ADVERTISEMENT

‘ಶಂಕರಾಭರಣಂ’ ಖ್ಯಾತಿಯ ನಿರ್ದೇಶಕ ಕೆ.ವಿಶ್ವನಾಥ್‌ ಇನ್ನಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2023, 14:01 IST
Last Updated 3 ಫೆಬ್ರುವರಿ 2023, 14:01 IST
ಕೆ. ವಿಶ್ವನಾಥ್‌
ಕೆ. ವಿಶ್ವನಾಥ್‌    

ಹೈದರಾಬಾದ್: ‘ಕಲಾ ತಪಸ್ವಿ’ ಎಂದೇ ಖ್ಯಾತರಾಗಿದ್ದ ನಿರ್ದೇಶಕ, ‘ಶಂಕರಾಭರಣಂ’ ಸೇರಿದಂತೆ ಹಲವಾರು ಶ್ರೇಷ್ಠ ಚಲಚಿತ್ರಗಳನ್ನು ನಿರ್ದೇಶಿಸಿದ್ದ ಕಾಶೀನಾಥುನಿ ವಿಶ್ವನಾಥ್ (92) ಗುರುವಾರ ತಡರಾತ್ರಿ ಇಲ್ಲಿ ನಿಧನರಾದರು. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಪದ್ಮಶ್ರೀ (1992) ಪ್ರಶಸ್ತಿ ನೀಡಲಾಗಿತ್ತು. 2017ರಲ್ಲಿ ಅವರು ದಾದಾ ಸಾಹೇಬ್‌ ಫಾಲ್ಕೆ ಪುರಸ್ಕಾರಕ್ಕೆ ಭಾಜನರಾಗಿದ್ದರು.

ಅವರು ನಿರ್ದೇಶಿಸಿದ ಮೊದಲ ಚಿತ್ರ ‘ಆತ್ಮ ಗೌರವಮ್’. ಈ ಚಿತ್ರಕ್ಕೆ ಪ್ರತಿಷ್ಠಿತ ನಂದಿ ಪ್ರಶಸ್ತಿ ಲಭಿಸಿತ್ತು. ಇದಕ್ಕೂ ಮೊದಲು ಅವರು ‘ಪಾತಾಳ ಭೈರವಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಚಿತ್ರ ನಿರ್ದೇಶನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು.

ADVERTISEMENT

ಅವರು 1930ರ ಫೆಬ್ರುವರಿ 19ರಂದು ಗುಂಟೂರು ಬಳಿಯ ಪೆದಪುಲಿವರ‍್ರು ಎಂಬಲ್ಲಿ ಜನಿಸಿದ್ದರು. ಅವರು ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಸೋದರ ಸಂಬಂಧಿ.

‘ಸಾಗರಸಂಗಮಂ’, ‘ಸ್ವಾತಿ ಮುತ್ಯಂ’, ‘ಸಪ್ತಪದಿ’, ‘ಸ್ವಾತಿ ಕಿರಣಂ’, ‘ಸಿರಿ ಸಿರಿ ಮುವ್ವ’ ಹಾಗೂ ‘ಸಿರಿ ವೆನ್ನಲ’ ಚಿತ್ರಗಳು ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟ ಚಿತ್ರಗಳು. ವಿಶ್ವನಾಥ್‌ ನಿರ್ದೇಶಿಸಿದ ಚಿತ್ರಗಳು ಕಲಾತ್ಮಕವಾಗಿ ಮಾತ್ರವಲ್ಲ, ಹಣ ಗಳಿಕೆ ದೃಷ್ಟಿಯಿಂದಲೂ ಭಾರಿ ಯಶಸ್ವಿಯಾಗಿದ್ದವು. ಅವರ ಚಿತ್ರಗಳಿಗೆ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಕೂಡ ಸಂದಿವೆ.

ಖ್ಯಾತ ನಟರಾದ ಕೆ.ಚಿರಂಜೀವಿ, ಕಮಲ್‌ ಹಾಸನ್‌ ಅವರು ವಿಶ್ವನಾಥ್‌ ಅವರನ್ನು ‘ಗುರು’ ಎಂದೇ ಕರೆಯುತ್ತಿದ್ದರು.

ವಿಶ್ವನಾಥ್‌ ಅವರು ತಮ್ಮ ಚಿತ್ರಗಳಲ್ಲಿ ಭಾರತೀಯ ಸಂಗೀತ, ನೃತ್ಯ ಹಾಗೂ ಇತರ ಕಲಾ ಪ್ರಕಾರಗಳ ಶ್ರೇಷ್ಠತೆಯನ್ನು ಕಟ್ಟಿಕೊಡುತ್ತಿದ್ದರು. ಸಮಕಾಲೀನ ಕಲೆಗಳಿಗೂ ಅವರ ಚಿತ್ರಗಳಲ್ಲಿ ಸ್ಥಾನ ಇರುತ್ತಿತ್ತು. ಸಾಮಾಜಿಕ–ಸಾಂಸ್ಕೃತಿಕ ಸಂಘರ್ಷಗಳು, ಮಾನವೀಯ ಸಂಬಂಧಗಳ ಗಾಢ ಚಿತ್ರಣದಿಂದಾಗಿಯೂ ಅವರ ಚಿತ್ರಗಳು ಗಮನ ಸೆಳೆಯುತ್ತವೆ.

ದೇಶದಲ್ಲಿ ಪಾಶ್ಚಿಮಾತ್ಯ ಸಂಗೀತ ಹೆಚ್ಚು ಜನಪ್ರಿಯಗೊಂಡಿದ್ದ ಸಂದರ್ಭದಲ್ಲಿ ಅವರು ಶಂಕರಾಭರಣಂ ಚಿತ್ರವನ್ನು ನಿರ್ದೇಶಿಸಿದರು. ಕರ್ನಾಟಕ ಸಂಗೀತವೇ ಕಥಾವಸ್ತುವಾಗಿದ್ದ ಈ ಚಿತ್ರ ಅಪಾರ ಯಶಸ್ಸು ಗಳಿಸಿತಲ್ಲದೇ, ಅಂದಿನ ಪೀಳಿಗೆ ಕರ್ನಾಟಕ ಸಂಗೀತದಲ್ಲಿ ಆಸಕ್ತಿ ತಳೆಯುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿತ್ತು.

ವಿಶ್ವನಾಥ್‌ ಅವರು ಒಂಬತ್ತು ಹಿಂದಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಬಹುತೇಕ ಚಿತ್ರಗಳು ತೆಲುಗಿನಲ್ಲಿ ಯಶಸ್ಸು ಕಂಡಿದ್ದ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರಗಳೇ ಆಗಿದ್ದವು. 2010ರಲ್ಲಿ ತೆರೆಗೆ ಬಂದ ‘ಶುಭಪ್ರದಂ’ ಅವರ ನಿರ್ದೇಶನದ ಕೊನೆಯ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.