ಕಾಜಲ್ ಕುಂದರ್
ಮುಂಬೈ ಮೂಲದ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರ ಇಂದು (ಅ.24) ತೆರೆ ಕಾಣುತ್ತಿದೆ. ಚಿತ್ರದಲ್ಲಿ ತಮ್ಮ ಪಾತ್ರ ಹಾಗೂ ಈತನಕದ ಸಿನಿಪಯಣ ಕುರಿತು ಅವರು ಮಾತನಾಡಿದ್ದಾರೆ.
ಚಿತ್ರದಲ್ಲಿ ನಿಮ್ಮ ಪಾತ್ರ...
‘ಕವಿತಾ’ ಎಂಬ ಪಾತ್ರ ನನ್ನದು. ಮಧ್ಯಮ ವರ್ಗದ ಕುಟುಂಬದ ಹುಡುಗಿ. ಮದುವೆಯಾಗಲು ಇಷ್ಟವಿಲ್ಲ ಎಂದು ಸಾಕಷ್ಟು ಸಮಯದಿಂದ ಮುಂದೂಡಿಕೊಂಡು ಬಂದಿರುತ್ತಾಳೆ. ಆದರೆ ನಾಯಕನನ್ನು ನೋಡಿ ತಕ್ಷಣ ಮದುವೆಗೆ ಒಪ್ಪಿಕೊಳ್ಳುವ ಪಾತ್ರ. ಎಲ್ಲರಿಗೂ ನನ್ನ ಈ ನಿರ್ಧಾರದಿಂದ ಶಾಕ್ ಅನ್ನಿಸುತ್ತದೆ. ಆದರೆ ಅದಕ್ಕೆ ಕಾರಣವೇನು? ನನ್ನ ಪಾತ್ರ ಪೋಷಣೆ ಹೇಗಿದೆ ಎಂಬುದನ್ನು ಸಿನಿಮಾದಲ್ಲಿ ನೋಡಬಹುದು. ಹೆಚ್ಚು ಮಾತಾಡುವುದಿಲ್ಲ, ಅಂತರ್ಮುಖಿ ಎನ್ನುವ ರೀತಿ ಪಾತ್ರ.
ಒಟ್ಟಾರೆ ಕೌಟುಂಬಿಕ ಕಥೆಯ ಚಿತ್ರವೇ?
ಹೌದು, ಪೂರ್ತಿ ಕೌಟುಂಬಿಕ ಡ್ರಾಮಾ. ಈ ಕಥೆಯ ಉದ್ದೇಶ ತುಂಬ ಗಂಭೀರವಾದುದು. ತೊನ್ನಿನ ಸಮಸ್ಯೆಯುಳ್ಳವರ ಬಗ್ಗೆ ಮಾತನಾಡುತ್ತಿದ್ದೇವೆ. ಅದನ್ನು ಸಹಜವಾಗಿ ತೋರಿಸಿದ್ದೇವೆ. ಜೊತೆಗೆ ಪ್ರಾರಂಭದಲ್ಲಿ ಒಂದಷ್ಟು ಹಾಸ್ಯ ಕೂಡ ಇದೆ. ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡುವಂಥ ಚಿತ್ರ. ಹಾಸ್ಯ, ಎಮೋಷನ್ ಎಲ್ಲವೂ ಇದೆ.
ಗ್ಲಾಮರಸ್ ಪಾತ್ರಗಳನ್ನು ಬಿಟ್ಟು ಈ ರೀತಿ ಪಾತ್ರ ಒಪ್ಪಿಕೊಂಡಿದ್ದೇಕೆ?
ನಾನು ಈ ಹಿಂದೆ ಮಾಡಿದ ಸಿನಿಮಾಳಗಳಲ್ಲಿ ಕೂಡ ಕಾಂಟೆಂಟ್ ತುಂಬ ಗಟ್ಟಿಯಾಗಿತ್ತು. ಇದರಲ್ಲಿ ಕೂಡ ಕಾಂಟೆಂಟ್ ಗಟ್ಟಿಯಾಗಿದೆ. ಈ ರೀತಿ ವಿಷಯವನ್ನು ಯಾರೂ ಕೂಡ ಈ ತನಕ ಹಿರಿತೆರೆಯಲ್ಲಿ ಹೇಳಿಲ್ಲ. ನನಗೆ ಭಿನ್ನವಾದ ಕಥೆಗಳ ಸಿನಿಮಾ ಮಾಡುವುದು ಆಸೆ. ಗ್ಲಾಮರ್‌ಗಿಂತ ಕಥೆ ಗಟ್ಟಿಯಾಗಿರಬೇಕು. ಪಾತ್ರ ಗುರುತಿಸುವಂತಿರಬೇಕು. ಇದು ಕಥೆಯಾಗಿ, ಪಾತ್ರವಾಗಿ ತುಂಬ ಭಿನ್ನ ಅನಿಸಿತು. ಈ ಹಿಂದೆ ‘ಪೆಪೆ’ ಚಿತ್ರದಲ್ಲಿ ನಟಿಸಿದ್ದೆ. ಅದರಲ್ಲಿ ತುಂಬ ಗಟ್ಟಿಯಾದ ಹೆಣ್ಣುಮಗಳು ಎಂಬ ಪಾತ್ರವಿತ್ತು. ಇಲ್ಲಿ ಅದಕ್ಕೆ ತದ್ವಿರುದ್ಧ. ತುಂಬ ಮೌನಿ. ಶಾಂತವಾಗಿರುತ್ತೇನೆ. ಹೀಗಾಗಿ ಈ ಪಾತ್ರ ಒಪ್ಪಿಕೊಂಡೆ.
