ADVERTISEMENT

ಹಗಲುಕನಸು ಸಿನಿಮಾ ವಿಮರ್ಶೆ | ಮಚ್ಚೆ ಹುಡುಗಿಯ ದ್ವೇಷದ ಕಥನ

ಕೆ.ಎಚ್.ಓಬಳೇಶ್
Published 6 ಡಿಸೆಂಬರ್ 2019, 14:27 IST
Last Updated 6 ಡಿಸೆಂಬರ್ 2019, 14:27 IST
‘ಹಗಲುಕನಸು’ ಚಿತ್ರದಲ್ಲಿ ಮಾಸ್ಟರ್‌ ಆನಂದ್‌ ಮತ್ತು ಸನಿಹಾ ಯಾದವ್‌
‘ಹಗಲುಕನಸು’ ಚಿತ್ರದಲ್ಲಿ ಮಾಸ್ಟರ್‌ ಆನಂದ್‌ ಮತ್ತು ಸನಿಹಾ ಯಾದವ್‌   

ಚಿತ್ರ: ಹಗಲುಕನಸು
ನಿರ್ಮಾಪಕರು: ವಿ.ಜಿ. ಅಚ್ಯುತರಾಜು, ಎಂ. ಪದ್ಮನಾಭ, ರಹಮತ್‌
ನಿರ್ದೇಶನ: ದಿನೇಶ್‌ ಬಾಬು
ತಾರಾಗಣ: ಮಾಸ್ಟರ್‌ ಆನಂದ್, ಸನಿಹಾ ಯಾದವ್, ನಾರಾಯಣಸ್ವಾಮಿ, ನೀನಾಸಂ ಅಶ್ವಥ್, ಮನದೀಪ್ ರಾಯ್, ಅಶ್ವಿನ್ ಹಾಸನ್, ಚಿತ್ಕಲಾ ಬಿರಾದಾರ್‌

**

ಆತ ದೊಡ್ಡ ಉದ್ಯಮಿ. ಅವನಿಗೊಬ್ಬ ನಂಬಿಕಸ್ಥ ಮ್ಯಾನೇಜರ್‌. ಈ ಇಬ್ಬರ ನಡುವೆ ವಿಷಬೀಜ ಬಿತ್ತುವ ಸಂಬಂಧಿಕರು. ಕೊನೆಗೆ, ಆತ್ಮಹತ್ಯೆ ಮಾಡಿಕೊಳ್ಳುವ ಮ್ಯಾನೇಜರ್‌. ಅಪ್ಪನ ಸಾವಿಗೆ ದ್ವೇಷ ತೀರಿಸಿಕೊಳ್ಳಲು ಹಪಹಪಿಸುವ ಪುತ್ರಿ. ಹೀಗೆ ನಂಬಿಕೆ ವರ್ಸಸ್‌ ದ್ವೇಷ ಇಟ್ಟುಕೊಂಡ ಚಿತ್ರಗಳು ಈಗಾಗಲೇ ಸಾಕಷ್ಟು ತೆರೆ ಕಂಡಿವೆ.

ADVERTISEMENT

ಇಂತಹ ಕಥಾವಸ್ತು ಆಯ್ದುಕೊಂಡಾಗಲೇ ಸೇಡು ತೀರಿಸಿಕೊಳ್ಳಲು ಹೊರಟ ನಾಯಕಿಯ ನಿರ್ಧಾರವೇ ಶ್ರೇಷ್ಠವಾದುದು, ಕೊನೆಗೆ ಆಕೆಯನ್ನು ಸೊಸೆಯಾಗಿ ಸ್ವೀಕರಿಸಿದರಷ್ಟೇ ಪ್ರಾಯಶ್ಚಿತ ಎಂಬ ಪೂರ್ವಗ್ರಹವೊಂದು ಗೊತ್ತಿಲ್ಲದೆಯೇ ಸೇರಿಕೊಂಡು ಬಿಡುತ್ತದೆ. ಈ ಮಾದರಿಯ ಚಿತ್ರಗಳು ಪ್ರೀತಿ ಮತ್ತು ಜೀವನ ಮೌಲ್ಯದ ಚೌಕಟ್ಟನ್ನು ದಾಟುವುದಿಲ್ಲ.

