ADVERTISEMENT

Interview | ಗೆದ್ದವರಿಂದಷ್ಟೇ ಉದ್ಯಮವಲ್ಲ: ನೀನಾಸಂ ಸತೀಶ್‌

ವಿನಾಯಕ ಕೆ.ಎಸ್.
Published 6 ಡಿಸೆಂಬರ್ 2024, 0:24 IST
Last Updated 6 ಡಿಸೆಂಬರ್ 2024, 0:24 IST
<div class="paragraphs"><p>ನೀನಾಸಂ ಸತೀಶ್‌</p></div>

ನೀನಾಸಂ ಸತೀಶ್‌

   
ನೀನಾಸಂ ಸತೀಶ್‌, ರಚಿತಾ ರಾಮ್‌ ಜೋಡಿಯಾಗಿ ನಟಿಸಿದ್ದ ‘ಅಯೋಗ್ಯ’ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಇದೀಗ ಅದೇ ಜೋಡಿಯ ‘ಅಯೋಗ್ಯ–2’ ಚಿತ್ರ ಸೆಟ್ಟೇರುತ್ತಿದೆ. ಚಿತ್ರ ಹಾಗೂ ತಮ್ಮ ಸಿನಿಪಯಣದ ಕುರಿತು ನೀನಾಸಂ ಸತೀಶ್‌ ಮಾತನಾಡಿದ್ದಾರೆ.

ಅಯೋಗ್ಯ ಕಥೆಯ ಮುಂದುವರಿಕೆಯಾ?

ಹೌದು, ಅಯೋಗ್ಯ ಚಿತ್ರದ ಕಥೆಯೇ ಮುಂದುವರಿಯುತ್ತದೆ. ಅದೊಂದು ದ್ವೇಷ ತೀರಿಸಿಕೊಳ್ಳುವ ಕಥೆ. ಊರಿನ ಮುಖಂಡನ ವಿರುದ್ಧ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ನಾಯಕ ಊರಿನಲ್ಲಿ ಬಾಕಿ ಉಳಿದ ಕೆಲಸಗಳನ್ನು ಮುಗಿಸುತ್ತಾನಾ? ಕೊಟ್ಟ ಆಶ್ವಾಸನೆಗಳನ್ನು ಪೂರೈಸುತ್ತಾನಾ? ಎಂಬಿತ್ಯಾದಿ ವಿಷಯಗಳನ್ನು ಇಟ್ಟುಕೊಂಡು ಕಥೆ ಮಾಡಿದ್ದೇವೆ. ಬಹುತೇಕ ‘ಅಯೋಗ್ಯ’ದ ತಂಡವೇ ಇದೆ. ನಿರ್ಮಾಪಕರು ಮಾತ್ರ ಬೇರೆ. ಆರು ವರ್ಷಗಳ ಹಿಂದೆ ‘ಅಯೋಗ್ಯ’ ಬಂದಿದ್ದು. ಆ ಸಮಯ ಬೇರೆಯಾಗಿತ್ತು.ಈಗಿನ ಸಮಯವೇ ಬೇರೆ. ಕೋವಿಡ್‌ ನಂತರ ಜನ ಸಿನಿಮಾ ನೋಡುವ ರೀತಿ ಬದಲಾಗಿದೆ. 

ADVERTISEMENT

ಚಿತ್ರೀಕರಣ ಯಾವಾಗಿನಿಂದ? ಈ ಭಾಗ ಎಷ್ಟು ಭಿನ್ನ?

