ADVERTISEMENT

'ಅವಿದ್ಯಾವಂತ ರಾಜಕಾರಣಿಗಳು' ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಕಾಜಲ್‌ ದೇವಗನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜುಲೈ 2023, 13:19 IST
Last Updated 9 ಜುಲೈ 2023, 13:19 IST
   

'ಶಿಕ್ಷಣದ ಹಿನ್ನೆಲೆಯಿಲ್ಲದ ರಾಜಕಾರಣಿಗಳಿಂದ ನಾವು ಆಳಲ್ಪಡುತ್ತಿದ್ದೇವೆ' ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದ ಬಾಲಿವುಡ್‌ ನಟಿ ಕಾಜಲ್‌ ದೇವಗನ್‌, ಇದೀಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕ್ವಿಂಟ್‌ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದ ಕಾಜಲ್‌ ಮಹಿಳಾ ಸಬಲೀಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ದೇಶದ ರಾಜಕಾರಣ ಬಗ್ಗೆಯೂ ಮಾತನಾಡಿದ್ದಾರೆ.

'ಬದಲಾವಣೆ... ಅದು ಭಾರತದಂತಹ ದೇಶದಲ್ಲಿ. ಬದಲಾವಣೆ ತುಂಬಾ ನಿಧಾನಗತಿಯಲ್ಲಿ ನಡೆಯುತ್ತಿದೆ. ಯಾಕೆಂದರೆ ನಾವು ನಮ್ಮ ಸಂಪ್ರದಾಯದಲ್ಲಿ ಮತ್ತು ನಮ್ಮದೇ ಆಲೋಚನೆಗಳಲ್ಲಿ ಮುಳುಗಿದ್ದೇವೆ. ಇವುಗಳು ನಮ್ಮ ಶಿಕ್ಷಣ ಜೊತೆಯೂ ಸಂಬಂಧ ಹೊಂದಿವೆ' ಎಂದು ಹೇಳಿದ್ದಾರೆ.

ADVERTISEMENT

'ಕ್ಷಮಿಸಿ ನಾನು ಇದನ್ನು ಹೇಳಲೇಬೇಕಿದೆ. ಶಿಕ್ಷಣದ ಹಿನ್ನೆಲೆಯಿಲ್ಲದ ರಾಜಕಾರಣಿಗಳಿಂದ ನಾವೆಲ್ಲರೂ ಆಳಲ್ಪಡುತ್ತಿದ್ದೇವೆ. ನಮಗೆ ಇದರ ಬಗ್ಗೆ ತಿಳಿದಿಲ್ಲ. ಈ ತಿಳುವಳಿಕೆಯನ್ನು ಶಿಕ್ಷಣ ನೀಡುತ್ತದೆ. ವಿಭಿನ್ನ ದೃಷ್ಠಿಕೋನವನ್ನು ಶಿಕ್ಷಣ ನಮಗೆ ನೀಡುತ್ತದೆ' ಎಂದು ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಹೇಳಿದರು.

ಈ ಹೇಳಿಕೆ ಬೆನ್ನಲ್ಲೇ ಕಾಜಲ್‌ ಭಾರಿ ಟ್ರೋಲ್‌ಗೆ ಒಳಗಾಗಿದ್ದರು. ‘ನಡುವಿನಲ್ಲಿಯೇ ಶಾಲೆ ಬಿಟ್ಟವರು ಇವರು. ಹಣಕ್ಕೋಸ್ಕರ ಗಂಡ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇಂತವರು ಶಿಕ್ಷಣದ ಬಗ್ಗೆ ಮಾತನಾಡುತ್ತಾರೆ‘ ಎಂದು ಟ್ವೀಟ್‌ ಮಾಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಜಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನಾ ಪಕ್ಷದ (ಉದ್ಭವ್‌ ಠಾಕ್ರೆ ಬಣ) ನಾಯಕಿ ಪ್ರಿಯಾಂಕಾ ಚತುರ್ವೇದಿ , ‘ಅವಿದ್ಯಾವಂತ, ದೂರದೃಷ್ಟಿ ಇಲ್ಲದ ನಾಯಕರು ನಮ್ಮನ್ನು ಆಳುತ್ತಿದ್ದಾರೆ ಎಂದು ಕಾಜಲ್‌ ಹೇಳಿದ್ದಾರೆ. ಇದು ಆಕೆಯ ಅಭಿಪ್ರಾಯವೇ ವಿನಃ ಸತ್ಯವಲ್ಲ. ಯಾರನ್ನು ಹೆಸರಿಸದ ಕಾರಣ ಆಕ್ರೋಶಗೊಳ್ಳುವ ಅಗತ್ಯವಿಲ್ಲ. ಆದರೂ ಕೆಲ ಭಕ್ತರು ಆಕ್ರೋಶಗೊಂಡಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯ ಜ್ಞಾನವನ್ನು ಹೊರಹಾಕಬೇಡಿ‘ ಎಂದು ಹೇಳಿದ್ದಾರೆ.

ಸ್ಪಷ್ಟನೆ ನೀಡಿದ ಕಾಜಲ್‌

ಅವಿದ್ಯಾವಂತ ರಾಜಕಾರಣಿಗಳು ಹೇಳಿಕೆ ಬಗ್ಗೆ ಕಾಜಲ್‌ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ. ‘ಶಿಕ್ಷಣ ಮತ್ತು ಅದರ ಪ್ರಾಮುಖ್ಯತೆ ಬಗ್ಗೆ ನಾನು ಬೊಟ್ಟು ಮಾಡಿದ್ದೇನೆಯೇ ವಿನಃ ಯಾವ ರಾಜಕಾರಣಿಯನ್ನು ಅವಮಾನ ಮಾಡಿಲ್ಲ. ದೇಶವನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋದ ಅನೇಕ ನಾಯಕರುಗಳನ್ನು ನಾವು ಹೊಂದಿದ್ದೇವೆ‘ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.