ನಿಮ್ಮ ಈತನಕದ ಸಿನಿಪಯಣ...
ತುಂಬ ಚೆನ್ನಾಗಿದೆ. ಇಲ್ಲಿತನಕ ಮಾಡಿರುವ ಎಲ್ಲ ಪಾತ್ರಗಳನ್ನು ಇಷ್ಟಪಟ್ಟು ಮಾಡಿರುವುದು. ಖಂಡಿತವಾಗಿ ಇನ್ನಷ್ಟು ಸ್ಕ್ರಿಪ್ಟ್‌ಗಳು ಸಿಗಬೇಕು, ಒಳ್ಳೊಳ್ಳೆ ನಿರ್ದೇಶಕರ ಜತೆ ಕೆಲಸ ಮಾಡಬೇಕೆಂಬ ಆಸೆಯಿದೆ. ಜಾಸ್ತಿ ಜನಕ್ಕೆ ನನ್ನ ಬಗ್ಗೆ ಗೊತ್ತಿಲ್ಲ ಎಂಬ ಭಾವನೆ ನನ್ನಲ್ಲಿ ಇದೆ. ನಾನು ಹೆಚ್ಚು ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಈತನಕ ನನಗೆ ಸಿಕ್ಕಿರುವ ಸಿನಿಮಾಗಳೆಲ್ಲ ನನ್ನ ಹಿಂದಿನ ಸಿನಿಮಾಗಳಿಂದಲೇ ಸಿಕ್ಕಿರುವುದು. ನನ್ನ ಒಂದು ಸಿನಿಮಾದ ನಟನೆ ನೋಡಿಯೇ ಇನ್ನೊಂದು ಸಿನಿಮಾದ ಅವಕಾಶ ಸಿಕ್ಕಿದ್ದು. ಇನ್ನಷ್ಟು ಉತ್ತಮ ಪಾತ್ರಗಳನ್ನು ಮಾಡಬೇಕು.
ನಿಮ್ಮ ಹಿನ್ನೆಲೆ ಏನು? ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ನಾನು ಮುಂಬೈನವಳು. ಶಾಲಾ ದಿನಗಳಲ್ಲಿ ರಂಗ ಕಲಾವಿದೆಯಾಗಿದ್ದೆ. ವೃತ್ತಿಯಿಂದ ಡಾನ್ಸರ್. ಕಾಲೇಜು ಮುಗಿಯುವ ಮೊದಲೇ ‘ಹರಹರ ಮಹಾದೇವ್’ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಬಂದೆ. ಅಲ್ಲಿಂದ ನಂತರ ಸಣ್ಣ ಸಣ್ಣ ಪಾತ್ರಗಳ ಮೂಲಕ ಸಿನಿಪಯಣ ಪ್ರಾರಂಭವಾಯಿತು. ‘ಮಾಯಾ ಕನ್ನಡಿ’ ನಾಯಕಿಯಾಗಿ ನನ್ನ ಮೊದಲ ಸಿನಿಮಾ. ಅದಾದ ಬಳಿಕ ‘ಬಾಂಡ್ ರವಿ’, ‘ಕೆಟಿಎಂ’ ಚಿತ್ರಗಳಲ್ಲಿ ನಟಿಸಿದೆ. ‘ಪೆಪೆ’ ಸಿನಿಮಾಕ್ಕೆ ನಾಯಕಿಯಾದೆ.
ನಿಮ್ಮ ಮುಂದಿನ ಸಿನಿಮಾಗಳು…
ಸುದೀಪ್ ನಿರ್ಮಾಣದ ‘ಮ್ಯಾಂಗೊ ಪಚ್ಚ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅವರ ಅಳಿಯ ಸಂಚಿತ್ ನಾಯಕ. ಬೇರೆ ಯಾವುದು ಸ್ಕ್ರಿಪ್ಟ್ ಅಂತಿಮವಾಗಿಲ್ಲ. ಒಳ್ಳೆಯ ಸ್ಕ್ರಿಪ್ಟ್‌ಗಳನ್ನು ಎದುರು ನೋಡುತ್ತಿರುವೆ.
