ಮುಂಬೈ; ಬಾಲಿವುಡ್ ನಟ ಹೃತಿಕ್ ರೋಷನ್ ಕಾಣಿಸಿಕೊಳ್ಳಲಿರುವ ಮುಂಬರುವ ಪ್ಯಾನ್-ಇಂಡಿಯಾ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್ ಹೊತ್ತುಕೊಂಡಿದೆ.
ಕೆಜಿಎಫ್, ಸಲಾರ್, ಕಾಂತಾರದಂತಹ ಚಿತ್ರ ನಿರ್ಮಾಣಗಳ ಮೂಲಕ ಹೆಸರು ಗಳಿಸಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ.
ನಟ ಹೃತಿಕ್ ರೋಷನ್ ಅವರೊಂದಿಗೆ ಹೊಸ ಚಿತ್ರ ಘೋಷಿಸುತ್ತಿರುವುದು ಸಂತಸ ಮತ್ತು ಹೆಮ್ಮೆಯಾಗುತ್ತಿದೆ. ಕರ್ನಾಟಕದ ಮಣ್ಣಿಂದ ಜಾಗತಿಕ ರಂಗದೆಡೆಗೆ ಸಾಗುವ ನಮ್ಮ ಪಯಣದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೊಂಬಾಳೆ ಫಿಲ್ಮ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಹೊಂಬಾಳೆ ಹಲವು ವರ್ಷಗಳಿಂದ ಕೆಲವು ವಿಶಿಷ್ಟ ಕಥೆಗಳಿಗೆ ಸಾಕ್ಷಿಯಾಗಿದೆ. ಹೃತಿಕ್ ಅವರೊಂದಿಗೆ ಸಿನಿಮಾ ನಿರ್ಮಿಸುವ ಮೂಲಕ ನಮ್ಮ ಪ್ರೇಕ್ಷಕರಿಗೆ ವಿಭಿನ್ನ ಸಿನಿಮಾದ ಅನುಭವವನ್ನು ನೀಡಲು ಇಚ್ಛಿಸುತ್ತೇವೆ. ನಾವು ದೊಡ್ಡ ಕನಸು ಕಾಣುತ್ತಿದ್ದೇವೆ ಹಾಗೂ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೊಂಬಾಳೆ ಫಿಲ್ಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಹೃತಿಕ್ ಮುಂಬರುವ 'ವಾರ್ 2' ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ನಟಿ ಕಿಯಾರಾ ಅಡ್ವಾಣಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ. 2019ರಲ್ಲಿ ಬಿಡುಗಡೆಯಾದ 'ವಾರ್' ಚಿತ್ರದ ಮುಂದುವರಿದ ಭಾಗವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ವಿಭಿನ್ನವಾದ ಕಥೆಗಳನ್ನು ಹೊಂಬಾಳೆ ಫಿಲ್ಮ್ಸ್ ಪ್ರೇಕ್ಷಕರ ಎದುರಿಗೆ ಇರಿಸಿದೆ. ಇದೀಗ ದೊಡ್ಡದಾದ ಕನಸೊಂದನ್ನು ಕಾಣುತ್ತಿದ್ದೇವೆ. ನಮ್ಮ ಈ ಕನಸಿಗೆ ಜೀವ ತುಂಬಲಿದ್ದೇವೆ.–ಹೃತಿಕ್ ರೋಷನ್, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.