ADVERTISEMENT

ಐ.ಟಿ ದಾಳಿ ಪ್ರಕರಣ: ನಟಿ ರಶ್ಮಿಕಾ ಮಂದಣ್ಣಗೆ ಸಮನ್ಸ್ ಜಾರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 12:45 IST
Last Updated 18 ಜನವರಿ 2020, 12:45 IST
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ   

ಮಡಿಕೇರಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತೊಂದು ಸಮನ್ಸ್‌ ಜಾರಿಗೊಳಿಸಿದ್ದಾರೆ. ಹೂಡಿಕೆ ಹಾಗೂ ಬ್ಯಾಂಕ್‌ ವ್ಯವಹಾರಗಳ ದಾಖಲೆ ಸಹಿತ ಮೈಸೂರಿನ ಐ.ಟಿ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತೆರಿಗೆ ವಂಚನೆಯ ಆರೋಪದ ಮೇಲೆ ಜನವರಿ 16ರಂದು ವಿರಾಜಪೇಟೆಯ ಕುಕ್ಲೂರಿನ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲಾತಿ ಪರಿಶೀಲಿಸಿದ್ದರು. ರಶ್ಮಿಕಾ, ಅವರ ತಂದೆ ಮದನ್‌ ಮಂದಣ್ಣ, ತಾಯಿ ಸುಮನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಈಗ ಮತ್ತೆ ವಿಚಾರಣೆಗೆ ಕರೆಯಲಾಗಿದೆ.

ದಾಳಿಯ ವೇಳೆ ನಗದು ಹಾಗೂ ಅಘೋಷಿತ ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ. ರಶ್ಮಿಕಾ ಅವರು ಆದಾಯ ತೆರಿಗೆ ಸಲ್ಲಿಕೆಯಲ್ಲಿ ಲೋಪ ಎಸಗಿರುವುದು ಕಂಡುಬಂದಿದೆ. ಮದನ್‌ ಮಂದಣ್ಣ ಒಡೆತನದ ಕಲ್ಯಾಣ ಮಂಟಪದ ವ್ಯವಹಾರದ ಮಾಹಿತಿಯನ್ನು ಮುಚ್ಚಿಟ್ಟ ಆಪಾದನೆ ಮೇಲೆ ಈ ದಾಳಿ ನಡೆದಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಕಾಫಿ ತೋಟ, ಹೊಸದಾಗಿ ಖರೀದಿಸಿದ್ದ ಜಾಗ, ಬಿಟ್ಟಂಗಾಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ವಸತಿಯುತ ಶಾಲೆ ಹಾಗೂ ಪೆಟ್ರೋಲ್‌ ಬಂಕ್‌ ಜಾಗದ ದಾಖಲಾತಿಯನ್ನೂ ದಾಳಿಯ ವೇಳೆ ಅಧಿಕಾರಿಗಳು ಪರಿಶೀಲಿಸಿದ್ದರು.

ತಪ್ಪು ಮಾಹಿತಿ– ನೋವು: ‘ಯಾರದೋತಪ್ಪು ಮಾಹಿತಿಯಿಂದ ಮನೆಯ ಮೇಲೆ ಐ.ಟಿ ದಾಳಿಯಾಗಿದೆ. ನಾನು ಈಗ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಯಾವುದೇ ಅವ್ಯವಹಾರ ನಡೆಸಿಲ್ಲ’ ಎಂದು ರಶ್ಮಿಕಾ ತಂದೆ ಮದನ್‌ ತಮ್ಮ ಸ್ನೇಹಿತರೊಂದಿಗೆ ನೋವು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.