ADVERTISEMENT

ಅಪ್ಪು ಬರ್ತಡೆಗೆ ‘ಪಿಚ್ಚರ್‌ ಪೋಸ್ಟ್‌ ಕಾರ್ಡ್‌’ ಬಿಡುಗಡೆ ಮಾಡಿದ ಅಂಚೆ ಇಲಾಖೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2025, 12:58 IST
Last Updated 10 ಮಾರ್ಚ್ 2025, 12:58 IST
   

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನದ ಅಂಗವಾಗಿ ಭಾರತೀಯ ಅಂಚೆ ಇಲಾಖೆ, ಐದು ವಿಶೇಷ ಪಿಚ್ಚರ್‌ ಪೋಸ್ಟ್‌ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ.

ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸೋಮವಾರ ಈ ಪಿಚ್ಚರ್‌ ಪೋಸ್ಟ್‌ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ್ದಾರೆ.

‘ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಅಪ್ಪು ಗಂಧದಗುಡಿ ಅಗರಬತ್ತಿ’ ಸಹಯೋಗದೊಂದಿಗೆ ಈ ಪೋಸ್ಟ್‌ ಕಾರ್ಡ್‌ಗಳನ್ನು ಹೊರತರಲಾಗುತ್ತಿದೆ’ ಎಂದು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್‌ ಜನರಲ್ ಎಸ್. ರಾಜೇಂದ್ರ ಕುಮಾರ್‌ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

‘ಆಸಕ್ತರು ಕರ್ನಾಟಕದ ಅಂಚೆಚೀಟಿ ಸಂಗ್ರಹಣಾ ಬ್ಯೂರೋಗಳಿಂದ ಈ ಚಿತ್ರಗಳನ್ನು ಪಡೆದುಕೊಳ್ಳಬಹುದು. ಅವರ ಜನ್ಮದಿನವಾದ ಮಾರ್ಚ್‌ 17ರಂದು ವಿಶೇಷ ರಿಯಾಯಿತಿಯನ್ನು ಸಹ ಪಡೆಯಬಹುದು’ ಎಂದೂ ಹೇಳಿದ್ದಾರೆ.

1975 ಮಾರ್ಚ್‌ 17ರಂದು ಜನಿಸಿರುವ ಪುನೀತ್ ರಾಜ್‌ಕುಮಾರ್ ಅವರು ಬಾಲ್ಯದಲ್ಲಿಯೇ ಸಿನಿಮಾ ಪ್ರಯಾಣ ಪ್ರಾರಂಭಿಸಿದ್ದರು. ‘ವಸಂತ ಗೀತ’ ಚಿತ್ರದ ಮೂಲಕ ಬಾಲ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಅವರು ಸುಮಾರು 32 ಚಿತ್ರಗಳಲ್ಲಿ ನಟಿಸಿದ್ದರು.

ನಟನೆಯಷ್ಟೆ ಅಲ್ಲದೇ ಗಾಯಕನಾಗಿ, ನಿರ್ಮಾಪಕರಾಗಿಯೂ ಪುನೀತ್ ಗುರುತಿಸಿಕೊಂಡಿದ್ದರು.

2021 ಅಕ್ಟೋಬರ್ 29ರಂದು ಹೃದಯ ಸ್ತಂಭನದಿಂದ ಅವರು ನಿಧರಾದರು.

ಪುನೀತ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ‘ಅಪ್ಪು’ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.