ADVERTISEMENT

‘ತಿಥಿ’ಗೂ ‘ಮದ್ವೆ’ಗೂ ಹೋಲಿಕೆ ಇಲ್ಲ

ಉದಯ ಯು.
Published 7 ಮಾರ್ಚ್ 2019, 19:45 IST
Last Updated 7 ಮಾರ್ಚ್ 2019, 19:45 IST
ಹಿಂದು ಕೃಷ್ಣ
ಹಿಂದು ಕೃಷ್ಣ   

‘ಚಂದನವನ’ದಲ್ಲಿ ಕೆಲವು ವರ್ಷಗಳ ಹಿಂದೆ ‘ತಿಥಿ’ ಸಿನಿಮಾ ಹೊಸ ಅಲೆಯನ್ನು ಎಬ್ಬಿಸಿತ್ತು. ನಟನೆಯ ಅನುಭವವೇ ಇಲ್ಲದ, ಜನರಿಗೆ ಗುರುತು ಪರಿಚಯ ಇಲ್ಲದ ಕಲಾವಿದರನ್ನು ಹಾಕಿಕೊಂಡು ನಿರ್ಮಿಸಿದ್ದ ಆ ಸಿನಿಮಾ ನಿರೀಕ್ಷೆಗೂ ಮೀರಿ ಸದ್ದು ಮಾಡಿತು. ಅದೇ ಥರದ ಇನ್ನೊಂದು ಸಿನಿಮಾ ‘ಮದ್ವೆ’ ಈ ವಾರ ತೆರೆ ಕಾಣುತ್ತಿದೆ. ಆದರೆ ‘ತಿಥಿ’ಗೂ ‘ಮದ್ವೆ’ಗೂ ಇರುವ ಬಹುದೊಡ್ಡ ವ್ಯತ್ಯಾಸವೆಂದರೆ, ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡಿದೆ. ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿದೆ. ‘ಮದ್ವೆ’ ಸಿನಿಮಾದ ಬಗ್ಗೆ ಅದರ ನಿರ್ದೇಶಕ ಹಿಂದು ಕೃಷ್ಣ ಅವರು ‘ಸಿನಿಮಾ ಪುರವಣಿ’ ಜೊತೆ ನಡೆಸಿದ ಮಾತುಕತೆಯ ಸಾರ ಇಲ್ಲಿದೆ.

* ‘ಮದ್ವೆ’ ಸಿನಿಮಾವನ್ನು ‘ತಿಥಿ’ ಸಿನಿಮಾಕ್ಕೆ ಹೋಲಿಕೆ ಮಾಡಿಯೇ ನೋಡಲಾಗುತ್ತಿದೆ. ಅಂಥದ್ದೇ ಇನ್ನೊಂದು ಸಿನಿಮಾ ಮಾಡುವ ಯೋಚನೆ ಯಾಕೆ ಬಂತು?
ಜನರು ‘ಮದ್ವೆ’ಯನ್ನು ‘ತಿಥಿ’ಗೆ ಹೋಲಿಕೆ ಮಾಡಿ ನೋಡುತ್ತಿರುವುದು ನಿಜ. ವಾಸ್ತವದಲ್ಲಿ ಈ ಸಿನಿಮಾಗಳಲ್ಲಿ ಅಂಥ ಸಾಮ್ಯ ಇಲ್ಲ. ತಂತ್ರಜ್ಞಾನ ಹಾಗೂ ಮೇಕಿಂಗ್‌ ವಿಚಾರದಲ್ಲಿ ಒಂದಷ್ಟು ಹೋಲಿಕೆಗಳು ಇರಬಹುದು. ‘ತಿಥಿ’ ಚಿತ್ರದಲ್ಲಿ ಕೆಲಸ ಮಾಡಿದ್ದ ಕೆಲವು ತಂತ್ರಜ್ಞರು ಈ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಅವರ ಅನುಭವವನ್ನು ನಾವೂ ಬಳಸಿಕೊಂಡಿದ್ದೇವೆ. ಹೋಲಿಕೆ ಅಷ್ಟಕ್ಕೆ ಸೀಮಿತ. ಕಥಾ ವಸ್ತು, ನಿರೂಪಣೆ ಎಲ್ಲ ವಿಚಾರದಲ್ಲೂ ‘ಮದ್ವೆ’ ವಿಭಿನ್ನವಾದುದು.