ಡಿ.11ರಿಂದ ಮಂಡ್ಯದ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇದು ಆ ಭಾಗಕ್ಕಿಂತ ಅದ್ದೂರಿಯಾಗಿರಲಿದೆ. ಜೊತೆಗೆ ಬಜೆಟ್‌ ಕೂಡ ಸ್ವಲ್ಪ ಹೆಚ್ಚಿದೆ. ಹೀಗಾಗಿ ನಿರ್ಮಾಣ ಸಂಸ್ಥೆ ಬದಲಾಗಿದೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ಕಥೆ ಮಾಡಿಕೊಂಡಿದ್ದೇವೆ. ಪಾತ್ರಗಳು ಬದಲಾಗುವುದಿಲ್ಲ. ಅವುಗಳ ಪೋಷಣೆ ಸ್ವಲ್ಪ ಬದಲಾಗುತ್ತದೆ. 

ನಿಮ್ಮ ‘ಅಶೋಕ ಬ್ಲೇಡ್’ ಚಿತ್ರ ಯಾವ ಹಂತದಲ್ಲಿದೆ? 

ಶೇಕಡ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಜನವರಿಯಿಂದ ಮತ್ತೆ ಚಿತ್ರೀಕರಣ ಪ್ರಾರಂಭವಾಗಲಿದೆ. ಶೀರ್ಷಿಕೆ ‘ದಿ ರೈಸ್‌ ಆಫ್‌ ಅಶೋಕ’ ಎಂದು ಬದಲಾಗಿದೆ. ಅತಿಯಾದ ಬಜೆಟ್‌ನಿಂದ ಸಿನಿಮಾ ನಿಂತಿದೆ ಎಂಬುದೆಲ್ಲ ವಂದತಿ ಅಷ್ಟೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ಬಿಡುಗಡೆಯಾದಾಗ ಎಲ್ಲರಿಗೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ವೃದ್ಧಿ ಕ್ರಿಯೇಷನ್ಸ್‌ ಜೊತೆ ನಾನು ಕೂಡ ಈ ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿದ್ದೇನೆ. ಪ್ರತಿ ನಾಯಕನಿಗೂ ತಾನು ಎಷ್ಟು ರಿಕವರ್‌ ಮಾಡಬಲ್ಲೆ ಎಂಬ ಅರಿವು ಇರುತ್ತದೆ. ಅದಕ್ಕಿಂತ ಹೆಚ್ಚು ಬಜೆಟ್‌ ಖರ್ಚು ಮಾಡಿಕೊಳ್ಳಬಾರದು. 

ಹಿಂದಿನ ಸಿನಿಮಾ ‘ಮ್ಯಾಟ್ನಿ’ ಉತ್ತಮ ಗಳಿಕೆ ಕಂಡಿದೆಯಾ?

‘ಮ್ಯಾಟ್ನಿ’ ನಾವು ಅಂದುಕೊಂಡಷ್ಟು ಮಟ್ಟಕ್ಕೆ ತಲುಪಲಿಲ್ಲ. ಆದರೆ ನಷ್ಟವಾಗಲಿಲ್ಲ. ಚಿತ್ರದ ಹಕ್ಕುಗಳೆಲ್ಲ ಮಾರಾಟವಾಗಿವೆ. ಟಿವಿಯಲ್ಲಿಯೂ ಉತ್ತಮ ರೇಟಿಂಗ್‌ ಬಂದಿತ್ತು. ಚಿತ್ರಮಂದಿರಗಳಲ್ಲಿಯೂ ಗಳಿಕೆ ಕಳಪೆಯಾಗಿರಲಿಲ್ಲ. ಚಿತ್ರೋದ್ಯಮ ಎಂದರೆ ಕೇವಲ ಗೆಲುವು ಮಾತ್ರವಲ್ಲ. ಸೋಲು, ಗೆಲುವು ಎರಡೂ ಇರುತ್ತದೆ. ಚಿತ್ರೋದ್ಯಮದಿಂದ ಸಾವಿರಾರು ಜನ ಊಟ ಮಾಡುತ್ತಿದ್ದಾರೆ. ಇದೇ ಕೆಲಸ ನಂಬಿಕೊಂಡಿದ್ದಾರೆ. ಅಂಥವರಿಗೆಲ್ಲ ಚಿತ್ರೋದ್ಯಮದ ಅನ್ನ ನೀಡುತ್ತಿದೆ. ಹೀಗಾಗಿ ಸೋತ ಚಿತ್ರಗಳನ್ನು ತಾತ್ಸಾರ ಮಾಡುವುದು ಸರಿಯಲ್ಲ. ಒಬ್ಬ ನಾಯಕ ಎಲ್ಲ ಸಿನಿಮಾಗಳು ನಿರಂತರವಾಗಿ ಗೆಲ್ಲಲ್ಲು ಸಾಧ್ಯವಿಲ್ಲ. ವರ್ಷಕ್ಕೆ 150–200 ಚಿತ್ರಗಳಾಗುತ್ತವೆ. ಅದರಲ್ಲಿ ಗೆಲುವುದೆಷ್ಟು ಎಂಬುದನ್ನು ನಾವು ನೋಡುತ್ತಲೇ ಇದ್ದೇವೆ. ಆದರೆ ಕೇವಲ ಗೆದ್ದ ಚಿತ್ರಗಳಿಂದ ಉದ್ಯಮ ಉಳಿದಿಲ್ಲ. ಈ 200 ಸಿನಿಮಾಗಳಿಂದ ಚಿತ್ರೋದ್ಯಮ ಜೀವಂತವಾಗಿರುವುದು ಎಂಬುದನ್ನು ಮರೆಯಬಾರದು.

