ADVERTISEMENT

ಮರುಬಿಡುಗಡೆಯಲ್ಲೂ ಒಳ್ಳೆಯ ಗಳಿಕೆ ಕಂಡ ‘ಜುರಾಸಿಕ್‌ ಪಾರ್ಕ್’

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 7:53 IST
Last Updated 24 ಜೂನ್ 2020, 7:53 IST
‘ಜುರಾಸಿಕ್‌ ಪಾರ್ಕ್’ ಚಿತ್ರದ ದೃಶ್ಯ
‘ಜುರಾಸಿಕ್‌ ಪಾರ್ಕ್’ ಚಿತ್ರದ ದೃಶ್ಯ   

‘ಜುರಾಸಿಕ್ ಪಾರ್ಕ್’ ಚಿತ್ರ ತೆರೆಕಂಡಿದ್ದು 27 ವರ್ಷಗಳ ಹಿಂದೆ. ಸ್ವೀವನ್ ಸ್ಪೀಲ್ಬರ್ಗ್‌ ನಿರ್ದೇಶಿಸಿದ ಈ ಸಿನಿಮಾ ತಾಂತ್ರಿಕ ನೆಲೆಗಟ್ಟಿನಲ್ಲಿಹಾಲಿವುಡ್ ಇತಿಹಾಸದಲ್ಲಿಯೇ ಹೊಸದೊಂದು ದಾಖಲೆ ಬರೆದಿತ್ತು. ಗಲ್ಲಾಪೆಟ್ಟಿಗೆಯಲ್ಲೂ ಭರ್ಜರಿ ಯಶಸ್ಸು ಕಂಡಿತ್ತು. ಅಂದಹಾಗೆ ಈ ಚಿತ್ರ ಬಿಡುಗಡೆಗೊಂಡಿದ್ದು 1993ರ ಜೂನ್ ತಿಂಗಳಿನಲ್ಲಿಯೇ.

ಇಲ್ಲಿಯವರೆಗೂ ನಾಲ್ಕು ಬಾರಿ ಮರುಬಿಡುಗಡೆಯಾಗಿರುವ ಈ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆಯಲ್ಲಿ ಅಗ್ರಪಂಕ್ತಿ ಕಾಯ್ದುಕೊಂಡಿರುವುದು ವಿಶೇಷ.

ಕೊರೊನಾ ವೈರಸ್ ಭೀತಿಯ ಪರಿಣಾಮ ಇಡೀ ವಿಶ್ವದಾದ್ಯಂತ ಸಿನಿಮಾ ಉದ್ಯಮ ಅಕ್ಷರಶಃ‌‌‌ ನೆಲೆಕಚ್ಚಿದೆ. ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಸ್ಥಗಿತಗೊಂಡಿವೆ. ಚಿತ್ರಮಂದಿರಗಳ ಪ್ರದರ್ಶನವೂ ಸ್ಥಗಿತಗೊಂಡಿದೆ. ಸಿನಿಪ್ರಿಯರು ಒಟಿಟಿ ಸೇರಿದಂತೆ ಇತರೇ ಮನರಂಜನಾ ವೇದಿಕೆಗಳ ಮೊರೆ ಹೋಗುವಂತಾಗಿದೆ.‌ ಈ ನಡುವೆಯೇ ಅಮೆರಿಕದಲ್ಲಿ‌‌ ಕೆಲವು ಥಿಯೇಟರ್‌ಗಳು ಕಾರ್ಯಾರಂಭ ಮಾಡಿವೆ. ಆ ಚಿತ್ರಮಂದಿರಗಳಲ್ಲಿ ‘ಜುರಾಸಿಕ್ ಪಾರ್ಕ್’, ‘ಜಾವ್ಸ್‌’ ಸಿನಿಮಾಗಳು ಮರುಬಿಡುಗಡೆಯಾಗಿವೆ. ಮರುಬಿಡುಗಡೆಯಾಗಿರುವ ಈ ಸಿನಿಮಾಗಳನ್ನು ಅಲ್ಲಿನ ಸಿನಿ ಪ್ರಿಯರು ಖುಷಿಯಿಂದಲೇ ಸ್ವೀಕರಿಸಿದ್ದಾರಂತೆ.

ADVERTISEMENT

ವಾರಾಂತ್ಯದಲ್ಲಿ ‘ಜುರಾಸಿಕ್ ಪಾರ್ಕ್’ ಚಿತ್ರ 5.17 ಲಕ್ಷ ಡಾಲರ್ ಗಳಿಕೆ ಕಂಡಿರುವುದೇ ಇದಕ್ಕೆ ಸಾಕ್ಷಿ. ಮರುಬಿಡುಗಡೆಯಾಗಿರುವ ಮತ್ತೊಂದು ಚಿತ್ರ ‘ಜಾವ್ಸ್’ದ ವಾರಾಂತ್ಯದ‌ ಗಳಿಕೆ 5.16 ಲಕ್ಷ ಡಾಲರ್. ಈ ಸಿನಿಮಾ ನಿರ್ದೇಶಿಸಿದ್ದೂ ಸ್ವೀವನ್‌ ಸ್ಪೀಲ್ಬರ್ಗ್‌ ಅವರೇ. ಇದು ತೆರೆಕಂಡಿದ್ದು 1975ರಲ್ಲಿ. ಪೀಟರ್ ಬೆಂಚ್ಲೆ ಬರೆದ ಕಾದಂಬರಿ ಆಧಾರಿತ ಥ್ರಿಲ್ಲರ್‌ ಚಿತ್ರ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.