ADVERTISEMENT

‘ಗುಡ್‌ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಇಳಯರಾಜ ನೋಟಿಸ್; ₹5 ಕೋಟಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 7:25 IST
Last Updated 16 ಏಪ್ರಿಲ್ 2025, 7:25 IST
   

ಚೆನ್ನೈ: ‌ಅನುಮತಿ ಪಡೆಯದೆ ತಮ್ಮ ಹಾಡುಗಳನ್ನು ಸಿನಿಮಾದಲ್ಲಿ ಬಳಸಿದ್ದಕ್ಕಾಗಿ ನಟ ಅಜಿತ್ ಕುಮಾರ್ ನಟನೆಯ ‘ಗುಡ್‌ ಬ್ಯಾಡ್ ಅಗ್ಲಿ’ ಚಿತ್ರದ ನಿರ್ಮಾಪಕರಿಗೆ ಸಂಗೀತ ಸಂಯೋಜಕ ಇಳಯರಾಜ ಅವರು ಲೀಗಲ್ ನೋಟಿಸ್ ನೀಡಿದ್ದಾರೆ.

₹5 ಕೋಟಿ ಪಾವತಿಸುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

ಏಪ್ರಿಲ್ 10ರಂದು ತೆರೆಗೆ ಬಂದ ‘ಗುಡ್‌ ಬ್ಯಾಡ್ ಅಗ್ಲಿ’ ಚಿತ್ರದಲ್ಲಿ ಇಳಯರಾಜ ಸಂಯೋಜನೆಯ ಮೂರು ಹಳೆಯ ಹಾಡುಗಳನ್ನು ಕೆಲ ಬದಲಾವಣೆಯೊಂದಿಗೆ ಹೊಸ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. 1996ರಲ್ಲಿ ಬಿಡುಗಡೆಯಾದ ‘ನಟ್ಟುಪುರ ಪಟ್ಟು’ ಚಿತ್ರದ ‘ಓತ ರುಬ ಮುಳ್ಳು’, 1982ರಲ್ಲಿ ಬಿಡುಗಡೆಯಾದ ‘ಸಕಲಕಲ್ ವಲ್ಲವಂ’ ಚಿತ್ರದ ‘ಇಲಮೈ ಇಡೊ ಇಡೊ’ ಮತ್ತು 1986ರಲ್ಲಿ ಬಿಡುಗಡೆಯಾದ ‘ವಿಕ್ರಮ್’ ಚಿತ್ರದ ‘ಏನ್ ಜೋಡಿ ಮಂಜ ಕುರುವಿ’ ಹಾಡುಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಾಗಿದೆ.

ADVERTISEMENT

ಇಳಯರಾಜ ಅವರು ಭಾರತೀಯ ಹಕ್ಕುಸ್ವಾಮ್ಯ ಕಾಯ್ದೆ 1957ರ ಸೆಕ್ಷನ್ 19(9) ಮತ್ತು 19(10) ರ ಅಡಿಯಲ್ಲಿ ಚಿತ್ರದ ನಿರ್ಮಾಪಕರು, ಮೈತ್ರಿ ಮೂವಿ ಮೇಕರ್ಸ್‌ ಮಾಲೀಕರಾದ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಅವರಿಗೆ ನೋಟಿಸ್‌ ನೀಡಿದ್ದಾರೆ.

ತಕ್ಷಣ ಚಿತ್ರದಿಂದ ಮೂರು ಹಾಡುಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಿರುವ ಅವರು, ಕ್ಷಮೆಯಾಚಿಸುವಂತೆ ತಿಳಿಸಿದ್ದಾರೆ.

ಇಳಯರಾಜ ಅವರು ಈ ರೀತಿ ನೋಟಿಸ್‌ ಕಳುಹಿಸುತ್ತಿರುವುದು ಇದೇ ಮೊದಲಲ್ಲ. 1991ರಲ್ಲಿ ಬಿಡುಗಡೆಯಾದ ಗುಣಾ ಚಿತ್ರದ ‘ಕಣ್ಮಣಿ ಅನ್ಬೋಡು’ ಹಾಡನ್ನು ಬಳಸಿದ್ದಕ್ಕೆ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರ ತಂಡಕ್ಕೆ ನೋಟಿಸ್ ಕೊಟ್ಟಿದ್ದ ಅವರು ₹2 ಕೋಟಿ ಪರಿಹಾರಕ್ಕೆನೀಡುವಂತೆ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.