ADVERTISEMENT

ನನಗೆ ಲಾಕ್‌ಡೌನ್‌ ಸಮಸ್ಯೆಯೇ ಆಗಿಲ್ಲ: ಪ್ರಕಾಶ್‌ ರೈ

ಇದು ಸಿನಿಮಾ ಬಗ್ಗೆ ಮಾತಾಡುವ ಸಮಯವಲ್ಲ

ಗಾಣಧಾಳು ಶ್ರೀಕಂಠ
Published 15 ಏಪ್ರಿಲ್ 2020, 5:21 IST
Last Updated 15 ಏಪ್ರಿಲ್ 2020, 5:21 IST
ಪ್ರಕಾಶ್‌ ರಾಜ್ (ಸಂಗ್ರಹ ಚಿತ್ರ)
ಪ್ರಕಾಶ್‌ ರಾಜ್ (ಸಂಗ್ರಹ ಚಿತ್ರ)   
""

‘ಇದು ಸಿನಿಮಾ ಬಗ್ಗೆ ಮಾತನಾಡುವ ಸಮಯವೇ ಅಲ್ಲ‘ ಎನ್ನುವುದು ಬಹುಭಾಷಾ ಸ್ಟಾರ್‌ ಪ್ರಕಾಶ್‌ ರೈ ಸ್ಪಷ್ಟಮಾತು. ‘ಲಾಕ್‌ಡೌನ್‌ ರಜೆಯಲ್ಲಿ ಯಾವುದಾದರೂ ಹೊಸ ಸಿನಿಮಾ, ಸ್ಕ್ರಿಪ್ಟ್‌ ಬಗ್ಗೆ ಯೋಚನೆ ಮಾಡ್ತಿದ್ದೀರಾ‘ ಎಂದು ಪ್ರಜಾಪ್ಲಸ್‌ ಕೇಳಿದಾಗ ಅವರು ನೀಡಿದ ಉತ್ತರವಿದು. ಪ್ರಕಾಶ್‌ ರೈ ಹಿಂದಿನಿಂದಲೂ ನೇರ ಮಾತಿಗೆ ಹೆಸರುವಾಸಿ.

ಹಾಗೆಂದು ಲಾಕ್‌ಡೌನ್‌ ಸಮಯದಲ್ಲಿ ಅವರು ಕೆಲಸವಿಲ್ಲದೆ ಕುಳಿತಿಲ್ಲ. ಅವರು ಹೈದರಾಬಾದ್‌ ಹೊರವಲಯದ ತಮ್ಮ ತೋಟದಲ್ಲಿ ಪತ್ನಿ, ಮಗ, ಮಗಳು ಮತ್ತು ತಾಯಿ ಜೊತೆಗಿದ್ದಾರೆ. ಫೋನ್‌ ಮಾಡಿದಾಗ, ಸಿನಿಮಾ ಚಟುವಟಿಕೆಗಳನ್ನು ಬಿಟ್ಟು, ಸಾಹಿತ್ಯ, ಪರಿಸರ, ಕೃಷಿ ಮತ್ತು ಜೀವನದ ಬಗ್ಗೆಯೇ ಹೆಚ್ಚು ಮಾತನಾಡಿದರು.

‘ಈಗ ನಮ್ಮ ಸುತ್ತಮುತ್ತಲಿನ ಜನರು ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ನಮ್ಮ ಕೈಲಾದಷ್ಟು ನೆರವಾಗಬೇಕು. ನಾನೀಗ ಅದನ್ನೇ ಮಾಡ್ತಿದ್ದೇನೆ. ನನ್ನದು ಐದು ಪರ್ಸೆಂಟ್ ಸಿನಿಮಾ ಆದರೆ, ತೊಂಬತ್ತೈದು ಪರ್ಸೆಂಟ್ ಬದುಕು. ನಾನು ಆ ಬದುಕಿನ ಬಗ್ಗೆಯೇ ಹೆಚ್ಚು ಯೋಚಿಸುತ್ತೇನೆ‘ ಎಂದರು ರೈ.ಇತ್ತೀಚೆಗೆ ಮಗನೊಂದಿಗೆ ತೋಟ ಸುತ್ತಾಡುತ್ತಿ ರುವ ವಿಡಿಯೊ ಹಾಗೂ ಪ್ರಕಾಶ್ ರಾಜ್ ಫೌಂಡೇಷನ್ ಕೈಗೊಳ್ಳುತ್ತಿರುವ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ರೈ ಅಪ್‌ಲೋಡ್‌ ಮಾಡಿದ್ದರು.

