ADVERTISEMENT

ಹಸ್ತಮೈಥುನಕ್ಕೆ ಲಿಂಕ್‌ ಮಾಡದ ಹೂವಿನ ಚಿತ್ರವನ್ನೂ ಶೇರ್‌ ಮಾಡಲಾಗುತ್ತಿಲ್ಲ: ಸ್ವರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2021, 16:14 IST
Last Updated 22 ಆಗಸ್ಟ್ 2021, 16:14 IST
ಸ್ವರಾ ಭಾಸ್ಕರ್‌ (ಇನ್‌ಸ್ಟಾಗ್ರಾಂ ಚಿತ್ರ:  @reallyswara)
ಸ್ವರಾ ಭಾಸ್ಕರ್‌ (ಇನ್‌ಸ್ಟಾಗ್ರಾಂ ಚಿತ್ರ: @reallyswara)   

ದೆಹಲಿ: ಬಾಲಿವುಡ್‌ ನಟಿ ಸ್ವರಾ ಭಾಸ್ಕರ್ ಅವರ 'ವಿರೇ ದಿ ವೆಡ್ಡಿಂಗ್' ಚಿತ್ರದಲ್ಲಿನ ಹಸ್ತಮೈಥುನದ ದೃಶ್ಯವು ಸಾಮಾಜಿಕ ತಾಣಗಳಲ್ಲಿ ಗದ್ದಲ ಸೃಷ್ಟಿ ಮಾಡುತ್ತಿದೆ. ಸ್ವರಾ ಭಾಸ್ಕರ್‌ ಅವರ ಪ್ರತಿ ಸೋಷಿಯಲ್‌ ಮಿಡಿಯಾ ಪೋಸ್ಟ್‌ಗಳನ್ನೂ ಟ್ರೋಲ್‌ ಮಾಡಲಾಗುತ್ತಿದೆ. ಈ ಬಗ್ಗೆ ನಟಿ ಅತ್ಯಂತ ಬೇಸರದಲ್ಲೇ ಮೌನ ಮುರಿದಿದ್ದಾರೆ.

ಹಸ್ತಮೈಥುನದ ಸನ್ನಿವೇಶಗಳನ್ನೇ ಮುಂದಿಟ್ಟುಕೊಂಡು ತಮ್ಮ ಬಗ್ಗೆ ಕೊಂಕು ಮಾತನಾಡುತ್ತಿರುವವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಿಟ್ಟು ಪ್ರದರ್ಶಿಸಿರುವ ಸ್ವರಾ, ‘ಇದೆಲ್ಲವು ಕೊಳಕು ಮನಸ್ಥಿತಿ’ ಎಂದು ಹೇಳಿದ್ದಾರೆ.

'ಸಾಮಾಜಿಕ ಮಾಧ್ಯಮ ಎಂಬುದು ರಸ್ತೆ, ರೆಸ್ಟೋರೆಂಟ್‌ಗಳಂತೆ ಸಾರ್ವಜನಿಕ ಸ್ಥಳ. ಆದರೆ ಸಾರ್ವಜನಿಕ ಸಭ್ಯತೆ ಮತ್ತು ಮೂಲಭೂತ ಸಾಮಾಜಿಕ ಶಿಷ್ಟಾಚಾರಗಳು ಆಫ್‌ಲೈನ್‌ ಮತ್ತು ಆನ್‌ಲೈನ್‌ಗಳೆರಡರಲ್ಲೂ ಪಾಲನೆಯಾಗಬೇಕು. ‘ವಿರೇ ದಿ ವೆಡ್ಡಿಂಗ್’ ಚಿತ್ರ ಹೊರಬಂದ ನಂತರ ಹಸ್ತಮೈಥುನಕ್ಕೆ ಲಿಂಕ್ ಮಾಡದ ಅಥವಾ ಬೆರಳಿನ( ಅಸಭ್ಯ ಸಂಕೇತ) ಗುರುತು ಪ್ರದರ್ಶಿಸದ ಒಂದು ಹೂವಿನ ಚಿತ್ರವನ್ನೂ ನಾನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲು ಆಗುತ್ತಿಲ್ಲ,’ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.

ADVERTISEMENT

‘ಇದು ಕೊಳಕುತನದ ವರ್ತನೆ ಮತ್ತು ಸೈಬರ್ ಲೈಂಗಿಕ ಕಿರುಕುಳಕ್ಕೆ ಸಮಾನವಾದದ್ದು. ಆದರೆ, ನಾನು ಆನ್‌ಲೈನ್‌ ಬೆದರಿಕೆಗೆ ಮಣಿಯುವುದಾಗಲಿ, ಈ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿ ನನ್ನ ಉಪಸ್ಥಿತಿಯನ್ನು ಸೀಮಿತಗೊಳಿಸುವುದಾಗಲಿ ಮಾಡಲಾರೆ. ದ್ವೇಷ, ಧರ್ಮಾಂಧತೆ ಮತ್ತು ಬೆದರಿಸುವಿಕೆಗೆ ನಾವು ಸಾರ್ವಜನಿಕ ಸ್ಥಳವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ,‘ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ವಿರೇ ದಿ ವೆಡ್ಡಿಂಗ್‌’ 2018ರ ಹಾಸ್ಯ ಚಲನಚಿತ್ರವಾಗಿದ್ದು ಶಶಾಂಕ್‌ ಘೋಷ್ ನಿರ್ದೇಶಿಸಿದ್ದರು. ರಿಯಾ ಕಪೂರ್, ಏಕ್ತಾ ಕಪೂರ್ ಮತ್ತು ನಿಖಿಲ್ ದ್ವಿವೇದಿ ನಿರ್ಮಿಸಿದ್ದರು. ಇದು 2015ರ ಕ್ಯಾಲಿ ಕ್ಯುಕೊ-ನಟನೆಯ ‘ದಿ ವೆಡ್ಡಿಂಗ್ ರಿಂಗರ್‌’ನ ರಿಮೇಕ್. ಕರೀನಾ ಕಪೂರ್ ಖಾನ್, ಸೋನಮ್ ಕಪೂರ್, ಸ್ವರಾ ಭಾಸ್ಕರ್ ಮತ್ತು ಶಿಖಾ ತಲ್ಸಾನಿಯಾ ಮುಖ್ಯ ಭೂಮಿಕೆಯಲ್ಲಿದ್ದು, ಈ ನಾಲ್ಕು ಸ್ನೇಹಿತರು ಮದುವೆಯೊಂದಕ್ಕೆ ಹಾಜರಾಗುವುದು ಕಥೆ. ನೀನಾ ಗುಪ್ತಾ ಈ ಚಿತ್ರದ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.