ADVERTISEMENT

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಕಮಲ್ ಹಾಸನ್‌ ಪತ್ರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 8:23 IST
Last Updated 3 ಜೂನ್ 2025, 8:23 IST
<div class="paragraphs"><p> ಕಮಲ್ ಹಾಸನ್</p></div>

ಕಮಲ್ ಹಾಸನ್

   

ಬೆಂಗಳೂರು: ಕನ್ನಡ ಭಾಷೆಯ ಕುರಿತು ನಟ ಕಮಲ್ ಹಾಸನ್‌ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದ್ದು, ಅವರ ಥಗ್‌ ಲೈಫ್‌ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕನ್ನಡಿಗರು ಆಗ್ರಹಿಸಿದ್ದಾರೆ. 

ಈ ಮಧ್ಯೆ ಕಮಲ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

ADVERTISEMENT

‘ತಮಿಳಿನಂತೆಯೇ, ಕನ್ನಡವು ನಾನು ಬಹಳ ಹಿಂದಿನಿಂದಲೂ ಮೆಚ್ಚುವ ಭಾಷೆಯಾಗಿದೆ. ಕನ್ನಡವು ಹೆಮ್ಮೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಿನ್ನೆಲೆ ಹೊಂದಿದೆ. ನನ್ನ ವೃತ್ತಿಜೀವನದುದ್ದಕ್ಕೂ, ಕನ್ನಡ ಮಾತನಾಡುವ ಸಮುದಾಯವು ನನಗೆ ಅಪಾರ ಪ್ರೀತಿ ನೀಡಿದೆ. ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದದ್ದು. ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಹೊಂದಿರುವ ಪ್ರೀತಿಗೆ ನನಗೆ ಅಪಾರ ಗೌರವವಿದೆ’ ಎಂದಿದ್ದಾರೆ.

ಥಗ್‌ ಲೈಪ್‌ ಸಿನಿಮಾದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್‌ ಕುಟುಂಬದ ಬಗ್ಗೆ ಅದರಲ್ಲೂ ಶಿವರಾಜ್‌ಕುಮಾರ್‌ ಅವರ ಬಗ್ಗೆ ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನನ್ನ ಮಾತುಗಳು ನಾವೆಲ್ಲರೂ ಒಂದೇ ಮತ್ತು ಒಂದೇ ಕುಟುಂಬದವರು ಎಂದಾಗಿತ್ತೇ ಹೊರತು ಕನ್ನಡವನ್ನು ಕೆಳಮಟ್ಟದಲ್ಲಿ ನೋಡುವುದಲ್ಲಾಗಿತ್ತು. ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ ಅಥವಾ ಚರ್ಚೆ ಇಲ್ಲ ಎಂದಿದ್ದಾರೆ.

ನಾನು ಯಾವಾಗಲೂ ಎಲ್ಲಾ ಭಾರತೀಯ ಭಾಷೆಗಳನ್ನು ಗೌರವಿಸುತ್ತೇನೆ. ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ, ಏಕೆಂದರೆ ಅಂತಹ ಅಸಮತೋಲನವು ಭಾರತದ ಒಕ್ಕೂಟದ ಭಾಷಾ ರಚನೆಯನ್ನು ಹಾಳು ಮಾಡುತ್ತದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಈ ನೆಲದ ಎಲ್ಲಾ ಭಾಷೆಗಳೊಂದಿಗೂ ನಾನು ಬಾಂಧವ್ಯ ಹೊಂದಿದ್ದೇನೆ ಎಂದಿದ್ದಾರೆ.

ನನ್ನ ಹಿರಿಯರು ನನಗೆ ಕಲಿಸಿದ  ಪ್ರೀತಿ ಮತ್ತು ಬಾಂಧವ್ಯವನ್ನೇ ನಾನು ಹಂಚಿಕೊಳ್ಳಲು ಬಯಸಿದ್ದೆ. ಈ ಪ್ರೀತಿ ಮತ್ತು ಬಾಂಧವ್ಯದಿಂದಲೇ ಶಿವಣ್ಣ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಹಾಜರಾಗಿದ್ದರು. ಇದರಿಂದಾಗಿ ಶಿವಣ್ಣ ಇಷ್ಟೊಂದು ಮುಜುಗರ ಅನುಭವಿಸಬೇಕಾಯಿತು ಎಂದು ನನಗೆ ನಿಜವಾಗಿಯೂ ವಿಷಾದವಿದೆ. ಆದರೆ ಪರಸ್ಪರರ ಬಗ್ಗೆ ಇರುವ ನಿಜವಾದ ಪ್ರೀತಿ ಮತ್ತು ಗೌರವ ಯಾವಾಗಲೂ ಉಳಿಯುತ್ತದೆ ಮತ್ತು ಈಗ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬುದು ನನ್ನ ನಂಬಿಕೆ ಎಂದಿದ್ದಾರೆ

ಸಿನಿಮಾ ಜನರ ನಡುವಿನ ಸೇತುವೆಯಾಗಿ ಉಳಿಯಬೇಕು, ಅವರನ್ನು ವಿಭಜಿಸುವ ಗೋಡೆಯಾಗಿ ಉಳಿಯಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು ಮತ್ತು ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ದ್ವೇಷಕ್ಕೆ ಯಾವುದೇ ಅವಕಾಶ ನೀಡಿಲ್ಲ, ಎಂದಿಗೂ ಅದನ್ನು ಬಯಸುವುದಿಲ್ಲ. ಈ ತಪ್ಪು ತಿಳುವಳಿಕೆ ತಾತ್ಕಾಲಿಕವಾಗಿದ್ದು, ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವದ ಬಗ್ಗೆ ಸಾಬೀತುಪಡಿಸಲು ಇದು ಒಂದು ಅವಕಾಶ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದು ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಅನುಮತಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.