ದಿನೇಶ್‌ಬಾಬು ಅವರು ಈ ಸಿದ್ಧಸೂತ್ರದಡಿಯೇ ‘ಹಗಲುಕನಸು’ ಚಿತ್ರ ಕಟ್ಟಿದ್ದಾರೆ. ವಾರಾಂತ್ಯದಲ್ಲಿ ಮನೆಯೊಳಗೆ ಪ್ರವೇಶಿಸುವ ಹುಡುಗಿಯೊಬ್ಬಳು ಆ ಕುಟುಂಬದ ವಿರುದ್ಧ ಏಕೆ ಸೇಡು ತೀರಿಸಿಕೊಳ್ಳಲು ಹೋರಾಟಕ್ಕಿಳಿಯುತ್ತಾಳೆ ಎಂಬುದೇ ಕಥೆ. ಇದಕ್ಕೆ ಪೂರಕವಾಗಿ ಮನೆಯಲ್ಲಿರುವ ಅಣ್ಣ–ತಮ್ಮನನ್ನು ಸರಸದ ನಾಟಕವಾಡಿ ಬಲೆಗೆ ಬೀಳಿಸುವುದು, ತನಗೆ ಕ್ಯಾನ್ಸರ್‌ ಇದೆ ಎಂದು ಸುಳ್ಳು ಹೇಳಿ ನಂಬಿಸುವುದು –ಎಲ್ಲವೂ ನಿರ್ದೇಶಕರು ಹೇಳಲು ಹೊರಟ ‘ದ್ವೇಷ’ದ ಪೊಳ್ಳು ಕಥನದಲ್ಲಿ ಕ್ಲಿಷೆಯಾಗಿದೆ. ನೋಡುಗರ ಮನಸ್ಸನ್ನು ಆರ್ದ್ರಗೊಳಿಸುವ ಭಾವತೀವ್ರ ಸನ್ನಿವೇಶಗಳನ್ನು ಕಟ್ಟಿಕೊಡುವಲ್ಲಿ ಅವರು ಎಡವಿದ್ದಾರೆ. ಅವರೇ ಬರೆದಿರುವ ಕಥೆ ಹಳಿ ಜಾರುವುದಿರಲಿ, ಹಳಿಯನ್ನೇ ಏರಿಲ್ಲ.

ವಿಕ್ರಿ ಉದ್ಯಮಿಯ ಪುತ್ರ. ಕನಸಿನಲ್ಲಿ ಅವನಿಗೆ ‘ಮಚ್ಚೆ’ ಹುಡುಗಿ ಕಾಡುತ್ತಿರುತ್ತಾಳೆ. ಕೊನೆಗೊಂದು ದಿನ ಅಚಾನಕ್‌ ಆಗಿ ಆಕೆಯೇ ಮನೆ ಪ್ರವೇಶಿಸುತ್ತಾಳೆ. ಆಕೆ ತೋಡಿದ ಖೆಡ್ಡಾಕ್ಕೆ ಉದ್ಯಮಿಯ ಇಬ್ಬರು ಅಳಿಯಂದಿರು, ಮಗ ಬೀಳುತ್ತಾನೆ. ಆಕೆ ಮೂವರಿಗೂ ಹಣದ ಬೇಡಿಕೆ ಇಡುತ್ತಾಳೆ. ಇದರ ಹಿಂದಿನ ದುರುದ್ದೇಶವೇನು ಎನ್ನುವುದೇ ಈ ಚಿತ್ರದ ಹೂರಣ.

ಮಾಸ್ಟರ್‌ ಆನಂದ್‌, ಸನಿಹಾ ಯಾದವ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.