ADVERTISEMENT

ಪೈರಸಿ ವಿರುದ್ಧದ ಹೋರಾಟ ಬೆಂಬಲಿಸದ ಚಿತ್ರರಂಗ: ನಟ ಜಗ್ಗೇಶ್‌ ಬೇಸರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:36 IST
Last Updated 21 ಫೆಬ್ರುವರಿ 2026, 5:36 IST
ಮೈಸೂರು ಸಿನಿಮಾ ಸೊಸೈಟಿಯು ಮಹಾರಾಜ ಮೈದಾನದಲ್ಲಿ ಶುಕ್ರವಾರದಿಂದ ಆಯೋಜಿಸಿರುವ ‘ಪರಿದೃಶ್ಯ’ ಅಂತರರಾಷ್ಟ್ರೀಯ ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರ ಹಬ್ಬವನ್ನು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸಿದರು
ಮೈಸೂರು ಸಿನಿಮಾ ಸೊಸೈಟಿಯು ಮಹಾರಾಜ ಮೈದಾನದಲ್ಲಿ ಶುಕ್ರವಾರದಿಂದ ಆಯೋಜಿಸಿರುವ ‘ಪರಿದೃಶ್ಯ’ ಅಂತರರಾಷ್ಟ್ರೀಯ ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರ ಹಬ್ಬವನ್ನು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸಿದರು   

ಮೈಸೂರು: ‘ಸಿನಿಮಾ ಬಿಡುಗಡೆಯಾದರೂ, ಪೈರಸಿಯ ಕಾರಣದಿಂದ ಜನ ಥಿಯೇಟರ್‌ಗೆ ಬರದೆ ಮೊಬೈಲ್‌ನಲ್ಲೇ ವೀಕ್ಷಿಸುತ್ತಾರೆ. ಆ ಬಗ್ಗೆ ಹೋರಾಟ ಮಾಡಿದರೂ, ಸಿನಿಮಾ ಕ್ಷೇತ್ರದವರು ಬೆಂಬಲಕ್ಕೆ ಬರುತ್ತಿಲ್ಲ’ ಎಂದು ಚಲನಚಿತ್ರ ನಟ ಜಗ್ಗೇಶ್‌ ಬೇಸರ ವ್ಯಕ್ತಪಡಿಸಿದರು. 

ಮೈಸೂರು ಸಿನಿಮಾ ಸೊಸೈಟಿಯು ಇಲ್ಲಿನ ಮಹಾರಾಜ ಮೈದಾನದಲ್ಲಿ ಶುಕ್ರವಾರದಿಂದ ಆಯೋಜಿಸಿರುವ 4ನೇ ಆವೃತ್ತಿಯ ‘ಪರಿದೃಶ್ಯ’ ಅಂತರರಾಷ್ಟ್ರೀಯ ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರ ಹಬ್ಬ ಉದ್ಘಾಟಿಸಿ ಮಾತನಾಡಿದರು.

‘ಸಿನಿಮಾ ಕ್ಷೇತ್ರದಲ್ಲಿ ವಿಪುಲ ಅವಕಾಶವಿದೆ. ಹೆಸರಿಗಾಗಿ ಅಡ್ಡದಾರಿ ಹಿಡಿಯದೆ ಪರಿಶ್ರಮದಿಂದ ಕೆಲಸ ಮಾಡಿದರೆ ಈ ಕ್ಷೇತ್ರದಲ್ಲಿ ಛಾಪು ಮೂಡಿಸಲು ಸಾಧ್ಯ. ಜಪಾನ್‌ನಲ್ಲಿ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸುತ್ತಾರೆ. ಆದರೆ ಭಾರತದಲ್ಲಿ ಪೋಷಕರು ತಮ್ಮ ಇಚ್ಛೆಯನ್ನು ಮಕ್ಕಳಲ್ಲಿ ಈಡೇರಿಸಲು ಬಯಸಿ ಒತ್ತಡ ಹೇರುತ್ತಾರೆ. ಇದರಿಂದ ಅವರ ಕೌಶಲಕ್ಕೆ ವೇದಿಕೆ ದೊರೆಯುವುದಿಲ್ಲ. ಅವರ ಆಸಕ್ತಿಯನ್ನು ಬೆಂಬಲಿಸುವ ಕೆಲಸವಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಸಿನಿಮಾ ಕ್ಷೇತ್ರ ಪ್ರೋತ್ಸಾಹಿಸಲು ಪ್ರಸಾರ ಭಾರತಿ ಮೂಲಕ ‘ವೇವ್ಸ್‌’ ಒಟಿಟಿ ಆ್ಯಪ್‌ ಲೋಕಾರ್ಪಣೆ ಮಾಡಿದ್ದಾರೆ. ದೇಶದಲ್ಲಿ ಕೌಶಲಯುತ ಕೆಲಸಗಳಿಗೆ ಪ್ರೋತ್ಸಾಹ ದೊರೆಯುತ್ತಿದೆ. ಹೀಗಾಗಿ ಯುವ ಸಮೂಹ ತಮ್ಮ ಗುರಿಯ ಬಗ್ಗೆ ಚಿಂತಿಸಬೇಕು. ಪ್ರೇಕ್ಷಕರು ಸಿನಿಮಾ ನೋಡಿ ವಿಮರ್ಶಿಸಿ, ನೋಡದೆ ಅಭಿಪ್ರಾಯ ವ್ಯಕ್ತಪಡಿಸಿದರೆ, ಸಿನಿಮಾದ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

