ADVERTISEMENT

ಸರ್ವಾಧಿಕಾರವೇ ಪರಿಹಾರ: ಇನ್‌ಸ್ಟಾಗ್ರಾಂನಲ್ಲಿ ಕಂಗನಾ ಅಭಿಪ್ರಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2021, 11:02 IST
Last Updated 19 ನವೆಂಬರ್ 2021, 11:02 IST
ಕಂಗನಾ ಪ್ರಕಟಿಸಿರುವ ಪೋಸ್ಟ್‌ಗಳು
ಕಂಗನಾ ಪ್ರಕಟಿಸಿರುವ ಪೋಸ್ಟ್‌ಗಳು    

ಬೆಂಗಳೂರು: ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿರುವುದಕ್ಕೆ ಬಾಲಿವುಡ್‌ ನಟಿ ಕಂಗನಾ ರನೌತ್‌ ನಿರಾಶೆ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಂನ ‘ಸ್ಟೋರೀಸ್‌’ ವಿಭಾಗದಲ್ಲಿ ಅವರು ಶುಕ್ರವಾರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಾಯ್ದೆಯ ರದ್ದತಿ ಬಗ್ಗೆ ವ್ಯಕ್ತಿಯೊಬ್ಬರು ಮಾಡಿದ್ದ ಟ್ವೀಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ, ಅದರ ಮೇಲೆ ತಮ್ಮ ಅನಿಸಿಕೆಯನ್ನೂ ಬರೆದಿದ್ದಾರೆ. ‘ಇದು ದುಃಖದ ಸಂಗತಿ, ನಾಚಿಕೆಗೇಡಿನದ್ದು, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನ ದೇಶದಲ್ಲಿ ಕಾನೂನುಗಳನ್ನು ರೂಪಿಸಲಾರಂಭಿಸಿದ್ದಾರೆಯೇ ಹೊರತು, ಸಂಸತ್ತಿನಲ್ಲಿರುವ ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಇದು ಕೂಡ ಜಿಹಾದಿ ರಾಷ್ಟ್ರವಾಗಿದೆ. ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು,’ ಎಂದು ಅವರು ಕಟು ಶಬ್ಧಗಳಿಂದ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ADVERTISEMENT

ಎರಡನೇ ಪೋಸ್ಟ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಶುಭಾಶಯ ಕೋರುವ ನೆಪದಲ್ಲಿ ಅವರನ್ನು ಟೀಕಿಸಿರುವ ಕಂಗನಾ, ಕೇಂದ್ರದ ನಿರ್ಧಾರದ ವಿರುದ್ಧವೂ ಹರಿಹಾಯ್ದಿದ್ದಾರೆ. ‘ರಾಷ್ಟ್ರದ ಸಾಕ್ಷಿಪ್ರಜ್ಞೆ ಗಾಢವಾದ ನಿದ್ರೆಯಲ್ಲಿರುವಾಗ, ಬೆತ್ತವೊಂದೇ ಪರಿಹಾರ ಮತ್ತು ಸರ್ವಾಧಿಕಾರವೇ ಅಂತಿಮ. ಜನ್ಮದಿನದ ಶುಭಾಶಯಗಳು ಮಾಜಿ ಪ್ರಧಾನಿಗಳೇ’ ಎಂದು ಬರೆದಿದ್ದಾರೆ.

ನ.19 ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 104 ನೇ ಜನ್ಮ ದಿನ.

ಇಂದು (ಶುಕ್ರವಾರ) ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು. ಸುಮಾರು ಒಂದು ವರ್ಷದಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದು, ಕೊನೆಗೂ ಕೇಂದ್ರ ಸರ್ಕಾರವು ಕಾಯ್ದೆಗಳ ರದ್ದತಿ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.