ನವದೆಹಲಿ: ಭಾರತದಿಂದ ಆಸ್ಕರ್ ಅಂಗಳಕ್ಕೆ ಅಧಿಕೃತ ಪ್ರವೇಶ ಪಡೆದಿದ್ದ ‘ಲಾಪತಾ ಲೇಡೀಸ್’ ಚಿತ್ರವು ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ ಬ್ರಿಟನ್ ಪ್ರತಿನಿಧಿಸುತ್ತಿರುವ, ಸಂಧ್ಯಾ ಸೂರಿ ಅವರ ಹಿಂದಿ ಚಲನಚಿತ್ರ ‘ಸಂತೋಷ್’ ಮುಂದಿನ ಸುತ್ತು ಪ್ರವೇಶಿಸಿದೆ.
ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಅಂತಿಮ ಐದರ ಸ್ಥಾನಕ್ಕಾಗಿ ಸ್ಪರ್ಧಿಸುವ 15 ಚಲನಚಿತ್ರಗಳ ಪಟ್ಟಿ ಪ್ರವೇಶಿಸುವಲ್ಲಿ ವಿಫಲವಾಗಿದೆ.
‘ಅಕಾಡಮಿ ಆಫ್ ಮೋಷನ್ ಪಿಕ್ಟರ್ ಆರ್ಟ್ಸ್ ಅಂಡ್ ಸೈನ್ಸಸ್’ (ಎಎಂಪಿಎಎಸ್) ಆಯ್ಕೆಯಾದ 15 ಚಿತ್ರಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಆಸ್ಕರ್‌ಗೆ ಅಂತಿಮ ನಾಮ ನಿರ್ದೇಶನಗಳನ್ನು ಜನವರಿ 17ರಂದು ಪ್ರಕಟಿಸಲಾಗುತ್ತದೆ.
97ನೇ ಅಕಾಡೆಮಿ ಪ್ರಶಸ್ತಿಯ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ 85 ದೇಶಗಳ ಅರ್ಹ ಸಿನಿಮಾಗಳು ಭಾಗವಹಿಸಿದ್ದವು ಎಂದು ಅಕಾಡೆಮಿ ತಿಳಿಸಿದೆ.
‘ಈ ವರ್ಷದ ಅಕಾಡೆಮಿ ಪ್ರಶಸ್ತಿಗಾಗಿ ಆಯ್ಕೆಯಾಗಿರುವ 15 ಸಿನಿಮಾಗಳ ಪಟ್ಟಿಯಲ್ಲಿ ‘ಲಾಪತಾ ಲೇಡೀಸ್’ ಸ್ಥಾನ ಪಡೆದಿಲ್ಲ. ಇದರಿಂದ ನಮಗೆ ನಿರಾಶೆಯಾಗಿರುವುದು ನಿಜ. ಆದರೆ ಇಡೀ ಪ್ರಯಾಣದಲ್ಲಿ ನಮಗೆ ಅಪಾರ ಬೆಂಬಲ ದೊರೆತಿದೆ. ಅದಕ್ಕಾಗಿ ಕೃತಜ್ಞರಾಗಿರುತ್ತೇವೆ’ ಎಂದು ಅಮೀರ್ ಖಾನ್ ಪ್ರೊಡಕ್ಷನ್, ಜಿಯೊ ಸ್ಟುಡಿಯೋಸ್ ಮತ್ತು ಕಿಂಡ್ಲಿಂಗ್ ಪ್ರೊಡಕ್ಷನ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಮುಂದಿನ ಸುತ್ತಿಗೆ ಆಯ್ಕೆಯಾಗಿರುವ ಎಲ್ಲ ಸಿನಿಮಾ ತಂಡಗಳನ್ನು ಅಭಿನಂದಿಸುವುದಾಗಿ ಪ್ರಕಟಣೆ ಹೇಳಿದೆ.
ಮುಂದಿನ ಹಂತಕ್ಕೆ ‘ಸಂತೋಷ್’, ‘ಅನುಜಾ’:
ಬ್ರಿಟಿಷ್ ಭಾರತೀಯ ಚಿತ್ರ ನಿರ್ಮಾಪಕ ಸಂಧ್ಯಾ ಸೂರಿ ಅವರ ‘ಸಂತೋಷ್’ ಹಿಂದಿ ಭಾಷೆಯ ಅಪರಾಧ ಕಥಾ ಹಂದರ ಒಳಗೊಂಡಿರುವ ಸಿನಿಮಾ ಆಗಿದ್ದು, ಶಹನಾ ಗೋಸ್ವಾಮಿ ಮತ್ತು ಸುನೀತಾ ರಾಜ್ವರ್ ನಟಿಸಿದ್ದಾರೆ. ಇದು ಬ್ರಿಟನ್‌ನಿಂದ ನಾಮನಿರ್ದೇಶನ ಪಡೆದಿರುವ ಅಧಿಕೃತ ಚಿತ್ರ.
‘ಸಂತೋಷ್’ ಜತೆಗೆ ‘ಅನುಜಾ’ (ಕಿರುಚಿತ್ರ) ಆಸ್ಕರ್ ಪ್ರಶಸ್ತಿಯ ಮುಂದಿನ ಹಂತಕ್ಕೆ ತಲುಪಿದ ಭಾರತೀಯ ಸಂಪರ್ಕ ಹೊಂದಿರುವ ಮತ್ತೊಂದು ಚಿತ್ರವಾಗಿದೆ. ಅದು ‘ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್’ ವಿಭಾಗದಲ್ಲಿ ಆಯ್ಕೆಯಾದ 15 ಚಲನಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಆಡಂ ಜೆ ಗ್ರೇವ್ಸ್ ಮತ್ತು ಸುಚಿತ್ರಾ ಮಟ್ಟೈ ಅವರು ‘ಅನುಜಾ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಬಾಲ ಕಾರ್ಮಿಕ ಪದ್ಧತಿ ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತದೆ. ಎರಡು ಬಾರಿ ಆಸ್ಕರ್ ವಿಜೇತ ನಿರ್ಮಾಪಕ ಗುನೀತ್ ಮೊಂಗಾ ಕಾರ್ಯ ನಿರ್ವಾಹಕ ನಿರ್ಮಾಪಕರಾಗಿದ್ದು, ಹಾಲಿವುಡ್‌ನ ಪ್ರಸಿದ್ಧ ಲೇಖಕ ಮಿಂಡಿ ಕಾಲಿಂಗ್ ನಿರ್ಮಾಪಕರಾಗಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ 2025ರ ಮಾರ್ಚ್ 2ರಂದು ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.