ADVERTISEMENT

ಜೇಮ್ಸ್‌ ‘ಸಲಾಂ ಸೋಲ್ಜರ್‌’ ರಿಲೀಸ್‌ ಮಾಡಿದ ಕಿಚ್ಚ ಸುದೀಪ್‌

ಯೋಧನ ಪಾತ್ರದಲ್ಲಿ ಮಿಂಚಿದ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 8:14 IST
Last Updated 11 ಮಾರ್ಚ್ 2022, 8:14 IST
ಜೇಮ್ಸ್‌ ಪೋಸ್ಟರ್‌
ಜೇಮ್ಸ್‌ ಪೋಸ್ಟರ್‌   

ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯ ಸಿನಿಮಾ ‘ಜೇಮ್ಸ್‌’ ಬಿಡುಗಡೆಗೆ ರಾಜ್ಯದಾದ್ಯಂತ ಅದ್ಧೂರಿ ಸಿದ್ಧತೆ ಆರಂಭವಾಗಿದೆ. ಪುನೀತ್‌ ಅವರ ಜನ್ಮದಿನದಂದೇ (ಮಾ.17) ಚಿತ್ರವು ತೆರೆಕಾಣುತ್ತಿದ್ದು, ಚಿತ್ರದ ಎರಡನೇ ಲಿರಿಕಲ್‌ ಹಾಡು ‘ಸಲಾಂ ಸೋಲ್ಜರ್‌’ ಶುಕ್ರವಾರ ಬಿಡುಗಡೆಯಾಗಿದೆ.

ನಿರ್ದೇಶಕ ಚೇತನ್‌ ಕುಮಾರ್‌, ನಿರ್ಮಾಪಕ ಜಾಕ್‌ ಮಂಜು ಸಮ್ಮುಖದಲ್ಲಿ ನಟ ಕಿಚ್ಚ ಸುದೀಪ್‌ ಈ ಲಿರಿಕಲ್‌ ಹಾಡನ್ನು ಬಿಡುಗಡೆಗೊಳಿಸಿದರು. ಮಾಫಿಯಾ ಕಥೆಯನ್ನು ‘ಜೇಮ್ಸ್‌’ ಚಿತ್ರವು ಹೊಂದಿದೆ. ಜೆ–ವಿಂಗ್‌ ಎಂಬ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾತ್ರದಲ್ಲಿ ಪವರ್‌ಸ್ಟಾರ್‌ ಪುನೀತ್‌ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಟೀಸರ್‌ನಲ್ಲಿ ತಿಳಿದುಬಂದಿತ್ತು. ಆದರೆ ಈ ಪಾತ್ರಕ್ಕೆ ಯೋಧನ ಹಿನ್ನೆಲೆ ಕಥೆಯೂ ಇದೆ ಎನ್ನುವುದು ‘ಸಲಾಂ ಸೋಲ್ಜರ್‌’ ಹಾಡಿನ ಮೂಲಕ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಡಿನುದ್ದಕ್ಕೂ ಯೋಧನಾಗಿ ಪುನೀತ್‌ ರಾಜ್‌ಕುಮಾರ್‌ ಮಿಂಚಿದ್ದಾರೆ. ಈ ಹಾಡಿಗೆ ಸಂಜಿತ್‌ ಹೆಗ್ಡೆ, ಚರಣ್‌ ರಾಜ್‌ ಧ್ವನಿಯಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಚಿತ್ರದ ಮೊದಲ ಲಿರಿಕಲ್‌ ರ್‍ಯಾಪ್‌ ಹಾಡು ‘ಟ್ರೇಡ್‌ಮಾರ್ಕ್‌’ ಬಿಡುಗಡೆಯಾಗಿತ್ತು. ಚರಣ್‌ರಾಜ್‌ ಸಂಗೀತ ನೀಡಿರುವ ಈ ರ್‍ಯಾಪ್‌ ಹಾಡಿಗೆ, ಚಂದನ್‌ ಶೆಟ್ಟಿ, ವಿಕ್ಕಿ, ಅದಿತಿ ಸಾಗರ್‌, ಶರ್ಮಿಳಾ, ಯುವ ರಾಜ್‌ಕುಮಾರ್‌ ಧ್ವನಿ ನೀಡಿದ್ದಾರೆ.

ADVERTISEMENT

ರಾಜ್ಯದಲ್ಲೇ 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿರುವ ‘ಜೇಮ್ಸ್‌’, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವ ಅಭಿಮಾನಿಗಳ ಆಸೆ ‘ಜೇಮ್ಸ್‌’ ಮೂಲಕ ಈಡೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.