
ಹೊಂಬಾಳೆ ಫಿಲ್ಮ್ಸ್‌ಪೋಸ್ಟರ್
ಚಿತ್ರ: ಇನ್‌ಸ್ಟಾಗ್ರಾಂ
ರಾಜಕುಮಾರ, ಕೆಜಿಎಫ್ ಚಾಪ್ಟರ್ 1 ಮತ್ತು 2, ಕಾಂತಾರ, ಕಾಂತಾರ ಅಧ್ಯಾಯ–1, ಮಹಾವತಾರ ನರಸಿಂಹ ಮತ್ತು ಸಲಾರ್ ನಂತಹ ಹಿಟ್ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಹೊಂಬಾಳೆ ಫಿಲ್ಮ್ಸ್, ಈಗ ‘ಓವರ್ಸೀಸ್ ಡಿಸ್ಟ್ರಿಬ್ಯೂಷನ್’ (Overseas Distribution) ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ‘ಸಿನಿಮಾ ಎಲ್ಲಾ ಅಂತರಗಳನ್ನು ಮೀರಿದ ಹೃದಯಗಳನ್ನು ಸಂಪರ್ಕಿಸುತ್ತದೆ. ಭಾರತದಿಂದ ಜಗತ್ತಿಗೆ, ನಮ್ಮ ಕಥೆಗಳು ಬಹಳ ದೂರ ಪ್ರಯಾಣಿಸುತ್ತವೆ. ಕೃತಜ್ಞತೆ ಮತ್ತು ಉತ್ಸಾಹದಿಂದ ಹೊಂಬಾಳೆ ಫಿಲ್ಮ್ಸ್ ಸಾಗರೋತ್ತರ ವಿತರಣೆಗೆ ಕಾಲಿಡುತ್ತದೆ. ಭಾರತೀಯ ಸಿನಿಮಾದ ಚೈತನ್ಯವನ್ನು ಗಡಿಗಳನ್ನು ಮೀರಿ, ಕೈಗಾರಿಕೆಗಳನ್ನು ಮೀರಿ ಮತ್ತು ಎಲ್ಲೆಡೆ ಹೃದಯಗಳಿಗೆ ಸಾಗಿಸುತ್ತದೆ’ ಎಂದು ಬರೆದುಕೊಂಡಿದೆ.
ಹೊಂಬಾಳೆ ಫಿಲ್ಮ್ಸ್ ತಮ್ಮ ಕಥೆಗಳನ್ನು ಜಗತ್ತಿನ ಪ್ರತಿಯೊಬ್ಬ ಪ್ರೇಕ್ಷಕನಿಗೂ ತಲುಪಿಸುವ ಈ ಪಯಣದ ಪ್ರಮುಖ ಉದ್ದೇಶವಾಗಿದೆ. ವಿಶ್ವದ ಯಾವುದೇ ಮೂಲೆಯಲ್ಲಿರಲಿ, ಈಗ ಭಾರತೀಯ ಸಿನಿಮಾ ನಿಮ್ಮ ಮನೆಬಾಗಿಲಿಗೆ. ಈ ಮಹತ್ವದ ಹೆಜ್ಜೆಯ ವಿಶೇಷತೆ ಎಂದರೆ, ಇದು ಕೇವಲ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುವ ಚಿತ್ರಗಳಿಗೆ ಮಾತ್ರ ಸೀಮಿತವಲ್ಲ. ಭಾರತೀಯ ಚಿತ್ರರಂಗದ ವೈವಿಧ್ಯಮಯ ಕಥೆಗಳನ್ನು ಹಾಗೂ ಪ್ರತಿಭಾವಂತ ಸಿನಿಮಾಗಳನ್ನು ವಿಶ್ವದಾದ್ಯಂತ ತಲುಪಿಸುವ ಬೃಹತ್ ಜವಾಬ್ದಾರಿಯನ್ನು ಈ ಸಂಸ್ಥೆ ಹೊತ್ತುಕೊಂಡಿದೆ.
ಹೊಂಬಾಳೆ ಫಿಲ್ಮ್ಸ್‌ನ ಈ ಹೊಸ ಅಧ್ಯಾಯವು ಭಾರತೀಯ ಚಿತ್ರರಂಗದ ಜಾಗತಿಕ ಬೆಳವಣಿಗೆಗೆ ಹೊಸ ವೇಗವನ್ನು ನೀಡಲಿದೆ. ಇದು ಕೇವಲ ಒಂದು ಸಂಸ್ಥೆಯ ಬೆಳವಣಿಗೆಯಲ್ಲ, ಇದು ಪ್ರತಿ ಭಾರತೀಯನ ಹೆಮ್ಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.