ADVERTISEMENT
ಪತ್ನಿ ಪೋನಿ ಮತ್ತು ಪುತ್ರ ವೇದಾಂತ್‌ ಜೊತೆ ಪ್ರಕಾಶ್

ಅಂದ ಹಾಗೆ ಪ್ರಕಾಶ್ ರೈ, ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂವತ್ತಕ್ಕೂ ಹೆಚ್ಚು ಕಾರ್ಮಿಕರಿಗೆ ತಮ್ಮ ತೋಟ ದಲ್ಲಿ ಆಶ್ರಯ ನೀಡಿದ್ದಾರೆ. ಪ್ರಕಾಶ್ ರಾಜ್ ಫೌಂಡೇಷನ್‌ ಮೂಲಕ ತಮಿಳುನಾಡು, ಕರ್ನಾಟಕದ ಕೆಲವು ಭಾಗದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ‘ಆಂಧ್ರ ಮತ್ತು ಪುದುಚೆರಿಯ ಕಾರ್ಮಿಕರಿಗೆ ನಮ್ಮ ತೋಟದಲ್ಲೇ ಊಟ ವಸತಿ ನೀಡಿದ್ದೇನೆ. ಚೆನ್ನೈನಲ್ಲಿರುವ ಕೆಲವು ಮೀನುಗಾರರ ಕುಟುಂಬಕ್ಕೆ ಫೌಂಡೇಷನ್ ನೆರವಾಗಿದೆ. ಕರ್ನಾಟಕದಲ್ಲಿ ‘ಹಸಿರು ದಳ‘, ‘ತಮಟೆ‘ ಸಂಸ್ಥೆಗಳ ಮೂಲಕ ಊಟದ ವ್ಯವಸ್ಥೆ ಮಾಡಿದ್ದೇನೆ. ನಿತ್ಯ ಸಾವಿರ ಮಂದಿಗೆ ಊಟದ ವ್ಯವಸ್ಥೆಯಾಗಿದೆ. ನಾನೇ ಎಲ್ಲ ಕಡೆ ಇರೋಕಾಗಲ್ಲ. ಹಾಗಾಗಿ ಒಂದಷ್ಟು ಸಂಘಟನೆಗಳೊಂದಿಗೆ ಕೈ ಜೋಡಿಸಿದ್ದೇನೆ‘ ಎಂದು ವಿವರಿಸಿದರು ಪ್ರಕಾಶ್ ರೈ.

‘ಲಾಕ್‌ಡೌನ್‌ ಅವಧಿ ಏನನ್ನಿಸುತ್ತದೆ‘ ಎಂದು ಕೇಳಿದಾಗ, ‘ನನಗೆ ಲಾಕ್‌ಡೌನ್ ಹೊಸದಲ್ಲ. ಹತ್ತು ವರ್ಷಗಳ ಹಿಂದೆಯೇ ತೋಟಕ್ಕೆ ಬಂದವನು. ಇಷ್ಟಪಟ್ಟು ಬದುಕುತ್ತಿದ್ದೇನೆ‘ ಎಂದರು. ’ಈಗಂತೂ ತೋಟ ಅದ್ಭುತವಾಗಿದೆ. ಗೇರು, ಮಾವು, ಸಪೋಟ ಹಣ್ಣಿನ ಮರಗಳು, ಬೆಂಡೆ, ನುಗ್ಗೆ ವಿಧ ವಿಧವಾದ ತರಕಾರಿ.. ಅವುಗಳಿಂದ ರುಚಿ ರುಚಿಯಾದ ಅಡುಗೆ.. ನಾನು ಆರು ತಿಂಗಳಿನಿಂದ ವೆಜಿಟೇರಿಯನ್ ಆಗ್ಬಿಟ್ಟಿದ್ದೀನಿ. ನನಗೆ ಲಾಕ್‌ಡೌನ್‌ ಸಮಸ್ಯೆಯೇ ಆಗಿಲ್ಲ‘ ಎಂದು ಸಂತಸದಿಂದ ಹೇಳುತ್ತಾರೆ ರೈ.

ಮತ್ತೆ ಸಿನಿಮಾ–ಸ್ಕ್ರಿಪ್ಟ್‌ನತ್ತ ಮಾತು ಹೊರಳಿಸಿದರೆ, ‘ಈಗ ಆ ವಿಷಯ ಮಾತಾಡಬಾರದು. ಈಗ ಭೂಮಿ ಏನೋ ಕೇಳುತ್ತಿದೆ. ಅದನ್ನು ಆಲಿಸಬೇಕು. ನಮ್ಮ ಸುತ್ತ ಸಂಕಷ್ಟದಲ್ಲಿರುವರಿಗೆ ನೆರವಾಗಬೇಕು. ಇದು, ಮನುಷ್ಯತ್ವ, ಮಾನವಿಯತೆಯನ್ನು ನೋಡುವ ಕಾಲಘಟ್ಟ. ಪ್ರಕೃತಿಯಿಂದ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ. ಅದಕ್ಕೆ ಕಾರಣಗಳೇನು ಎಂದು ತಿಳಿಯುವ ಕಾಲಘಟ್ಟ‘ ಎಂದರು.

ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಪ್ರಕಾಶ್‌ ರೈ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದರು. ಈಗ ನೇರವಾಗಿ ರಾಜಕೀಯದ ಬಗ್ಗೆ ಮಾತನಾಡುತ್ತಿಲ್ಲ. ಇತ್ತೀಚೆಗೆ ಪುನೀತ್‌ ರಾಜ್‌ಕುಮಾರ್ ನಟನೆಯ, ಸಂತೋಷ್ ಆನಂದರಾಮ್‌ ನಿರ್ದೇಶನದ ‘ಯುವರತ್ನ‘ ಚಿತ್ರದಲ್ಲಿ ನಟಿಸಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಚಿತ್ರೀಕರಣ ಅರ್ಧಕ್ಕೆ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.