ADVERTISEMENT

ಸನ್ನಾಫ್ ಮುತ್ತಣ್ಣ | ಕಮಲಹಾಸನ್‌ ಚಿತ್ರ ಸ್ಥಗಿತವೇ ದೊಡ್ಡ ಕ್ರಮ: ಪ್ರಣಮ್ ದೇವರಾಜ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 11:45 IST
Last Updated 1 ಜೂನ್ 2025, 11:45 IST
<div class="paragraphs"><p>ಪ್ರಣಮ್ ದೇವರಾಜ್</p></div>

ಪ್ರಣಮ್ ದೇವರಾಜ್

   

ಹೊಸಪೇಟೆ (ವಿಜಯನಗರ): 'ನಾನೊಬ್ಬ ಅಪ್ಪಟ ಕನ್ನಡಾಭಿಮಾನಿ. ಕಮಲಹಾಸನ್ ಅವರ ಬಗ್ಗೆ ಹೇಳುವಷ್ಟು ದೊಡ್ಡ ವ್ಯಕ್ತಿ ಅಲ್ಲ, ಆದರೆ ಅವರ ಚಿತ್ರಕ್ಕೆ ರಾಜ್ಯದಲ್ಲಿ ನಿಷೇಧ ಹೇರಿದರೆ ಕನ್ನಡಿಗರ ಭಾವನೆಯನ್ನು ಕೆಣಕಿದ್ದಕ್ಕೆ ನೀಡಿದ ದೊಡ್ಡ ಕ್ರಮದಂತೆಯೇ ಆಗುತ್ತದೆ’ ಎಂದು ನಟ ಪ್ರಣಮ್ ದೇವರಾಜ್ ಹೇಳಿದರು.

ಇಲ್ಲಿಗೆ ಭಾನುವಾರ ‘ಸನ್ನಾಫ್‌ ಮುತ್ತಣ್ಣ’ ಸಿನಿಮಾದ 'ಕಮಾಂಗಿ ನನ್ನ ಮಗನೇ’ ಹಾಡನ್ನು ದೊಡ್ಡ ಪರದೆಯಲ್ಲಿ ಪ್ರಸಾರ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಮಲಹಾಸನ್ ಅವರ ಮಾತಿಗೆ ಕನ್ನಡಿಗರು ನೀಡಬಹುದಾದ ದೊಡ್ಡ ಶಿಕ್ಷೆ ಇದು, ಇದಕ್ಕಿಂತ ಹೆಚ್ಚು ಹೇಳುವಷ್ಟು ನಾನು ದೊಡ್ಡವನಲ್ಲ ಎಂದರು.

ADVERTISEMENT

‘ಹೊಸಪೇಟೆ ಜನ ಕನ್ನಡ ಚಿತ್ರರಂಗವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪುನೀತ್ ರಾಜ್‌ಕುಮರ್ ಅವರಿಗೆ ಬಹಳ ಇಷ್ಟವಾಗಿದ್ದ ನೆಲ ಇದು. ಕಲಾವಿದರಿಗೆ ಅಭಿಮಾನಿಗಳೇ ದೊಡ್ಡ ಆಸ್ತಿ. ಈ ಭಾಗದಲ್ಲಿ ಸಿನಿಮಾ ಪ್ರಿಯರ ದೊಡ್ಡ ದಂಡೇ ಇರುವ ಕಾರಣ ನಾವಿಲ್ಲಿಗೆ ಬಂದೇ ಬರುತ್ತೇವೆ, ಇಲ್ಲಿನ ಜನ ತೋರುವ ಪ್ರೀತಿಯೇ ನಮಗೆ ಇನ್ನಷ್ಟು ಕೆಲಸ ಮಾಡಲು ಹುಮ್ಮಸ್ಸು ನೀಡುವ ಟಾನಿಕ್ ಆಗಿರುತ್ತದೆ’ ಎಂದು ಪ್ರಣಮ್‌ ಹೇಳಿದರು.

‘ಅಪ್ಪ, ಅಣ್ಣ ಇಬ್ಬರೂ ಖ್ಯಾತ ಕಲಾವಿದರಾಗಿದ್ದರೂ, ನಾನು ಹೇಗೆ ನಟನೆ ಮಾಡುತ್ತೇನೆ ಎಂಬುದರ ಮೇಲೆಯೇ ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಾರೆ. ಹೀಗಾಗಿ ಕಲಾವಿದರ ಕುಟುಂಬದಲ್ಲಿ ಹುಟ್ಟಿದ್ದರೂ ನಮ್ಮ ಪ್ರತಿಭೆಯಷ್ಟೇ ನಮ್ಮನ್ನು ಮುಂದೆ ಕೊಂಡೊಯ್ಯುವಂತದ್ದು’ ಎಂದರು.

ಖುಷಿ ರವಿಗೆ ಖುಷಿ: ಚಿತ್ರದ ನಾಯಕಿ ಖುಷಿ ರವಿ ಮಾತನಾಡಿ, ‘ಅಪ್ಪು ಸರ್‌ ಅವರಿಗೆ ಹೊಸಪೇಟೆ ಮಂದಿ ಬಹಳ ಗೌರವ ತೋರಿದ್ದರು. ನಾವೆಲ್ಲ ಅವರ ಅಭಿಮಾನಿಗಳು. ‘ದಿಯಾ’ ಬಳಿಕ ನಾನು ಮಾಡುತ್ತಿರುವ ಮೂರನೇ ಸಿನಿಮಾ ಇದು. ಬಹಳಷ್ಟು ಶ್ರಮ ಹಾಕಿ ಚಿತ್ರ ಮಾಡಿದ್ದೇವೆ, ಜನರಿಗೆ ಇಷ್ಟವಾಗುವ ನಿರೀಕ್ಷೆ ಇದೆ ಎಂದರು.

ಚಿತ್ರದ ನಿರ್ದೇಶಕ ಶ್ರೀಕಾಂತ್ ಹುಣಸೂರು ಇದ್ದರು.

ಸಚಿನ್‌ ಬಸವರಾಜ್‌ ಸಂಗೀತ ನಿರ್ದೇಶಿಸಿರುವ ಈ ಚಿತ್ರದ ನಿರ್ಮಾಪಕರು ಹರಿಪ್ರಸಾದ್. ಪ್ರಣಮ್‌ಗೆ ಇದು ಎರಡನೇ ಚಿತ್ರ. ಬಹುತೇಕ ಹೊಸಬರೇ ಚಿತ್ರದಲ್ಲಿದ್ದು, ಕಮಾಂಗಿ ಹಾಡು ಹಿಟ್ ಆಗಿದ್ದಕ್ಕೆ ಚಿತ್ರತಂಡ ಖುಷಿಯಿಂದಿದೆ. ಪುನೀತ್ ರಾಜ್‌ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಚಿತ್ರದ ನಾಯಕ, ನಾಯಕಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಮಿರಾಲಂ ಟಾಕೀಸ್‌ ತನಕ ಕರೆತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.