ADVERTISEMENT

ವಿಕ್ಕಿ ವರುಣ್ ಸಂದರ್ಶನ: ‘ಫಲಿತಾಂಶಕ್ಕಾಗಿ ಕಾಯುತ್ತಿರುವೆ’

ವಿನಾಯಕ ಕೆ.ಎಸ್.
Published 13 ಸೆಪ್ಟೆಂಬರ್ 2024, 0:07 IST
Last Updated 13 ಸೆಪ್ಟೆಂಬರ್ 2024, 0:07 IST
<div class="paragraphs"><p>ವಿಕ್ಕಿ ವರುಣ್</p></div>

ವಿಕ್ಕಿ ವರುಣ್

   
ವಿಕ್ಕಿ ವರುಣ್‌ ನಟಿಸಿ, ನಿರ್ದೇಶಿಸಿರುವ ‘ಕಾಲಾಪತ್ಥರ್‌’ ಚಿತ್ರ ಇಂದು (ಸೆ.13) ತೆರೆಗೆ ಬರುತ್ತಿದೆ. ತಮ್ಮ ಪಾತ್ರ ಹಾಗೂ ನಿರ್ದೇಶನದ ಬಗ್ಗೆ ಮಾತನಾಡಿದ್ದಾರೆ.

ಚಿತ್ರದಲ್ಲಿ ನಿಮ್ಮ ಪಾತ್ರವೇನು?

ಶಂಕರ್‌ ಎಂಬ ಪಾತ್ರ ಮಾಡಿದ್ದೇನೆ. ಈತ ಗಡಿ ಭದ್ರತಾ ಪಡೆಯ(ಬಿಎಸ್‌ಎಫ್‌) ಯೋಧ. ಆದರೆ ಇದು ಸೈನ್ಯದ ಕುರಿತಾದ ಕಥೆಯಲ್ಲ. ಸೇನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಕುರಿತಾದ ಚಿತ್ರ. ಆತನ ವೈಯಕ್ತಿಕ ಬದುಕಿನ ಸುತ್ತ ಚಿತ್ರ ಸಾಗುತ್ತದೆ.‌ ಕುಟುಂಬ, ಸಂಬಂಧ ಮೊದಲಾದ ಸಂಗತಿಗಳಿವೆ.

ADVERTISEMENT

ಎಲ್ಲೆಲ್ಲಿ ಚಿತ್ರೀಕರಣಗೊಂಡಿದೆ?

ಜಮ್ಮು–ಕಾಶ್ಮೀರ, ರಾಜಸ್ಥಾನ, ವಿಜಯಪುರ, ಬೆಂಗಳೂರು, ಸಕಲೇಶಪುರ ಮೊದಲಾದೆಡೆ ಚಿತ್ರೀಕರಣ ಮಾಡಿದ್ದೇವೆ.

ಇದು ನೈಜಘಟನೆ ಆಧಾರಿತ ಚಿತ್ರವೇ?

ಇಲ್ಲ, ಇದು ಯಾವ ವ್ಯಕ್ತಿಗೂ ಸಂಬಂಧಿತ ಕಥೆಯಲ್ಲ. ಸೈನಿಕನ ಬದುಕಿನ ಕಥೆಯಾಗಿದ್ದರಿಂದ ಆ ಜಾಗಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಆದರೆ ಸಂಪೂರ್ಣ ಕಾಲ್ಪನಿಕ. ಯಾವುದೇ ಜಾತಿ, ಪಂಗಡ, ಪ್ರದೇಶಕ್ಕೆ ಸೀಮಿತ ಕಥೆಯೂ ಅಲ್ಲ.

ಚಿತ್ರದಲ್ಲಿ ‘ಕಾಲಾಪತ್ಥರ್‌’ ಎಂದರೇನು?

ಒಂದು ಕಪ್ಪುಕಲ್ಲು. ಉತ್ತರ ಭಾರತದ ವ್ಯಕ್ತಿಯೊಬ್ಬ ಶಿಲೆಗೆ ಇಟ್ಟ ನೆಚ್ಚಿನ ಹೆಸರು ‘ಕಾಲಾಪತ್ಥರ್‌’. ಆದರೆ ಇದಕ್ಕೂ ಬಾಲಿವುಡ್‌ನ ‘ಕಾಲಾಪತ್ಥರ್‌’ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರ ನೋಡಿದಾಗ ಇದೇ ಶೀರ್ಷಿಕೆ ಏಕೆ ಎಂಬುದು ಗೊತ್ತಾಗುತ್ತದೆ.

ನಟನೆಯಿಂದ ನಿರ್ದೇಶನದತ್ತ ಹೊರಳಿದ್ದು ಯಾಕೆ?