ನಿಮ್ಮ ಮುಂದಿನ ಯೋಜನೆಗಳು?

ಸದ್ಯ ಇವೆರಡು ಸಿನಿಮಾಗಳನ್ನು ಮುಗಿಸಿಕೊಳ್ಳುವ ಯತ್ನದಲ್ಲಿರುವೆ. ಹೊಸದು ಒಪ್ಪಿಕೊಳ್ಳುತ್ತಿಲ್ಲ. ಇನ್ನೊಂದು ಕಥೆ ಕೇಳಿರುವೆ. ಒಪ್ಪಿಕೊಂಡ ಕೆಲಸಗಳು ಮುಗಿದ ಮೇಲೆ ಆ ಸಿನಿಮಾ ಘೋಷಿಸುತ್ತೇವೆ. ಈಗಲೇ ಅದರ ಬಗ್ಗೆ ಹೆಚ್ಚು ಮಾಹಿತಿ ನೀಡಲಾರೆ.

ನಿಮ್ಮ ನಿರ್ಮಾಣ ಸಂಸ್ಥೆಯಿಂದ ಸಿನಿಮಾಗಳನ್ನು ಮಾಡುವಿರಾ?

ಮೊದಲೇ ಹೇಳಿದಂತೆ ‘ಅಶೋಕ’ ಚಿತ್ರದಲ್ಲಿ ಕೈಜೋಡಿಸಿರುವೆ. ಅದು ನಮ್ಮ ನಿರ್ಮಾಣ ಸಂಸ್ಥೆ ಸಹಭಾಗಿತ್ವದ ಎರಡನೇ ಸಿನಿಮಾ. ನಾನೇ ಒಂದು ಕತೆ ಬರೆಯುತ್ತಿದ್ದೇನೆ. ಅದನ್ನು ಮುಂದಿನ ವರ್ಷ ನಮ್ಮ ನಿರ್ಮಾಣ ಸಂಸ್ಥೆಯಿಂದಲೇ ಸಿನಿಮಾ ಮಾಡುತ್ತೇನೆ. ‘ವೃತ್ತ’ ಎಂಬ ಹೊಸಬರ ಸಿನಿಮಾವನ್ನು ಪ್ರೆಸೆಂಟ್‌ ಮಾಡುತ್ತಿರುವೆ. ಬಹಳ ಚೆನ್ನಾಗಿದೆ. ‘ಲೂಸಿಯಾ’ ನಂತರ ಬಂದಿರುವ ಅಂಥದ್ದೇ ರೀತಿಯ ಸಿನಿಮಾವಿದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.