ಬೆಂಗಳೂರು: ನಟ ಕಮಲ್ ಹಾಸನ್ ಅವರ ಕನ್ನಡ ಕುರಿತಾದ ಹೇಳಿಕೆಗೆ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕನ್ನಡದ ಪರ ಧ್ವನಿಯೆತ್ತಿರುವ ಚಂದನವನದ ನಟಿ ರಚಿತಾ ರಾಮ್, ತಪ್ಪು ಮಾಡಿದ ಮೇಲೆ ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ಕನ್ನಡ, ಕರ್ನಾಟಕ ಎಂದರೆ ಪ್ರತಿಯೊಬ್ಬ ಕನ್ನಡಿಗನಿಗೂ ಅದೊಂದು ಭಾವನೆ. ನಮ್ಮ ಬಾಷೆ ಬಗ್ಗೆ ಟೀಕಿಸಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಕನ್ನಡಿಗರು ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ, ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಯಾವ ಭಾಷೆಯ ಬಗ್ಗೆಯೂ ನಾವು ಕೆಟ್ಟದಾಗಿ ಮಾತನಾಡಿಲ್ಲ. ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ ಎನ್ನುವ ಸಾಲಿದೆ. ತಪ್ಪು ಮಾಡಿದ ಮೇಲೆ ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ. ಕನ್ನಡ ಮಾತಾಡುವಾಗ ತಪ್ಪಾದಾಗ ತಿದ್ದಿ ಹೇಳುತ್ತೇವೆ. ನವೆಂಬರ್ 1 ಮಾತ್ರವಲ್ಲದೆ ಈ ಸಮಯದಲ್ಲಿ ಕನ್ನಡದ ಮೇಲಿನ ಪ್ರೀತಿಯನ್ನು ತೋರಿಸೋಣ’ ಎಂದು ಕರೆ ನೀಡಿದ್ದಾರೆ.
‘ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ’ ಎನ್ನುವ ಕಮಲ್ ಹಾಸನ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಯನ್ನು ಖಂಡಿಸಿರುವ ಹಲವು ಕನ್ನಡ ಸಂಘಟನೆಗಳು ಕ್ಷಮೆ ಕೋರುವಂತೆ ಆಗ್ರಹಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಮಲ್, ‘ತಮಗೆ ಕಾನೂನು ಮತ್ತು ನ್ಯಾಯದ ಮೇಲೆ ನಂಬಿಕೆಯಿದೆ ಹಾಗೂ ಕರ್ನಾಟಕದ ಮೇಲಿರುವ ತಮ್ಮ ಪ್ರೀತಿ ನೈಜವಾದದ್ದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.