ADVERTISEMENT

‘ಸೋಲುಗಳಿಂದ ಗೆಲುವಿನ ಪಾಠ’

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:45 IST
Last Updated 27 ಆಗಸ್ಟ್ 2019, 19:45 IST
Hrithik Roshan
Hrithik Roshan   

‘ಕಹೋನಾ ಪ್ಯಾರ್‌ ಹೈ’, ‘ಕೊಯಿ ಮಿಲ್‌ ಗಯಾ’, ‘ಕಭಿ ಖುಷಿ ಕಭಿ ಘಮ್‌’, ‘ಜಿಂದಗಿ ನಾ ಮಿಲೇಗಿ ದುಬಾರಾ’ ಚಿತ್ರಗಳು ಬಾಲಿವುಡ್‌ನ ಜನಪ್ರಿಯ ಸಿನಿಮಾಗಳ ಸಾಲಿಗೆ ಸೇರುವ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ್ದವು.

ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದ ಹೃತಿಕ್‌ ರೋಷನ್‌, ಐದಾರು ವರ್ಷಗಳಿಗೊಂದು ಹಿಟ್ ಸಿನಿಮಾ ನೀಡಲಾಗದೇ ಸೋಲಿನ ಸರಪಳಿಯಲ್ಲಿ ಸಿಲುಕಿದ್ದರು.
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೃತಿಕ್‌ ಮನಬಿಚ್ಚಿ ಮಾತನಾಡಿದ್ದಾರೆ. ‘ಇತ್ತೀಚೆಗೆ ಒಂದೆರಡು ಸಿನಿಮಾಗಳು ಹಿಟ್ ಆಗಿವೆ. ಈಗ ನಾನು ಸೋಲುಗಳಿಂದ ಪಾಠ ಕಲಿತಿದ್ದೇನೆ. ಸಿನಿಮಾ ಸೋತರೂ ನನ್ನ ಕಲಿಕೆ ಮಾತ್ರ ನಿಂತಿಲ್ಲ’ ಎಂದು ಹೇಳಿದ್ದಾರೆ. ಹೃತಿಕ್ ನಟನೆಯ, ಯಾದೇ, ನಾ ತುಮ್‌ ಜಾನೋ ನ ಹಮ್‌, ಲಕ್ಷ್ಯ, ಕೈಟ್ಸ್‌, ಮಹೆಂಜೊದಾರೊ ಸಿನಿಮಾಗಳು ಸೋಲು ಅನುಭವಿಸಿದ್ದವು.

45 ವರ್ಷದ ನಟ, ‘ಸೂಪರ್‌ 30’ ಸಿನಿಮಾದ ಮೂಲಕ ಮತ್ತೊಮ್ಮೆ ಯಶಸ್ಸು ಕಂಡಿದ್ದಾರೆ.

ADVERTISEMENT

‘ಸೂಪರ್‌ 30’ ಯಲ್ಲಿ ಒಳ್ಳೆಯ ಸಂದೇಶ ಇದೆ. ಈ ರೀತಿಯ ಸ್ಕ್ರಿಪ್ಟ್ ಇದ್ದ ಕಾರಣಕ್ಕೇ ನಾನು ಮೊದಲಿಗೆ ಒಪ್ಪಿಕೊಂಡಿರಲಿಲ್ಲ. ನಿಜ ಹೇಳಬೇಕೆಂದರೆ ನನಗೆ ಸೈದ್ಧಾಂತಿಕ ಸಿನಿಮಾಗಳನ್ನು ಮಾಡಲು ಇಷ್ಟವಿಲ್ಲ. ಸಿನಿಮಾ ಅಂದ್ರೆ ಅದರಲ್ಲಿ ಮನರಂಜನೆಯೇ ಮುಖ್ಯವಾಗಿ ಇರಬೇಕು. ನನ್ನ ತಂದೆ ಕೂಡ ಇದನ್ನೇ ಹೇಳುತ್ತಿದ್ದರು. ಸಮಾಜಕ್ಕೆ ಕೊಡುಗೆ ನೀಡಬೇಕಿದ್ದರೆ ಸಾಕ್ಷ್ಯಚಿತ್ರಗಳನ್ನು ಮಾಡು. ಸಿನಿಮಾ ಯಾಕೆ? ಎನ್ನುತ್ತಿದ್ದರು.

‘ಸೂಪರ್‌ 30 ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ₹146 ಕೋಟಿ ಗಳಿಕೆ ಮಾಡಿದೆ. ಈಗ ನನ್ನ ಮನಸ್ಥಿತಿ ಕೂಡ ಬದಲಾಗಿದೆ’ ಎಂದು ಹೃತಿಕ್‌ ಹೇಳಿದ್ದಾರೆ.‘ಕಾಬಿಲ್‌’, ‘ಗುಜಾರಿಶ್‌’ ಸಿನಿಮಾಗಳಲ್ಲಿ ನಾನು ಭಿನ್ನವಾದ ಪಾತ್ರಗಳನ್ನು ಮಾಡಿದ್ದೇನೆ. ‘ಸೂಪರ್‌ 30’ಯಲ್ಲಿಯೂ ಗ್ಲಾಮರ್ ಇಲ್ಲದ ಶಿಕ್ಷಕನ ಪಾತ್ರ ಮಾಡಿದ್ದೇನೆ. ಇವೆಲ್ಲವೂ ನನ್ನ ವೃತ್ತಿ ಬದುಕಿನ ಅಮೂಲ್ಯ ಕ್ಷಣಗಳು ಎಂದು ಹೃತಿಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.