* ನಿಮ್ಮ ಮೊದಲ ಸಿನಿಮಾಕ್ಕೆ ಕಲಾತ್ಮಕ ಚಿತ್ರಕ್ಕೆ ಹೊಂದುವಂಥ ವಸ್ತುವನ್ನು ಆಯ್ದುಕೊಂಡಿದ್ದೇಕೆ?
ಮೊದಲನೆಯದಾಗಿ, ‘ಕಲಾತ್ಮಕ’ ಮತ್ತು ‘ವಾಣಿಜ್ಯ’ ಎಂಬ ವಾದವನ್ನೇ ನಾನು ಒಪ್ಪುವುದಿಲ್ಲ. ಸಿನಿಮಾವನ್ನು ಒಂದು ಮಾಧ್ಯಮವನ್ನಾಗಿ ಮಾತ್ರ ನಾನು ಸ್ವೀಕರಿಸುತ್ತೇನೆ. ಎರಡನೆಯದಾಗಿ, ‘ಮದ್ವೆ’ ಸಿನಿಮಾದ ವಸ್ತು ‘ಕಲಾತ್ಮಕ’ ಎಂಬ ಕ್ಯಾಟಗರಿಗೆ ಬರುವಂಥದ್ದಲ್ಲ. ಮದುವೆ ಎಂಬ ಸಂಭ್ರಮವನ್ನು ನಮ್ಮ ಹಳ್ಳಿಗಳ ಜನರು ಹೇಗೆ ಆಚರಿಸುತ್ತಾ ಬಂದಿದ್ದಾರೆ. ಆ ಸಂಪ್ರದಾಯ ಹೇಗೆ ಮರೆಯಾಗುತ್ತಿದೆ, ಯಾಕೆ ಅದನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಹಾಸ್ಯದ ಶೈಲಿಯಲ್ಲಿ ಹೇಳುತ್ತಾ ಹೋಗಿದ್ದೇನೆ. ಎಲ್ಲೂ ಅಶ್ಲೀಲತೆ ನುಸುಳದಂತೆ ನೋಡಿಕೊಂಡಿದ್ದೇನೆ.

ADVERTISEMENT

* ಗ್ಲ್ಯಾಮರ್‌, ಪ್ರೀತಿ– ಪ್ರೇಮಗಳು ಅಶ್ಲೀಲತೆಯ ವ್ಯಾಪ್ತಿಯೊಳಗೆ ಬರುತ್ತವೆಯೇ?
ಹಾಗಲ್ಲ, ಹಾಸ್ಯದ ನೆಪದಲ್ಲಿ ದ್ವಂದ್ವಾರ್ಥದ ಸಂಭಾಷಣೆ ಬಳಸುವ ಸಂಪ್ರದಾಯ ಹೆಚ್ಚುತ್ತಿದೆ. ನಾನು ನನ್ನ ಅಕ್ಕ ಅಥವಾ ತಂಗಿಯ ಜೊತೆಗಾಗಲಿ, ತಂದೆ– ತಾಯಿಯ ಜೊತೆಗಾಗಲಿ ಕುಳಿತು ಸಿನಿಮಾ ನೋಡುತ್ತಿದ್ದಾಗ ಮುಜುಗರ ಉಂಟುಮಾಡುವ ದೃಶ್ಯಗಳು ಬರುವುದನ್ನು ಇಷ್ಟಪಡುವುದಿಲ್ಲ. ನನ್ನ ಸಿನಿಮಾ ನೋಡುವವರೂ ನನ್ನಂತೆಯೇ ಇರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಎಲ್ಲೂ ಅಂಥ ಸಂದರ್ಭ ಬರಬಾರದು ಎಂದು ಬಹಳ ಎಚ್ಚರದಿಂದ ಕೆಲಸ ಮಾಡಿದ್ದೇವೆ. ನಿರ್ಮಾಪಕರೂ ನಮ್ಮ ನಿಲುವನ್ನು ಒಪ್ಪಿಕೊಂಡು ಸಹಕಾರ ನೀಡಿದ್ದಾರೆ.

ಈ ನಿಲುವು ‘ಮದ್ವೆ’ ಸಿನಿಮಾಕ್ಕೆ ಸೀಮಿತ ಅಲ್ಲ. ನನ್ನ ನಿರ್ದೇಶನದ ಇನ್ನೊಂದು ಸಿನಿಮಾದ ಕೆಲಸ ಬಹುತೇಕ ಮುಗಿದಿದೆ. ಅದು ನೀವು ಹೇಳುವ ‘ಕಮರ್ಷಿಯಲ್‌’ ಸಿನಿಮಾ ವ್ಯಾಪ್ತಿಯಲ್ಲಿ ಬರುತ್ತದೆ. ಅದರಲ್ಲೂ ನನ್ನ ನಿಲುವಿಗೆ ಬದ್ಧನಾಗಿ ಕೆಲಸ ಮಾಡಿದ್ದೇನೆ. ಹೊಡೆದಾಟ, ಮರಸುತ್ತುವುದು, ದ್ವಂದ್ವಾರ್ಥದ ಸಂಭಾಷಣೆಗಳು ಸಿನಿಮಾವನ್ನು ಗೆಲ್ಲಿಸುತ್ತವೆ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್‌ ಕುಮಾರ್‌ ಅವರ ಸಿನಿಮಾಗಳನ್ನು ನೋಡಿದವರಿಗೆ ಇದು ಅರ್ಥವಾದೀತು.

