ADVERTISEMENT

ಆಂಧ್ರ ಮೀಲ್ಸ್‌ನೊಂದಿಗೆ ಕಾಜಲ್‌

​ಪ್ರಜಾವಾಣಿ ವಾರ್ತೆ
Published 10 ಮೇ 2020, 19:30 IST
Last Updated 10 ಮೇ 2020, 19:30 IST
ಕಾಜಲ್ ಅಗರ್‌ವಾಲ್
ಕಾಜಲ್ ಅಗರ್‌ವಾಲ್   

ಕೋವಿಡ್‌ – 19 ಕಾರಣದಿಂದ ದೇಶದೆಲ್ಲೆಡೆ ಜಾರಿಯಾದ ಲಾಕ್‌ಡೌನ್ ಅನೇಕರಿಗೆ ಶಾಪವಾದರೆ ಇನ್ನೂ ಕೆಲವರಿಗೆ ವರವಾಗಿದೆ. ಅದರಲ್ಲೂ ಸಿನಿಮಾ ನಟ–ನಟಿಯರು ಈ ಅವಧಿಯನ್ನು ತುಂಬಾನೇ ಎಂಜಾಯ್ ಮಾಡುತ್ತಿದ್ದಾರೆ. ಸದಾ ಶೂಟಿಂಗ್, ರೆಕಾರ್ಡಿಂಗ್ ಎಂದು ಮನೆಯಿಂದ ಹೊರಗಡೆಯೇ ಇರುತ್ತಿದ್ದ ಇವರಿಗೆ ಲಾಕ್‌ಡೌನ್ ಒಂದಿಷ್ಟು ಬಿಡುವು ಸಿಗುವಂತೆ ಮಾಡಿದೆ.

ಈ ಸಮಯದಲ್ಲಿ ಅನೇಕ ನಟಿಯರು ಅಡುಗೆಮನೆಯಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಜೊತೆ ಹೊಸ ಹೊಸ ಖಾದ್ಯಗಳನ್ನು ತಯಾರಿಸಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಸಾಲಿಗೆ ಸೇರುವ ನಟಿಯರಲ್ಲಿ ಕಾಜಲ್ ಅಗರ್‌ವಾಲ್ ಕೂಡ ಒಬ್ಬರು‌. ಲಾಕ್‌ಡೌನ್ ಆರಂಭವಾದಾಗಿನಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ ಈ ನಟಿ. ಅಲ್ಲದೇ ‘ಅಡುಗೆ ಮಾಡುವುದು ನನಗೆ ಇಷ್ಟ’ ಎಂದೂ ಬರೆದುಕೊಂಡಿದ್ದರು.

ಕೆಲ ದಿನಗಳ ತಾಯಿಯ ಮಾರ್ಗದರ್ಶನದಲ್ಲಿ ಕ್ಯಾರೆಟ್‌ ಕೇಕ್‌ ಹಾಗೂ ಸಮೋಸ ಮಾಡಿದ್ದ ವಿಡಿಯೊವನ್ನು ಕಾಜಲ್ ಪೋಸ್ಟ್ ಮಾಡಿದ್ದರು. ಆ ಮೂಲಕ ಅಭಿಮಾನಿಗಳಿಂದ ‘ಪಾಕಪ್ರವೀಣೆ’ ಎನ್ನಿಸಿಕೊಂಡಿದ್ದರು.

ADVERTISEMENT

ತೆಲುಗು ಸಿನಿರಂಗದಲ್ಲಿ ಹೆಚ್ಚು ಬೇಡಿಕೆ ಇರುವ ಈ ನಟಿ ಈಚೆಗೆ ಆಂಧ್ರಪ್ರದೇಶದ ವಿಶೇಷ ಖಾದ್ಯಗಳನ್ನು ತಯಾರಿಸಿ ಪೋಸ್ಟ್‌ ಮಾಡುವ ಮೂಲಕ ತೆಲುಗು ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ಬದನೆಕಾಯಿ ಪುಲುಸು, ಸೋರೆಕಾಯಿ ಪಚಡಿ ಹಾಗೂ ಪೆಸರೆಟ್ಟು ತಯಾರಿಸಿ ಪೋಸ್ಟ್ ಮಾಡುವ ಮೂಲಕ ಶೂಟಿಂಗ್ ಸೆಟ್‌ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಬಾಂಬೆ ಬೆಡಗಿ ಆಂಧ್ರದ ಖಾದ್ಯಗಳನ್ನು ತಯಾರಿಸಿದ್ದಾರೆ.

ಅಲ್ಲದೇ ತಾವು ಹಂಚಿಕೊಂಡಿದ್ದ ಪೋಸ್ಟ್ ಜೊತೆಗೆ ‘ನಾನು ನನ್ನ ಚಿತ್ರದ ಸೆಟ್‌ ಅನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆ ಕಾರಣಕ್ಕೆ ರಾತ್ರಿ ಊಟಕ್ಕೆ ಸಂಪೂರ್ಣವಾಗಿ ಆಂಧ್ರ ಊಟ ತಯಾರಿ ಮಾಡುವ ಮನಸ್ಸು ಮಾಡಿದೆ. ಇದು ನನ್ನ ಮೊದಲ ಪ್ರಯತ್ನ. ಇಲ್ಲಿದೆ ನೋಡಿ ಬದನೆಕಾಯಿ ಪುಲುಸು, ಸೋರೆಕಾಯಿ ಪಚಡಿ ಹಾಗೂ ಪೆಸರೆಟ್ಟು’ ಎಂದು ಬರೆದುಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಜೊತೆ ‘ಆಚಾರ್ಯ’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವ ಕಾಜಲ್ ಲಾಕ್‌ಡೌನ್ ಮುಗಿದ ಕೂಡಲೇ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.