ಕೇಂದ್ರ ಸರ್ಕಾರವು ಪ್ಯಾಲೆಸ್ತೀನ್‌ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಮಾತುಗಳು ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಕೇಳಿಬಂದಿತ್ತು. ಆದರೆ ಅಲ್ಲೇ ಪ್ಯಾಲೆಸ್ತೀನಿಯರ ಬದುಕನ್ನು ತೋರಿಸುವ ‘ಪ್ಯಾಲೆಸ್ತೀನ್‌– 36’ ಚಿತ್ರ ಪ್ರದರ್ಶನವಾಯಿತು. ಸಾರ್ವತ್ರಿಕ ಸುಳ್ಳು ಹರಡುವುದನ್ನು ನಿಲ್ಲಿಸಲಿ.
ವಿ.ನಾಗೇಂದ್ರ ಪ್ರಸಾದ್‌, ಗೀತೆ ರಚನೆಕಾರ

ಲೇಖಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಮಾತನಾಡಿ, ‘ಸಿನಿಮಾ ಹೇಗೆ ನೋಡಬೇಕು ಎಂದು ತಿಳಿಸುವ ಮಾಧ್ಯಮ ಇಲ್ಲವಾಗಿದೆ. ಪ್ಯಾನ್‌ ಇಂಡಿಯಾ ಹಾಗೂ ಮಾತಿಲ್ಲದ ಹೊಡೆಬಡಿ ದಾಟಿಯ ತೆಲುಗು ಮಾದರಿ ಕನ್ನಡ ಸಿನಿಮಾ ರಂಗಕ್ಕೆ ತೊಂದರೆ ನೀಡುತ್ತಿದೆ. ಹಳ್ಳಿಯ ಜೀವಂತಿಕೆ ಹಾಗೂ ಪ್ರಸ್ತುತ ಸತ್ಯಗಳ ಅನಾವರಣಗೊಳಿಸುವ ಕಿರುಚಿತ್ರ ಸಿನಿಮಾರಂಗದ ಭರವಸೆ ಹೆಚ್ಚಿಸಿದೆ. ಅವು ಚಿತ್ರರಂಗ ಪ್ರವೇಶಕ್ಕೆ ಮೆಟ್ಟಿಲಾಗುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ‘ಕೇರಳದಲ್ಲಿ ಸಾವಿರಕ್ಕೂ ಅಧಿಕ ಸಿನಿಮಾ ಸೊಸೈಟಿಗಳಿದ್ದು, ಅವು ಉತ್ತಮ ಸಿನಿಮಾ ನೋಡುಗರನ್ನು ಸೃಷ್ಟಿಸಿವೆ. ಅದರ ಫಲವಾಗಿ ಆ ನೆಲದಲ್ಲಿ ನಿರ್ಮಾಣವಾಗುವ ಅದ್ಭುತ ಸಿನಿಮಾಗಳು ರಾಷ್ಟ್ರದ ಗಮನ ಸೆಳೆಯುತ್ತವೆ. ಕರ್ನಾಟಕದಲ್ಲಿ‌ ಮೂರು ಸಿನಿಮಾ ಸೊಸೈಟಿಗಳಷ್ಟೇ ಇವೆ. ಇದರ ಸಂಖ್ಯೆ ಹೆಚ್ಚಬೇಕು. ಸತ್ಯಜಿತ್ ರೇ ಅವರು ಸಿನಿಮಾ ಹೆಚ್ಚಿಸುವ ಬದಲು ಒಳ್ಳೆಯ ಪ್ರೇಕ್ಷಕರನ್ನು ಹೆಚ್ಚಿಸಬೇಕು ಎಂದಿದ್ದರು. ಚಲನಚಿತ್ರೋತ್ಸವವು ಆ ಕೆಲಸ ಮಾಡಲಿ’ ಎಂದು ಆಶಿಸಿದರು.

ನಟಿ ಕಾರುಣ್ಯ ರಾಮ್, ಸಿನಿಮಾ ಸೊಸೈಟಿಯ ಪದಾಧಿಕಾರಿಗಳಾದ ಡಾ.ಚಂದ್ರಶೇಖರ್, ಚೇತನ್, ಪದ್ಮಾವತಿ ಎಸ್. ಭಟ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.