ಹೇರಾ ಫೇರಿ ಚಿತ್ರದ ದೃಶ್ಯ (ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್)
ಚಿತ್ರ: ಎಕ್ಸ್
ಮುಂಬೈ: ಹೇರಾ ಫೇರಿ–3 ಚಿತ್ರದಿಂದ ನಿರ್ಗಮಿಸಿರುವ ನಟ ಪರೇಶ್ ರಾವಲ್ ಅವರು ತಮಗೆ ಮುಗಂಡವಾಗಿ ನೀಡಿರುವ ₹11 ಲಕ್ಷ ಹಣವನ್ನು ಬಡ್ಡಿ ಸಮೇತವಾಗಿ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಅವರಿಗೆ ಹಿಂದಿರುಗಿಸಿದ್ದಾರೆ ಎಂದು ‘ಬಾಲಿವುಡ್ ಹಂಗಾಮ’ ವರದಿ ಮಾಡಿದೆ.
2000ರಲ್ಲಿ ಬಿಡುಗಡೆಯಾದ ‘ಹೇರಾ ಫೇರಿ’ ಮತ್ತು 2006ರಲ್ಲಿ ಬಿಡುಗಡೆಯಾದ ‘ಫಿರ್ ಹೇರಾ ಫೇರಿ’ ಚಿತ್ರಗಳಲ್ಲಿ ರಾವಲ್ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಜೊತೆಯಾಗಿ ನಟಿಸಿದ್ದ ಈ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದ್ದವು.
ಚಿತ್ರದಿಂದ ನಿರ್ಗಮಿಸುತ್ತಿರುವ ಬಗ್ಗೆ ಮಾರ್ಚ್ 18ರಂದು ಮಾಹಿತಿ ನೀಡಿದ್ದ ಪರೇಶ್ ಅವರು ಕಾರಣವೇನೆಂದು ತಿಳಿಸಿಲ್ಲ. ಹಣದ ವಿಚಾರವಾಗಿಯೇ ಪರೇಶ್ ಅವರು ಚಿತ್ರತಂಡದಿಂದ ಹೊರ ನಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
‘ಪರೇಶ್ ಅವರಿಗೆ ₹15 ಕೋಟಿ ಕೊಡುವುದಾಗಿ ಒಪ್ಪಂದವಾಗಿದ್ದು, ಮುಗಂಡವಾಗಿ ನಿರ್ಮಾಪಕರು ₹11 ಲಕ್ಷ ನೀಡಿದ್ದರು. ಉಳಿದ ₹14.89 ಕೋಟಿಯನ್ನು ಚಿತ್ರ ಬಿಡುಗಡೆಯ ನಂತರ ಪಾವತಿಸುವುದಾಗಿ ಹೇಳಿದ್ದರು. ಇದನ್ನು ಪರೇಶ್ ಅವರು ನಿರಾಕರಿಸಿದ್ದು, ಚಿತ್ರದಿಂದ ನಿರ್ಗಮಿಸಿದ್ದಾರೆ’ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.
ಒಪ್ಪಂದವನ್ನು ಮುರಿದು ಪರೇಶ್ ಚಿತ್ರತಂಡವನ್ನು ತೊರೆದಿದ್ದಾರೆ ಎಂದು ಆರೋಪಿಸಿರುವ ನಟ ಅಕ್ಷಯ್ ಕುಮಾರ್ ಒಡೆತನದ ನಿರ್ಮಾಣ ಸಂಸ್ಥೆ ಕೇಪ್ ಆಫ್ ಗುಡ್ ಫಿಲ್ಮ್ಸ್ ಕಾನೂನು ಹೋರಾಟಕ್ಕೆ ಮುಂದಾಗಿದೆ. ಚಿತ್ರೀಕರಣದ ಮಧ್ಯದಲ್ಲಿ ನಿರ್ಗಮಿಸುವ ಮೂಲಕ ನಷ್ಟ ಉಂಟು ಮಾಡಿದ್ದಾರೆ ಎಂದು ಹೇಳಿರುವ ನಿರ್ಮಾಣ ಸಂಸ್ಥೆ, ₹25 ಕೋಟಿ ಪಾವತಿಸುವಂತೆ ಪರೇಶ್ ಅವರಿಗೆ ಲೀಗಲ್ ನೋಟಿಸ್ ನೀಡಿದೆ. ಆದರೆ, ಚಿತ್ರೀಕರಣ ಪಾರಂಭವಾಗಿಯೇ ಇಲ್ಲ ಎಂದು ಪರೇಶ್ ಹೇಳಿದ್ದಾರೆ.
ಏತನ್ಮಧ್ಯೆ, ಪ್ರಿಯದರ್ಶನ್ ನಿರ್ದೇಶನದ ‘ಭೂತ್ ಬಂಗ್ಲಾ’ ಚಿತ್ರದಲ್ಲಿ ಅಕ್ಷಯ್ ಕುಮಾರ್, ಪರೇಶ್ ಒಟ್ಟಿಗೆ ನಟಿಸಿದ್ದು, ಈ ಚಿತ್ರವು 2026ರ ಏಪ್ರಿಲ್ 2ರಂದು ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.