ADVERTISEMENT

ತಮಾಷೆಯೊಳಗಿನ ತಿರುಳೇ ತೋತಾಪುರಿ: ಅದಿತಿ ಪ್ರಭುದೇವ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 21:30 IST
Last Updated 29 ಸೆಪ್ಟೆಂಬರ್ 2022, 21:30 IST
ಅದಿತಿ ಪ್ರಭುದೇವ
ಅದಿತಿ ಪ್ರಭುದೇವ   

ಶಕೀಲಾ ಬಾನು ಹೆಸರಿನಲ್ಲಿ ಪರಕಾಯ ಪ್ರವೇಶ ಮಾಡಿರುವ ದಾವಣಗೆರೆಯ ಹುಡುಗಿ ಅದಿತಿ ಪ್ರಭುದೇವ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾವು ಸಹಜವಾಗಿರುವುದನ್ನು ತೋರಿಸಿರುವ ಪಾತ್ರವಿದು. ತಮಾಷೆಯ ಜೊತೆ ಪರಿಣಾಮಕಾರಿ ಸಂದೇಶ ಕೊಟ್ಟಿದ್ದೇವೆ ಎನ್ನುವ ಅದಿತಿ, ಪ್ರೇಕ್ಷಕರು ‘ತೋತಾಪುರಿ’ಯನ್ನು ಖಂಡಿತಾ ಸವಿಯುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.

‘ಶಕೀಲಾಬಾನು’ ಪಾತ್ರ ಪ್ರವೇಶ ಹೇಗಿತ್ತು?

– ತುಂಬಾ ಬದಲಾಗಿಬಿಟ್ಟೆ. ಮುಸ್ಲಿಂ ಸಮುದಾಯದ ಹುಡುಗಿಯ ಪಾತ್ರ ನನ್ನದು. ತುಂಬಾ ಗೌರವದಿಂದ ಬಾಳುವ ತುಂಬು ಕುಟುಂಬದ, ಸ್ವಾವಲಂಬಿ ಹುಡುಗಿ. ಅಪ್ಪಟ ಕನ್ನಡತಿ. ಮುಸ್ಲಿಮರು ಕನ್ನಡ ಸರಿಯಾಗಿ ಮಾತನಾಡುವುದಿಲ್ಲ ಎಂಬ ಪೂರ್ವಗ್ರಹ ಇದೆಯಲ್ಲಾ, ಅದನ್ನೆಲ್ಲಾ ನಿವಾರಿಸಿದ್ದೇವೆ. ಶಕೀಲಾ ಸ್ಪಷ್ಟ ಕನ್ನಡ ಮಾತನಾಡುತ್ತಾಳೆ. ಚಿತ್ರದಲ್ಲಿ ಬರುವ ಅಷ್ಟೂ ಪಾತ್ರಗಳ ಮೂಲಕ ಜೀವನೋತ್ಸಾಹ ಮತ್ತು ಜೀವನ ಮೌಲ್ಯಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇವೆ.ಈ ಪಾತ್ರದಲ್ಲಿ ಲಘುತ್ವವೂ ಇದೆ. ಗಟ್ಟಿಗಿತ್ತಿ, ನವಿರುತನ, ತಮಾಷೆ ಎಲ್ಲವೂ ಇದೆ.

ತಮಾಷೆಯ ಮೂಲಕ ಏನು ಹೇಳಲು ಹೊರಟಿದ್ದೀರಿ?

ADVERTISEMENT

ಇಲ್ಲಿ ಮೇಲ್ನೋಟಕ್ಕೆ ಕಾಣುವುದು ತಮಾಷೆ. ಆದರೆ, ಪ್ರತಿ ಪಾತ್ರಗಳು ಎರಡು ಛಾಯೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಒಮ್ಮೆ ತಮಾಷೆ, ಪೋಲಿತನದಿಂದ ಮಾತನಾಡಿದರೆ ಮತ್ತೊಮ್ಮೆ ಇದ್ದಕ್ಕಿದ್ದಂತೆಯೇ ಗಂಭೀರ ಸಂದೇಶವನ್ನು ಕೊಡುತ್ತವೆ. ಉದಾಹರಣೆಗೆ ಮಗುವಿನ ಜಾತಿ ಯಾವುದೆಂದು ಬರೆಯಲಿ ಎಂದು ಕೇಳುವ ಟೀಚರ್‌ಗೆ ಆ ಸಾಕುತಾಯಿಯು ‘ಭಾರತೀಯ’ ಎಂದು ಬರೆಯಿರಿ ಎಂದು ಹೇಳುತ್ತಾಳಲ್ಲಾ... ಎಂತಹ ಗಟ್ಟಿತನ ಇದೆ ಅದರಲ್ಲಿ. ಸಂದೇಶ ಅಂದರೆ ಇಲ್ಲಿ ಉಪದೇಶ, ಭಾಷಣಗಳು ಅಲ್ಲ. ನವಿರಾಗಿ ತೋರಿಸುತ್ತಲೇ ಹೋಗಿದ್ದೇವೆ.