* ಕಮರ್ಷಿಯಲ್‌ ಎಲಿಮೆಂಟ್‌ಗಳು ಇಲ್ಲದ ಸಿನಿಮಾಗಳಿಗೂ ಪ್ರೇಕ್ಷಕರು ಇದ್ದಾರೆಯೇ?
ಖಂಡಿತವಾಗಿಯೂ ಇದ್ದಾರೆ. ಇಲ್ಲದಿದ್ದರೆ ನಮ್ಮ ಸಿನಿಮಾಕ್ಕೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ಥಿಯೇಟರ್‌ಗಳು ಸಿಗುತ್ತಿದ್ದವೇ?

* ನಿಮ್ಮ ಮೊದಲ ಸಿನಿಮಾಕ್ಕೇ ಪ್ರಶಸ್ತಿಗಳು ಬಂದಿವೆ. ನಿಮ್ಮ ಮೇಲಿನ ನಿರೀಕ್ಷೆಗಳು ಹೆಚ್ಚಿವೆ. ಮುಂದಿನ ಯೋಜನೆಗಳೇನು?
ನಿಜ, ಪ್ರಶಸ್ತಿ– ಮೆಚ್ಚುಗೆಗಳು ಜವಾಬ್ದಾರಿ ಹೆಚ್ಚಿಸಿವೆ. ಜೊತೆಗೆ ಹೆಚ್ಚು ಹೆಚ್ಚು ಅವಕಾಶಗಳೂ ಲಭಿಸುತ್ತಿವೆ. ದೊಡ್ಡ ಬ್ಯಾನರ್‌ಗಳಿಂದ ಮೂರು ಆಹ್ವಾನಗಳು ಬಂದಿವೆ. ಅವುಗಳಲ್ಲಿ ಒಂದನ್ನು ಸ್ವೀಕರಿಸುವ ಹಂತದಲ್ಲಿದ್ದೇನೆ. ‘ಮದ್ವೆ’ ಸಿನಿಮಾ ನಿರ್ಮಾಪಕರೇ ‘ಇನ್ನೊಂದು ಸಿನಿಮಾ ಮಾಡಿಕೊಡಿ’ ಎಂದು ಕೇಳಿಕೊಂಡಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಚಿಂತನೆ ನಡೆಯುತ್ತಿದೆ...

* ನೀವು ಅತಿಯಾಗಿ ಮೆಚ್ಚಿಕೊಂಡ ನಿರ್ದೇಶಕರು ಯಾರು?
ಹಾಗೆ ಒಬ್ಬರನ್ನು ಹೆಸರಿಸುವುದು ಕಷ್ಟ. ಒಬ್ಬ ನಿರ್ದೇಶಕನ ಎಲ್ಲ ಸಿನಿಮಾಗಳೂ ಯಶಸ್ವಿಯಾಗುವುದಿಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ಕಡೆ ತಪ್ಪು ಮಾಡಿಯೇ ಮಾಡುತ್ತಾರೆ. ಆದರೆ ವಿಭಿನ್ನವಾಗಿ ಚಿಂತನೆ ಮಾಡುವ ನಿರ್ದೇಶಕರ ಹೆಸರು ಶಾಶ್ವತವಾಗಿ ಉಳಿಯುತ್ತಿದೆ. ಪುಟ್ಟಣ್ಣ ಕಣಗಾಲ್‌, ಕಾಶಿನಾಥ್‌, ಇತ್ತೀಚಿನ ದಿನಗಳಲ್ಲಿ ಉಪೇಂದ್ರ ಇಂಥ ಸಾಲಿಗೆ ಸೇರುತ್ತಾರೆ. ಇವರೆಲ್ಲರೂ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಅದಕ್ಕೆ ಇಷ್ಟವಾಗುತ್ತಾರೆ. ಇಂಥವರಿಂದ ಪ್ರೇರಣೆ ಪಡೆಯುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.