ಇಳೆಯರಾಜ
ಚೆನ್ನೈ: ತಮಿಳುನಾಡಿನ ಶ್ರೀವಿಲ್ಲಿಪುತೂರ್‌ನಲ್ಲಿ ಇರುವ ಪ್ರಸಿದ್ಧ ಆಂಡಾಳ್ ದೇವಸ್ಥಾನದ ಗರ್ಭಗುಡಿಗೆ ತಮಗೆ ಪ್ರವೇಶ ನೀಡಲಿಲ್ಲ ಎಂಬ ಮಾಧ್ಯಮ ವರದಿಗಳನ್ನು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ನಿರಾಕರಿಸಿದ್ದಾರೆ.
ನಡೆಯದೇ ಇರುವ ಘಟನೆಯ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಇಳಯರಾಜ ಹೇಳಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ. ‘ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ಆತ್ಮಗೌರವದ ಜೊತೆ ರಾಜಿ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ’ ಎಂದು ಅವರು ಹೇಳಿದ್ದಾರೆ.
ವಿರುಧನಗರದಲ್ಲಿ ಇರುವ ದೇವಸ್ಥಾನದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇಳಯರಾಜ ಅವರು ಡಿಸೆಂಬರ್ 15ರಂದು ಭಾಗಿಯಾಗಿದ್ದರು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಇಳಯರಾಜ ಅವರು ಶ್ರೀ ತ್ರಿಬಂದಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜೀಯರ್ (ಶ್ರೀವೈಷ್ಣವ ಸಂಪ್ರದಾಯದ ಗುರುಗಳು) ಅವರ ಜೊತೆ ಮಾತುಕತೆಯಲ್ಲಿದ್ದರು, ದೇವಸ್ಥಾನದ ಗರ್ಭಗೃಹದ ಮುಂದೆ ಇರುವ ಅರ್ಥ ಮಂಟಪವನ್ನು ಪ್ರವೇಶಿಸುವವರಿದ್ದರು. ಆಗ, ಉತ್ಸವ ಮೂರ್ತಿಗಳನ್ನು ಇರಿಸುವ ಅರ್ಥ ಮಂಟಪವನ್ನು ಪ್ರವೇಶಿಸಲು ದೇವಸ್ಥಾನದ ಅರ್ಚಕರು ಮತ್ತು ಜೀಯರ್‌ಗಳಿಗೆ ಮಾತ್ರ ಅನುಮತಿ ಇದೆ ಎಂದು ಅವರಿಗೆ ಹೇಳಲಾಯಿತು ಎಂದು ಅಧಿಕಾರಿ ವಿವರಿಸಿದ್ದಾರೆ.
‘ಮಂಟಪದ ಪ್ರವೇಶದ್ವಾರದಲ್ಲಿ ತಕ್ಷಣ ನಿಂತ ಇಳಯರಾಜ ಅವರು ಅಲ್ಲಿಂದಲೇ ಪ್ರಾರ್ಥನೆ ಸಲ್ಲಿಸಿದರು. ಅವರು ಬಂದಿದ್ದಾಗ ದೇವಸ್ಥಾನದಿಂದ ನೀಡುವ ಎಲ್ಲ ಗೌರವ ನೀಡಲಾಗಿದೆ’ ಎಂದು ಆ ಅಧಿಕಾರಿ ಹೇಳಿದ್ದಾರೆ.
ಇಳಯರಾಜ ಅವರ ಭೇಟಿಯ ಸುತ್ತಲಿನ ವಿವಾದದ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಯು, ಅರ್ಥ ಮಂಟಪದ ಮೆಟ್ಟಿಲು ಏರಲು ಇಳಯರಾಜ ಮುಂದಾದಾಗ, ಮಂಟಪದ ಎದುರಿನಿಂದ ದರ್ಶನ ಪಡೆಯಬಹುದು ಎಂಬುದನ್ನು ಅವರಿಗೆ ತಿಳಿಸಲಾಯಿತು ಎಂದು ವಿವರಿಸಿದ್ದಾರೆ.
