿದ ಗುಲ್ಶನ್‌ ದೇವಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2026, 7:32 IST
Last Updated 10 ಜನವರಿ 2026, 7:32 IST
   

ಸಮಯ ಹೊಂದಾಣಿಕೆ ಆಗದ ಕಾರಣ ರಾಕಿಂಗ್ ಸ್ಟಾರ್ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದಿಂದ ಹೊರ ನಡೆಯಬೇಕಾಯಿತು ಎಂದು ನಟ ಗುಲ್ಶನ್‌ ದೇವಯ್ಯ ಅವರು ಹೇಳಿದ್ದಾರೆ.

ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ‘ಟಾಕ್ಸಿಕ್‌’ ಚಿತ್ರದಲ್ಲಿ ಗುಲ್ಶನ್‌ ದೇವಯ್ಯ ನಟಿಸುತ್ತಿದ್ದಾರೆ ಎಂದು ಮೊದಲಿಗೆ ಹೇಳಲಾಗಿತ್ತು. ನಂತರ ಆ ಪ್ರಾಜೆಕ್ಟ್‌ನಿಂದ ಅವರು ಹೊರಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಸಂಭಾವನೆ ವಿಚಾರವಾಗಿ ಒಮ್ಮತ ಮೂಡದ ಕಾರಣಕ್ಕೆ ಚಿತ್ರಕ್ಕೆ ಸಹಿ ಮಾಡಲಿಲ್ಲ ಎಂದೂ ಹೇಳಲಾಗಿತ್ತು.

ಈ ಕುರಿತು ‘ಸ್ಕ್ರೀನ್‌’ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಂಭಾವನೆ ಕಾರಣಕ್ಕೆ ಚಿತ್ರದಿಂದ ಹೊರನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಈ ವಿಚಾರವಾಗಿ ನಾನು ಮತ್ತು ಗೀತು ಮೋಹದಾಸ್‌ ಬಹಳ ಹೊತ್ತು ಚರ್ಚಿಸಿದ್ದೇವು. ನಾನು ಚಿತ್ರದ ಭಾಗವಾಗಬೇಕೆಂದು ಅವರು ಬಯಸಿದ್ದರು. ಆದರೆ, ಅನೇಕ ಕಾರಣಗಳಿಂದ ಅದು ಸಾಧ್ಯವಾಗಿಲ್ಲ’ ಎಂದಿದ್ದಾರೆ.

‘ಟಾಕ್ಸಿಕ್‌ ದೊಡ್ಡ ಸಿನಿಮಾವಾಗಿದ್ದು, ಅನೇಕ ಭಾಗಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಈಗಾಗಲೇ ದೊಡ್ಡ ಪ್ರಾಜೆಕ್ಟ್ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಇನ್ನೊಂದು ದೊಡ್ಡ ಸಿನಿಮಾವನ್ನು ಒಪ್ಪಿಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು. ಅಲ್ಲದೇ ಸಮಯ ಹೊಂದಾಣಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು ನಾನು ಸಿನಿಮಾ ಒಪ್ಪಿಕೊಳ್ಳಲಿಲ್ಲ’ ಎಂದು ಹೇಳಿದ್ದಾರೆ.

ಕಳೆದ ವರ್ಷ ಬಿಡುಗಡೆಯಾದ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಅಧ್ಯಾಯ 1’ ಸಿನಿಮಾದಲ್ಲಿ ಗುಲ್ಶನ್‌ ‘ಕುಲಶೇಖರ್‌’ ಪಾತ್ರದಲ್ಲಿ ಮಿಂಚಿದ್ದರು.

ದೊಡ್ಡ ತಾರಾಬಳಗವನ್ನು ಹೊಂದಿರುವ ಟಾಕ್ಸಿಕ್‌, ಇದೇ ಮಾರ್ಚ್‌ 19ರಂದು ಬಿಡುಗಡೆಯಾಗಲಿದೆ. ಚಿತ್ರದ ನಿರ್ಮಾಣದ ಹೊಣೆಯನ್ನು ಕೆವಿಎನ್ ಪ್ರೋಡಕ್ಷನ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಶನ್ ವಹಿಸಿಕೊಂಡಿದೆ. ನಟಿಯರಾದ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.