ನಿಮ್ಮ ಮುಂದಿನ ಗುರಿಗಳು ಏನು?
ಇನ್ನೂ ಒಳ್ಳೊಳ್ಳೆ ನಿರ್ದೇಶಕರ ಜತೆ ಕೆಲಸ ಮಾಡಬೇಕು. ಭಿನ್ನವಾದ ಪಾತ್ರಗಳಲ್ಲಿ ನಟಿಸಬೇಕು. ಒಂದು ಸಿನಿಮಾದ ಪಾತ್ರ ಇನ್ನೊಂದಕ್ಕೆ ತಾಳೆಯಾಗಬಾರದು. ಆ ರೀತಿ ಸವಾಲಿನ ಪಾತ್ರಗಳನ್ನು ಮಾಡಬೇಕು.
ಬೆಂಗಳೂರಿಗೆ ಬಂದು ಒಂದೂವರೆ ವರ್ಷವಾಯ್ತು. ಇಲ್ಲಿಗೆ ಬಂದ ನಂತರ ಅಕ್ಕಪಕ್ಕದವರ ಜತೆ ಮಾತನಾಡುತ್ತ, ಸೆಟ್‌ನಲ್ಲಿ ಮಾತನಾಡಿ ಕನ್ನಡ ಕಲಿತಿದ್ದು. ಮೊದಲೆಲ್ಲ ಕೈಸನ್ನೆ, ಬಾಯಿ ಸನ್ನೆ ಮೂಲಕ ಮಾತನಾಡುತ್ತಿದ್ದೆ. ಊಟ, ನೀರು ಬೇಕು ಎಂಬಿತ್ಯಾದಿ ಬೇಸಿಕ್ ಪದಗಳನ್ನು ಕೈ ಸನ್ನೆ ಮಾಡುತ್ತಿದೆ. ನಿರ್ದೇಶಕರು ಕೂಡ ಬರೆದು, ಅಥವಾ ಸರಳವಾದ ಇಂಗ್ಲಿಷ್‌ನಲ್ಲಿ ನನಗೆ ಸೂಚನೆ ನೀಡುತ್ತಿದ್ದರು. ಈಗ ಅರಾಮಾಗಿ ಮಾತನಾಡುವಷ್ಟು ಕನ್ನಡ ಬರುತ್ತದೆ. ತುಂಬ ಖುಷಿಯಾಗುತ್ತಿದೆ.
ಸ್ವತಃ ತೊನ್ನಿನ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಈ ಚಿತ್ರವನ್ನು ನಿರ್ದೇಶಿಸಿ, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ‘ಶೀರ್ಷಿಕೆಯೇ ಹೇಳುವಂತೆ ಬಿಳಿಚುಕ್ಕಿ ಅಂದರೆ ನಾನು. ತೊನ್ನಿನ ಸಮಸ್ಯೆ ಹೊಂದಿರುವ ನಾನು ‘ಶಿವ ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನನ್ನು ಚಿತ್ರದಲ್ಲಿ ಎಲ್ಲರೂ ಬಿಳಿಚುಕ್ಕಿ ಎಂದು ಕರೆಯುತ್ತಿರುತ್ತಾರೆ. ಹಳ್ಳಿಹಕ್ಕಿ ಎಂದರೆ ನಾಯಕಿ. ಸುಂದರವಾದ ಹುಡುಗಿಗೆ ಸಾಮಾನ್ಯವಾಗಿ ಹಳ್ಳಿಹಕ್ಕಿ ಎಂದು ಕರೆಯುತ್ತೇವೆ. ಹಲವಾರು ವಿಷಯಗಳನ್ನು ಅಡ್ರೆಸ್ ಮಾಡುವ ಸಿನಿಮಾವಿದು. ಬೇಕಂತಲೇ ಮಾಡಿದ ಕಥೆಯಲ್ಲ. ಕೆಲವು ಸನ್ನಿವೇಶಗಳಿಂದಾಗಿ ಈ ಕಥೆ ಮಾಡಬೇಕಾಯ್ತು. ಆಮೇಲೆ ಹಠಕ್ಕೆ ಬಿದ್ದು ಸಿನಿಮಾ ಮಾಡಿದೆವು. ಇದರ ಹಿಂದೆ ಮೂರುವರೆ ವರ್ಷಗಳ ಶ್ರಮವಿದೆ’ ಎನ್ನುತ್ತಾರೆ ಮಹೇಶ್ ಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.