ADVERTISEMENT

‘ಕಾಸಿನಸರ’ ಸಿನಿಮಾ ವೀಕ್ಷಿಸಿದ ರೈತ ಮುಖಂಡರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 8:26 IST
Last Updated 14 ಮಾರ್ಚ್ 2023, 8:26 IST
ಕುಟುಂಬದೊಂದಿಗೆ ‘ಕಾಸಿನಸರ’ ಸಿನಿಮಾ ವೀಕ್ಷಿಸಿದ ರೈತ ಮುಖಂಡರು 
ಕುಟುಂಬದೊಂದಿಗೆ ‘ಕಾಸಿನಸರ’ ಸಿನಿಮಾ ವೀಕ್ಷಿಸಿದ ರೈತ ಮುಖಂಡರು    

ರೈತರ ಜೀವನ ಆಧಾರಿತ ‘ಕಾಸಿನಸರ’ ಸಿನಿಮಾವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಅಧ್ಯಕ್ಷರಾದ ಎಚ್. ಆರ್. ಬಸವರಾಜಪ್ಪ ಹಾಗೂ ರೈತ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಕುಟುಂಬ ಸಮೇತರಾಗಿ ವೀಕ್ಷಿಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ‘ಹೆಬ್ಬೆಟ್ ರಾಮಕ್ಕ’ ಸಿನಿಮಾ ನಿರ್ದೇಶಿಸಿದ್ದ ಎನ್.ಆರ್. ನಂಜುಂಡೇಗೌಡ ಅವರ ನಿರ್ದೇಶನದ ಹೊಸ ಸಿನಿಮಾ ಇದಾಗಿದೆ.

ಮಾರ್ಚ್‌ 3ರಂದು ತೆರೆಕಂಡಿದ್ದ ಈ ಸಿನಿಮಾದಲ್ಲಿ ನಟ ವಿಜಯ ರಾಘವೇಂದ್ರ ಅವರು ‘ಸುಂದರೇಶ’ ಎಂಬ ಪಾತ್ರದಲ್ಲಿ ಪ್ರಗತಿಪರ ರೈತನಾಗಿ ನಟಿಸಿದ್ದಾರೆ. ವಿಜಯ್‌ಗೆ ನಟಿ ಹರ್ಷಿಕಾ ಪೂಣಚ್ಚ ‘ಸಂಪಿಗೆ’ ಎಂಬ ಪಾತ್ರದಲ್ಲಿ ಜೋಡಿಯಾಗಿದ್ದಾರೆ. ಕೃಷಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕಗಳೊಂದಿಗೆ ಪದವಿ ಪಡೆದು ಹಳ್ಳಿಗೆ ಮರಳುವ ನಾಯಕ, ಸಾವಯವ ಕೃಷಿಗೆ ಒತ್ತು ನೀಡಿ, ವಿದೇಶಿ ಕಂಪನಿಗಳಿಂದ ಆ ಹಳ್ಳಿಯ ರೈತರ ಜಮೀನುಗಳನ್ನು ಹೇಗೆ ರಕ್ಷಿಸುತ್ತಾನೆ ಎಂಬುವುದು ಚಿತ್ರದ ಎಳೆ.

‘ನಂಜುಂಡೇಗೌಡರು ರೈತ ಸಂಘದ ಪ್ರಾರಂಭದಲ್ಲಿ ಸಕ್ರಿಯವಾಗಿ ರೈತ ಸಂಘದ ಹೋರಾಟಗಳಲ್ಲಿ ಭಾಗವಹಿಸಿದ್ದರು. ಆಗಲೇ ರೈತ ಚಳವಳಿಯ ಬಗ್ಗೆ ಸಿನಿಮಾ ತೆಗೆದಿದ್ದರು. ಅಂದಿನಿಂದ ಅವರು ರೈತ ಚಳವಳಿಯ ಜೊತೆ ನಿಂತಿದ್ದಾರೆ. ಇವರ ‘ಸಂಕ್ರಾಂತಿ’, ‘ಚುಕ್ಕಿ ಚಂದ್ರಮ’, ‘ನೋಡುಬಾ ನಮ್ಮೂರ’ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ, ‘ಹೆಬ್ಬೆಟ್ಟು ರಾಮಕ್ಕ’ ಸಿನಿಮಾಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ದೊರಕಿದೆ. ಇವರು ನಿರ್ದೇಶಿಸಿದ ಎಲ್ಲಾ ಸಿನಿಮಾಗಳು ಗ್ರಾಮೀಣ ಬದುಕು, ಹಳ್ಳಿ ಜನರ ಸಂಸ್ಕೃತಿ, ರೈತರ ಜೀವನವನ್ನು ಆಧರಿಸಿವೆ.

ADVERTISEMENT

‘ಕಾಸಿನಸರ’ ಸಿನಿಮಾವೂ ರೈತರ ಪ್ರಸಕ್ತ ಪರಿಸ್ಥಿತಿಯನ್ನು ವಿವರಿಸಿದೆ. ವಿದೇಶಿ ಕಂಪನಿಗಳು ರಾಜಕಾರಣಿಗಳ ಮೂಲಕ ಭೂಮಿಯನ್ನ ಹೇಗೆ ಕಬಳಿಸುತ್ತಾರೆ, ಅವುಗಳನ್ನ ರೈತರು ಚಳವಳಿ ಮೂಲಕ ವಾಪಸ್ಸು ಪಡೆದಿದ್ದು ರೈತ ಚಳವಳಿಯ ಶಕ್ತಿಯನ್ನು ತೋರಿಸುತ್ತದೆ. ಜೊತೆಗೆ ಸಾವಯವ ಕೃಷಿಯ ಮಹತ್ವ, ಕೌಟುಂಬಿಕ ಸಮಸ್ಯೆಗಳಿಂದ ಒಡೆದ ಕುಟುಂಬ ಒಂದುಗೂಡುವುದು, ರೈತ ಮುಖಂಡರ ಸಂಕಷ್ಟಗಳನ್ನು ನಿರ್ದೇಶಕರು ಸೂಕ್ಷ್ಮವಾಗಿ ಸೆರೆ ಹಿಡಿದಿದ್ದಾರೆ’ ಎನ್ನುತ್ತಾರೆ ಬಸವರಾಜಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.