‘ಅದಕ್ಕೆ ಅವರು ಒಪ್ಪಿ, ದರ್ಶನ ಪಡೆದರು. ದೇವಸ್ಥಾನದಲ್ಲಿನ ಪದ್ಧತಿಯ ಪ್ರಕಾರ, ಅರ್ಚಕರಿಗೆ ಮತ್ತು ಮಠಾಧೀಶರಿಗೆ ಮಾತ್ರ ದೇವಸ್ಥಾನದ ಗರ್ಭಗೃಹದ ಒಳಗೆ ಹೋಗಲು ಅವಕಾಶ ಇದೆ’ ಎಂದು ಇಲಾಖೆಯ ಜಂಟಿ ಆಯುಕ್ತರು ವಿರುಧನಗರದ ಜಿಲ್ಲಾಧಿಕಾರಿಗೆ ರವಾನಿಸಿರುವ ಸಂದೇಶದಲ್ಲಿ ಹೇಳಿದ್ದಾರೆ.
‘ತಮಿಳುನಾಡಿನ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ, ಅಲ್ಲಿ ನಿತ್ಯಪೂಜೆ ಹಾಗೂ ಅಭಿಷೇಕ ನಡೆಸುವ ಅರ್ಚಕರಿಗೆ ಮಾತ್ರ ಗರ್ಭಗೃಹ ಪ್ರವೇಶಕ್ಕೆ ಅವಕಾಶ ಇದೆ. ಬ್ರಾಹ್ಮಣರು ಸೇರಿದಂತೆ ಭಕ್ತರಿಗೆ ಅಲ್ಲಿಗೆ ಪ್ರವೇಶಿಸಲು ಅವಕಾಶ ಇಲ್ಲ’ ಎಂದು ಚೆನ್ನೈನ ಸ್ವಯಂಸೇವಾ ಸಂಘಟನೆ ಜನಕಲ್ಯಾಣದ ಕಾರ್ಯದರ್ಶಿ ವಿ. ಸುಬ್ರಮಣಿಯನ್ ಹೇಳಿದರು.
ಇಳಯರಾಜ ಅವರು ಅರ್ಥ ಮಂಟಪದಿಂದ ಹೊರಬರುತ್ತಿರುವುದು ಹಾಗೂ ಅರ್ಚಕರು ಗರ್ಭಗೃಹವನ್ನು ಪ್ರವೇಶಿಸುತ್ತಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡಿದ್ದು, ಇಳಯರಾಜ ಅವರು ದಲಿತರು ಎಂಬ ಕಾರಣಕ್ಕೆ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಅಸ್ಪೃಶ್ಯತೆ ಜೀವಂತ ಇರುವುದಕ್ಕೆ ಉದಾಹರಣೆ: ಎಚ್.ಸಿ. ಮಹದೇವಪ್ಪ
ಬೆಂಗಳೂರು: ಸಂಗೀತ ಮಾಂತ್ರಿಕ ಹಾಲಿ ರಾಜ್ಯ ಸಭಾ ಸದಸ್ಯರಾದ ಇಳಯರಾಜ ಅವರನ್ನು ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಪ್ರವೇಶ ಮಾಡಲು ನಿರಾಕರಿಸಿದ ಘಟನೆಯು ನಿಜಕ್ಕೂ ಅವಮಾನಕರ ಸಂಗತಿ ಆಗಿದ್ದು ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದವರ ಸ್ಥಿತಿಯೇ ಹೀಗಿದ್ದರೆ ಸಾಮಾನ್ಯರಾಗಿ ಜೀವಿಸುತ್ತಿರುವ ಪರಿಶಿಷ್ಟ ಸಮುದಾಯಗಳ ಪರಿಸ್ಥಿತಿ ಏನಾಗಿರಬೇಕು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಭಾರತೀಯ ಜನಗಳಾದ ನಾವು ಭ್ರಾತೃತ್ವ ಮತ್ತು ಐಕ್ಯತೆಯಿಂದ ಇರಬೇಕು ಎಂಬ ಸಂವಿಧಾನದ ಆಶಯವನ್ನು ನಾವು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾದ್ದು ಈ ಹೊತ್ತಿನ ಜರೂರು ಎಂಬುದನ್ನು ಇಳಯರಾಜಾ ಅವರ ಈ ಘಟನೆಯು ನಮಗೆ ಮತ್ತೆ ಮತ್ತೆ ನೆನಪಿಸುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.