ಜಾತಿ, ಧರ್ಮ ಇತ್ಯಾದಿ ನಾವು ತೊಟ್ಟ ವೇಷಗಳು ಅಷ್ಟೇ. ಆದರೆ ಮನುಷ್ಯರಾಗಿ ಹುಟ್ಟಿದ ಮೇಲೆ ಮಾನವೀಯತೆಯಿಂದ, ಸೌಹಾರ್ದದಿಂದ ಬಾಳಬೇಕು. ಇದು ಚಿತ್ರದ ಸಂದೇಶ. ಪೂರ್ತಿ ಸಿನಿಮಾ ನೋಡಿದಾಗ ಇದು ಅರ್ಥವಾಗುತ್ತದೆ.

‘ಈರೇಗೌಡ’ (ಜಗ್ಗೇಶ್‌)ನ ಜೊತೆಗಿನ ‘ಶಕೀಲಾ ಬಾನು’ ಕಾಂಬಿನೇಷನ್‌ ಬಗ್ಗೆ?

ಅದೊಂದು ಅದ್ಭುತ ಅನುಭವ. ಜಗ್ಗೇಶ್‌ ಅವರ ಜೊತೆ ಮೂರು ನಿಮಿಷ ಇದ್ದರೇನೇ ಸಾಕಷ್ಟು ಸ್ಫೂರ್ತಿ ಪಡೆಯುತ್ತೇವೆ. ಅಂಥಾದ್ದರಲ್ಲಿ 75 ದಿನ ಕಳೆದೆವಲ್ಲಾ. ಅಬ್ಬಾ... ಅದೆಷ್ಟು ನಕ್ಕಿದ್ದೆವು ಗೊತ್ತಾ? ಅವರಿಂದ ಜೀವನ ಪಾಠಗಳನ್ನು ಸಾಕಷ್ಟು ಕಲಿತಿದ್ದೇನೆ. ಅವರು ಅನುಭವಿಸಿದ ಕಷ್ಟ, ಸಂಕಟಗಳನ್ನು ತುಂಬಾ ತಮಾಷೆಯಾಗಿ ಹೇಳುತ್ತಾ ಹೋಗುತ್ತಾರೆ. ಸ್ವಲ್ಪ ಆಲೋಚಿಸಬೇಕು. ಆ ಎಲ್ಲ ವಿಚಾರಗಳು ತಲೆಯಲ್ಲಿ ಉಳಿದುಬಿಡುತ್ತವೆ.

ಮುಂಬರುವ ಚಿತ್ರಗಳು?

ಚಾಂಪಿಯನ್‌, ಜಮಾಲಿಗುಡ್ಡ, ಟ್ರಿಪಲ್‌ ರೈಡಿಂಗ್‌ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಮಾಫಿಯಾ ಚಿತ್ರೀಕರಣ ಸಾಗಿದೆ. ಹೊಸ ಚಿತ್ರಗಳೂ ಸೆಟ್ಟೇರಿವೆ.

ಅಭಿಮಾನಿಗಳಿಗೆ ನಿಮ್ಮ ಮಾತು?

ಸಿನಿಮಾ, ಹೆಸರು ಇದನ್ನೆಲ್ಲಾ ಕನಸು ಕಂಡವಳೂ ಅಲ್ಲ. ಜವಾಬ್ದಾರಿಯುತವಾಗಿ, ಯಾರಿಗೂ ಹೊರೆಯಾಗದೆ ಬಾಳಬೇಕು ಎಂದುಕೊಂಡಿದ್ದವಳು. ನಿರೂಪಣೆ... ಇತ್ಯಾದಿ ಆಸಕ್ತಿ ಇತ್ತು. ಆಕಸ್ಮಿಕವಾಗಿ ಈ ಕ್ಷೇತ್ರ ಗುರುತಿಸಿ ಕರೆಯಿತು. ಸ್ವಲ್ಪ ಶ್ರಮ ವಹಿಸಬೇಕು. ಸವಾಲುಗಳನ್ನು ಎದುರಿಸಬೇಕು. ಈಗ ಇಲ್ಲಿ ತುಂಬಾ ಸುರಕ್ಷಿತವಾಗಿಯೇ ಇದ್ದೇನೆ. ಸರಳ ಬದುಕು ನಡೆಸುತ್ತಾ ತುಂಬಾ ಖುಷಿಯಾಗಿದ್ದೇನೆ. ಅಭಿಮಾನಿಗಳು ಚಿತ್ರ ನೋಡಿ ಖುಷಿಪಟ್ಟು ಹರಸಿದರೆ ಅದೇ ಖುಷಿ.