ನಿರ್ದೇಶಕನಾಗಬೇಕೆಂಬ ಕನಸಿನೊಂದಿಗೆ 2009ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟೆ. ‘ದುನಿಯಾ’ ಸೂರಿ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡೆ. ಅವರು ನಟನೆಗೆ ಅವಕಾಶ ನೀಡಿದರು. ‘ಕೆಂಡಸಂಪಿಗೆ’ ಚಿತ್ರದಲ್ಲಿ ನಾಯಕನನ್ನಾಗಿ ಮಾಡಿದರು. ಆದರೆ ನಿರ್ದೇಶಕನಾಗಬೇಕೆಂಬ ನನ್ನೊಳಗಿನ ಹಂಬಲ ಹಾಗೆಯೇ ಉಳಿದಿತ್ತು. ಅದು ಈ ಚಿತ್ರದ ಮೂಲಕ ಈಡೇರುತ್ತಿದೆ.

ಹದಿನೈದು ವರ್ಷದ ಸಿನಿಪಯಣ ಹೇಗಿತ್ತು?

ಸಿನಿಮಾ ನನಗೆ ಬದುಕು, ಹೆಸರು ಎಲ್ಲವನ್ನೂ ನೀಡಿದೆ. ಏಳು, ಬೀಳುಗಳ ನಡುವೆಯೂ ಈ ಕ್ಷೇತ್ರ ಆಯ್ದುಕೊಂಡಿದ್ದಕ್ಕೆ ನನಗೆ ಸಂಪೂರ್ಣ ಖುಷಿಯಿದೆ.

ಏಳು ವರ್ಷದ ಹಳೆಯ ಕಥೆ ಎಂದಿದ್ದೀರಿ, ಇಂದಿಗೆ ಎಷ್ಟು ಪ್ರಸ್ತುತ?

ಕಥೆಯ ಎಳೆ ಹಳತು. ಹಾಗೆ ನೋಡಿದರೆ ಸುರೇಂದ್ರನಾಥ್‌ ಅವರು 1993ರಲ್ಲಿ ಬರೆದ ಕಥೆ 2015ರಲ್ಲಿ ‘ಕೆಂಡಸಂಪಿಗೆ’ ಸಿನಿಮಾವಾಗಿ ತೆರೆಯ ಮೇಲೆ ಬಂದಿತ್ತು. ಚಿತ್ರಕಥೆಯನ್ನು ಆವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಮಾಡಿಕೊಳ್ಳಲಾಗಿತ್ತು. ‘ಕಾಲಾಪತ್ಥರ್‌’ ಚಿತ್ರಕಥೆಯನ್ನು ಇವತ್ತಿಗೆ ತಕ್ಕಂತೆ ಮಾಡಿಕೊಂಡಿದ್ದೇವೆ.

ಹೊಸಬರ ಸಿನಿಮಾಕ್ಕೆ ಇರುವ ಸವಾಲುಗಳೇನು?

ಇವತ್ತು ಸಿನಿಮಾ ಪೂರ್ಣಗೊಳಿಸುವುದು ಸುಲಭವಾಗಿದೆ. ಸಾಕಷ್ಟು ತಂತ್ರಜ್ಞಾನವಿದೆ. ಆದರೆ ಸಿನಿಮಾ ಮಾಡಿದ ನಂತರ ಜನರಿಗೆ ತಲುಪಿಸುವುದು, ಪ್ರಚಾರ, ಬಿಡುಗಡೆ ಬಹಳ ಕಷ್ಟ. ಎಷ್ಟು ಪ್ರಚಾರ ಮಾಡಿದರೂ ಸಾಲದು ಎಂಬಂತಿದೆ. ಒಮ್ಮೆ ಜನಕ್ಕೆ ತಲುಪಿದರೆ ತಾನಾಗಿಯೇ ಸಿನಿಮಾ ಯಶಸ್ವಿಯಾಗುತ್ತದೆ. ಎಷ್ಟೇ ಪ್ರಚಾರ ಮಾಡಿದರೂ ಸಿನಿಮಾದ ಒಳಗೆ ಜೀವ ಇರಬೇಕು, ಸತ್ವ ಬೇಕು. ಗಟ್ಟಿಯಾದ ಕಥೆ ಬೇಕು. ಆಗ ಮಾತ್ರ ಜನ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ. ಇದು ನಮ್ಮ ಸಿನಿಮಾಗೆ ಮಾತ್ರವಲ್ಲ. ಎಲ್ಲ ಸಿನಿಮಾಗಳಿಗೂ ಅನ್ವಯವಾಗುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ, ಕಷ್ಟಪಟ್ಟರೂ ಜನರು ನೀಡುವ ತೀರ್ಪು ಅಂತಿಮ. ಅವರಿಗೆ ಸಿನಿಮಾ ಇಷ್ಟವಾಗಬೇಕು. ಅವರ ಫಲಿತಾಂಶಕ್ಕೆ ಕಾಯುತ್ತಿರುವೆ.

ನಿಮ್ಮ ಮುಂದಿನ ಸಿನಿಮಾಗಳು...

ಒಂದು ಸಿನಿಮಾಕ್ಕೆ ನಟನಾಗಿ ಅವಕಾಶ ಬಂದಿದೆ. ನನ್ನ ನಿರ್ದೇಶನದ ಮತ್ತೊಂದು ಸಿನಿಮಾ ಮಾತುಕತೆ ಹಂತದಲ್ಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.