ADVERTISEMENT

ಕಟ್ಟಡ ರಿಪೇರಿಗೆ ಹಣವಿಲ್ಲ, ಆದ್ರೆ ಅಲ್ಲಿಂದಲೇ ಕೆಲಸ ಮಾಡ್ತೀನಿ: ಕಂಗನಾ ರನೌತ್

ಏಜೆನ್ಸೀಸ್
Published 11 ಸೆಪ್ಟೆಂಬರ್ 2020, 11:34 IST
Last Updated 11 ಸೆಪ್ಟೆಂಬರ್ 2020, 11:34 IST
ನಟಿ ಕಂಗನಾ ರನೌತ್
ನಟಿ ಕಂಗನಾ ರನೌತ್   

ಮುಂಬೈ: 'ಬೃಹನ್ಮುಂಬೈಮಹಾನಗರ ಪಾಲಿಕೆಯು (ಬಿಎಂಸಿ) ವಿರೂಪಗೊಳಿಸಿರುವ ನನ್ನ ಕಚೇರಿಯನ್ನು ರಿಪೇರಿ ಮಾಡಿಸಿಕೊಳ್ಳುವಷ್ಟು ಹಣ ನನ್ನ ಬಳಿಯಿಲ್ಲ. ಹಾಗೆಂದು ನಾನು ಕೆಲಸವನ್ನೂ ನಿಲ್ಲಿಸುವುದಿಲ್ಲ' ಎಂದು ಕಂಗನಾ ರನೌತ್ ಟ್ವೀಟ್ ಮಾಡಿದ್ದಾರೆ.

ಬಿಎಂಸಿ ಕ್ರಮದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ವಿಡಿಯೊ ಟ್ವೀಟ್‌ಗಳ ಮೂಲಕ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಕಂಗನಾ, ಇದೀಗ ಈ ವಿಷಯವನ್ನು ಮಹಿಳೆಯರ ಪ್ರತಿರೋಧ ಶಕ್ತಿ ಹಾಗೂ ಆತ್ಮವಿಶ್ವಾಸದ ಪ್ರಶ್ನೆಯಾಗಿಸಲು ಯತ್ನಿಸಿದ್ದಾರೆ.

'ನಾನು ಜನವರಿ 15ರಂದು ಕಚೇರಿ ತೆರೆದೆ.ಆದರೆ ಕೊರೊನಾವೈರಸ್‌ ಹೊಡೆತದಿಂದಾಗಿ ಹೆಚ್ಚಿನವರಂತೆ ನಾನು ಕೂಡ ಕೆಲಸ ಮಾಡಿಲ್ಲ. ಹಾಳಾಗಿರುವ ಕಟ್ಟಡವನ್ನು ನವೀಕರಿಸಲುನನ್ನ ಬಳಿ ಹಣವಿಲ್ಲ.ಈ ಜಗತ್ತಿನಲ್ಲಿ ಹೋರಾಡಲು ಧೈರ್ಯವಿರುವ ಮಹಿಳೆಯ ಇಚ್ಛಾಶಕ್ತಿಯ ಸಂಕೇತವಾಗಿ ಧ್ವಂಸಗೊಳಿಸಿದ ಕಚೇರಿಯ ಅವಶೇಷಗಳ ಮಧ್ಯೆಯೇ ನಾನು ಕೆಲಸ ಮಾಡುತ್ತೇನೆ' ಎಂದು ಆತ್ಮವಿಶ್ವಾಸದಿಂದ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಕಂಗನಾ VS ಉದ್ಧವ್ ಎಂಬ ಹ್ಯಾಷ್‌ಟ್ಯಾ‌ಗ್‌ ಬಳಸಿರುವುದು ವಿಶೇ‍ಷ.

ADVERTISEMENT

ಕೇಂದ್ರ ಗೃಹ ಸಚಿವಾಲಯ ಒದಗಿಸಿದ ಭದ್ರತಾ ಸಿಬ್ಬಂದಿಯಿಂದ ಸುತ್ತುವರೆದಿದ್ದ ಕಂಗನಾ ಸೆಪ್ಟೆಂಬರ್ 9 ರಂದು ಬಿಎಂಸಿಯು ಕಟ್ಟಡದ ಕೆಲಭಾಗಗಳನ್ನು ಉರುಳಿಸಿದ ಕೆಲವೇ ಗಂಟೆಗಳ ನಂತರ ಮುಂಬೈಗೆ ಬಂದರು. ಮರುದಿನ ನಟಿಯು ಕಚೇರಿಗೆ ಭೇಟಿ ನೀಡಿ, ಹಾನಿಯಾಗಿರುವುದನ್ನು ಸಮೀಕ್ಷೆ ನಡೆಸಿದರು.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಮುಂಬೈನಲ್ಲಿ ಅಸುರಕ್ಷಿತ ಭಾವನೆ ಹೊಂದಿದ್ದೇನೆ ಎಂದು ಕಂಗನಾ ಹೇಳಿದ್ದರು. ಇದಕ್ಕೆ ಶಿವಸೇನಾ ಮುಖಂಡರು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, 'ಶಿವಸೇನಾ ನಾಯಕ ಸಂಜಯ್‌ ರಾವುತ್ ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ನಾನು ಮುಂಬೈಗೆ ಹಿಂತಿರುಗಬಾರದೆಂದು ಹೇಳಿದ್ದಾರೆ' ಎಂದು ದೂರಿದ್ದರು.

'ಮುಂಬೈ ನಗರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ? ಮುಂಬೈ ಪೊಲೀಸರ ಉಸ್ತುವಾರಿಯಲ್ಲಿರಲು ನನಗೆ ಭಯವಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದರು.

ಇದಾದ ಬಳಿಕ ಶಿವಸೇನಾ ಮತ್ತು ಕಂಗನಾ ನಡುವೆ ವಾಕ್ಸಮರ ಆರಂಭವಾಗಿತ್ತು. ಈ ಮಧ್ಯೆ ತನ್ನ ಸುರಕ್ಷತೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಕಳವಳ ವ್ಯಕ್ತಪಡಿಸಿದ ನಂತರ ಕೇಂದ್ರ ಗೃಹ ಸಚಿವಾಲಯವು ವೈ+ ಶ್ರೇಣಿಯ ಭದ್ರತೆಯನ್ನು ಒದಗಿಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.