ADVERTISEMENT

Jingo Kannada Movie: ಜಿಂಕೆ ಗೋಪಣ್ಣನಾದ ಧನಂಜಯ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 23:55 IST
Last Updated 24 ಆಗಸ್ಟ್ 2025, 23:55 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ಸ್ಟಾರ್‌ ನಟನೊಬ್ಬನ ಜನ್ಮದಿನದಂದು ಆತನ ಎಲ್ಲ ಸಿನಿಮಾ ತಂಡಗಳು ವಿಭಿನ್ನ ರೀತಿಯಲ್ಲಿ ಶುಭ ಕೋರುವುದು ವಾಡಿಕೆ. ಅದರಂತೆ ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡ ನಟ ಡಾಲಿ ಧನಂಜಯ ಅವರಿಗೆ ಹಲವು ತಂಡಗಳು ಶುಭ ಕೋರಿವೆ. ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ‘ಉತ್ತರಕಾಂಡ’ ಚಿತ್ರಕ್ಕೆ ಪೋಸ್ಟರ್‌ನಿಂದ ಮತ್ತೆ ಮರುಜೀವ ಬಂದಿದೆ. ಹೇಮಂತ್‌ ರಾವ್‌ ನಿರ್ದೇಶನದಲ್ಲಿ ಡಾಲಿ–ಶಿವಣ್ಣ ನಟಿಸುತ್ತಿರುವ ‘666 ಆಪರೇಷನ್‌’ ಚಿತ್ರೀಕರಣ ಚಾಲ್ತಿಯಲ್ಲಿದೆ. ‘ಹಲಗಲಿ’ ಚಿತ್ರತಂಡ ಟೀಸರ್‌ ಬಿಡುಗಡೆಗೊಳಿಸಿದೆ. ‘ಅಣ್ಣ ಫ್ರಂ ಮೆಕ್ಸಿಕೋ’ ತಂಡದಿಂದ ಯಾವುದೇ ಅಪ್‌ಡೇಟ್‌ ಬರದಿದ್ದರೂ, ಚಿತ್ರೀಕರಣ ಅಂತಿಮ ಹಂತದಲ್ಲಿದೆ.

ಸದ್ಯಕ್ಕೆ ಸೆಟ್ಟೇರುವುದಿಲ್ಲ ಎನ್ನಲಾಗುತ್ತಿದ್ದ ‘ಜಿಂಗೋ’ ಚಿತ್ರದ ಹೊಸ ಪೋಸ್ಟರ್‌ ಗಮನ ಸೆಳೆಯುತ್ತಿದೆ. ಡಾಲಿ ಪಿಚ್ಚರ್ಸ್ ಮತ್ತು ತ್ರಿಶೂಲ್ ವಿಜನರಿ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ಕಳೆದ ವರ್ಷ ಘೋಷಣೆಗೊಂಡಿತ್ತು. ಚಿತ್ರ ಇನ್ನೂ ಸೆಟ್ಟೇರದ ಕುರಿತು ಹಬ್ಬಿದ್ದ ವದಂತಿಗಳಿಗೆ ಚಿತ್ರತಂಡವೀಗ ಎರಡನೆ ಪೋಸ್ಟರ್‌ನೊಂದಿಗೆ ಉತ್ತರ ನೀಡಿದೆ. 

‘ಡೇರ್‌ ಡೇವಿಲ್‌ ಮುಸ್ತಾಫಾ’ ಚಿತ್ರದ ಮೂಲಕ ಗುರುತಿಸಿಕೊಂಡಿರುವ ಶಶಾಂಕ್‌ ಸೋಗಾಲ್‌ ನಿರ್ದೇಶನದ ಚಿತ್ರವಿದು. ‘ಪ್ರೇಕ್ಷಕರ ಅಗಾಧ ಪ್ರತಿಕ್ರಿಯೆಯಿಂದ ಉತ್ಸಾಹಗೊಂಡ ಚಿತ್ರ ನಿರ್ಮಾಪಕರು ಕಥೆಯ ವ್ಯಾಪ್ತಿ ಮತ್ತು ಚಿತ್ರದ ಕ್ಯಾನ್ವಾಸ್ ಅನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಸಣ್ಣ ಪಟ್ಟಣದ ಕಥೆಯಾಗಿ ಆರಂಭವಾದ ಚಿತ್ರ ತನ್ನ ಕ್ಯಾನ್ವಾಸ್ ಅನ್ನು ವಿಸ್ತರಿಸಿಕೊಂಡಿದೆ’ ಎಂದು ಚಿತ್ರತಂಡ ಹೇಳಿದೆ.

ADVERTISEMENT

‘2026ರಲ್ಲಿ ವೀಕ್ಷಕರಿಗೆ ಈ ಚಿತ್ರ ವಿಶಿಷ್ಟ ಚಿತ್ರರಂಗದ ಅನುಭವವನ್ನು ನೀಡುತ್ತದೆ. ರಾಜಕೀಯ ವಿಡಂಬನೆ, ಹಾಸ್ಯ, ಆ್ಯಕ್ಷನ್, ಥ್ರಿಲ್ಲರ್ ಎಲ್ಲ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಅತ್ಯುತ್ತಮ ಮನರಂಜನೆ ಕೊಡಬೇಕು ಎಂಬುದೇ ನಮ್ಮ ಗುರಿ. ಸದ್ಯ ಕನ್ನಡ, ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಅತ್ಯುತ್ತಮ ನಟರ ತಾರಾ ಬಳಗವಿರುತ್ತದೆ’ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.