****

ಜಗ್ಗೇಶ್

ಸಿನಿ ಬದುಕಿಗೆ ಈ ಚಿತ್ರ ನವಿಲುಗರಿ:ಜಗ್ಗೇಶ್‌

ಈ ಚಿತ್ರಕ್ಕೆ ಯಾವ ಬೇಲಿಯೂ ಇಲ್ಲ. ಇದು ಸಹಜತೆ ತುಂಬಿದ ಚಿತ್ರ. ನನ್ನದು ಗ್ರಾಮೀಣ ಪ್ರದೇಶದ ಗಲ್ಲಿಯಲ್ಲಿ ಟೈಲರ್‌ನ ಪಾತ್ರ. ನನ್ನ ಜೊತೆ ಇರುವವೂ ಕೂಡಾ ಅತ್ಯಂತ ಸಹಜವಾಗಿರುವ ಪಾತ್ರಗಳು. ನಾವು ಯಾವುದಾದರೂ ಒಂದು ಪ್ರಾಂತ್ಯದಲ್ಲಿದ್ದರೆ ಬೇರೆ ಬೇರೆ ಪಾತ್ರಗಳು ಹೇಗೆ ಸಂಪರ್ಕಕ್ಕೆ ಬರುತ್ತವೋ ಅದೇ ರೀತಿಯ ಸಹಜ ಸನ್ನಿವೇಶವನ್ನು ಇಲ್ಲಿ ಕೊಟ್ಟಿದ್ದೇವೆ.

ನಾವು ಒಳ್ಳೆಯ ಕಂಟೆಂಟ್‌ ಕೊಡಬೇಕು. ಯಾಕೆಂದರೆ ಪ್ರೇಕ್ಷಕನಿಗೆ ಸಾವಿರಾರು ಆಯ್ಕೆಗಳಿವೆ. ಈ ಸ್ಪರ್ಧೆಯಲ್ಲಿ ನೀವು ಗೆಲ್ಲಬೇಕಾದರೆ ಕಂಟೆಂಟ್‌ ಅದ್ಭುತವಾಗಿರಬೇಕು. ಸಹಜವಾಗಿರಬೇಕು.

ನನ್ನದು ಒಂಥರಾ ಅಬ್ಬೇಪಾರಿಯಂತಹ ಪಾತ್ರ. ಆದರೆ, ಆತ ಬಾಯಿ ತೆಗೆದರೆ ನಗಿಸುತ್ತಾನೆ. ವಿಷಯ ಮಾತನಾಡುತ್ತಾನೆ. ಬಹಳ ಆಳವಾಗಿ ಮಾತನಾಡುತ್ತಾನೆ. ತ್ಯಾಗಿ ತರಹ ಕಾಣಿಸುತ್ತಾನೆ. ತುಂಬಾ ಅರಿತ ದೇವತಾ ಮನುಷ್ಯ ಅಂತ ತೋರಿಸಿದ್ದಾರೆ. ಇದರಲ್ಲಿ ನಿರ್ದೇಶಕ ವಿಜಯ ಪ್ರಸಾದ್‌ ಬಹಳ ಆಳವಾಗಿ ಕೆಲಸ ಮಾಡಿ ಈ ಪಾತ್ರ ಸೃಷ್ಟಿಸಿ ಅದಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ.

ಈ ಚಿತ್ರದಿಂದ ಸಿನಿಮಾ ಕ್ಷೇತ್ರದಲ್ಲಿ ನನ್ನ ಆಯಸ್ಸು ಸುಮಾರು 5 ವರ್ಷ ಹೆಚ್ಚುತ್ತದೆ. ದತ್ತಣ್ಣ ಸೇರಿದಂತೆ ಸಹಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ನಾನು ಇವರಷ್ಟು ಚೆನ್ನಾಗಿ ಅಭಿನಯಿಸಿದ್ದೇನಾ ಎಂಬ ಅನುಮಾನವೂ ನನಗೆ ಮೂಡಿದೆ. ಪ್ರೀತಿ ಮತ್ತು ಸಾಮರಸ್ಯ ಇಟ್ಟುಕೊಂಡರೆ ಬಹುಶಃ ಯಾವ ಧರ್ಮವೂ ಅಡ್ಡ ಬರುವುದಿಲ್ಲ ಎಂಬುದು ನಿರ್ದೇಶಕರ ನಂಬಿಕೆ. ನನ್ನ ಬದುಕಿನಲ್ಲಿ ಈ ಚಿತ್ರ ಒಂದು ನವಿಲುಗರಿ.

–ಜಗ್ಗೇಶ್‌, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.