
ನಟನೆಯತ್ತ ಆಕರ್ಷಣೆ ಹುಟ್ಟಿದ್ದು ಹೇಗೆ?
ನಾನು ದಾವಣಗೆರೆ ಸಮೀಪದ ದೊಡ್ಡಬ್ಬಿಗೆರೆ ಎಂಬ ಪುಟ್ಟಹಳ್ಳಿಯವನು. ನಾನು ಬೆಳೆದಿದ್ದು ಬೆಳಗಾವಿಯ ಹಿಡಕಲ್‌ನಲ್ಲಿ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಅದೇ ಊರಲ್ಲಿ ಪೂರ್ಣಗೊಳಿಸಿ, ಡಿಗ್ರಿಗೆ ಬೆಳಗಾವಿಗೆ ಬಂದೆ. ಬಳಿಕ ಕೆಲಸ ಮಾಡುತ್ತೇನೆ ಎಂದು ಸುಳ್ಳು ಹೇಳಿ ಬೆಂಗಳೂರಿಗೆ ಬಂದೆ. ನಟನಾಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಮನೆಯಲ್ಲಿ ಹೀಗೆ ಹೇಳಿದರೆ ಬಿಡುವುದಿಲ್ಲ ಎಂದು ತಿಳಿದಿತ್ತು. ಜೊತೆಗೆ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಒಂದು ದೃಶ್ಯವನ್ನು ನ್ಯೂಸ್ ಚಾನೆಲ್ ಒಂದರಲ್ಲಿ ಪದೇ ಪದೇ ನೋಡಿದ್ದೆ. ಈ ನಗರ ನನ್ನನ್ನು ಸೆಳೆದಿತ್ತು. ಸುಮಾರು 16 ವರ್ಷಗಳ ಹಿಂದೆ ಇಲ್ಲಿಗೆ ಬಂದಿಳಿದು ಗಾಂಧಿ ನಗರದ ಮೂಲಕ ಅಕ್ಕನ ಮನೆಗೆ ತೆರಳುತ್ತಿದ್ದಾಗ ಅಲ್ಲಿ ನಿಲ್ಲಿಸಿರುವ ಹೀರೊಗಳ ಕಟೌಟ್‌ಗಳು ನನ್ನನ್ನು ಮತ್ತಷ್ಟು ಹುರಿದುಂಬಿಸಿದವು.
ಅಂದಹಾಗೆ ನನಗೆ ನಟನೆಯ ಹುಚ್ಚು ಹಿಡಿಸಿದ್ದು ಪ್ರಾಥಮಿಕ ಶಾಲೆಯಲ್ಲಿ ನೋಡಿದ್ದ ‘ನಿಸರ್ಗ ದೇವತೆ’ ಎಂಬ ನಾಟಕ. ಬಳಿಕ ಪಿಯುಸಿಯಲ್ಲಿದ್ದಾಗ ಮೊದಲ ಬಾರಿ ನಟ ಸುದೀಪ್ ಅವರನ್ನು ಕಣ್ಣಾರೆ ನೋಡಿದ್ದೆ. ಸೂಪರ್‌ಸ್ಟಾರ್ ಒಬ್ಬರನ್ನು ಅಷ್ಟು ಹತ್ತಿರದಿಂದ ನೋಡಿದ್ದು ಅದೇ ಮೊದಲು. ಇದಾಗಿ ಒಂದು ವಾರ ಕನಸಲ್ಲಿ ಅವರೇ ಬರುತ್ತಿದ್ದರು. ನಾನು ಇವರಂತೇ ಆಗಬೇಕು ಎಂಬುದು ದೃಢವಾಗಿ ಮನಸ್ಸಲ್ಲಿ ಕುಳಿತಿತ್ತು.
ಧಾರಾವಾಹಿಯ ಮೆಟ್ಟಿಲುಗಳಲ್ಲಿ ಕಲಿತದ್ದು ಏನು?
ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಸಿನಿಮಾದಲ್ಲಿ ವರ್ಷಕ್ಕೆ ಗರಿಷ್ಠ 150 ದಿನವಷ್ಟೇ ಕ್ಯಾಮೆರಾ ಮುಂದೆ ಇರಲು ಸಾಧ್ಯ. ಧಾರಾವಾಹಿಯಲ್ಲಿ ಪ್ರತಿದಿನ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದೇ ನಟನಿಗಿರುವ ಪ್ಲಸ್ ಪಾಯಿಂಟ್. ಇಷ್ಟೇ ಅಲ್ಲ, ದಿನವೂ ಜನರ ಮನೆ ತಲುಪುತ್ತೇವೆ. ಈ ಹೆಜ್ಜೆಗಳಲ್ಲಿ ಕಲಿಕೆ ಇದ್ದೇ ಇರುತ್ತದೆ. ನಟನೆಯಲ್ಲಿ ಹೆಚ್ಚಿನ ಸುಧಾರಣೆ ತರಲು ಅವಕಾಶ ಸಿಗುವುದೇ ಧಾರಾವಾಹಿಗಳಲ್ಲಿ. ನಿತ್ಯ ನಟನೆ ಮಾಡುತ್ತಾ ನೈಪುಣ್ಯತೆ ನಮಗೆ ಅರಿವಿಲ್ಲದಂತೇ ಬರುತ್ತದೆ. ಅದರಲ್ಲೂ ಮುಖ್ಯವಾಗಿ ‘ಗಿಣಿರಾಮ’ ನನ್ನ ಕನಸುಗಳನ್ನು ಈಡೇರಿಸಿದ ಧಾರಾವಾಹಿ. ಆ ರೀತಿಯ ಪಾತ್ರ ಮಾಡಬೇಕು ಎನ್ನುವ ಕನಸು ಇತ್ತು. ನನ್ನೊಳಗಿನ ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಲು, ನನ್ನನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳಲು ವೇದಿಕೆ ನೀಡಿದ್ದು ಈ ‘ಗಿಣಿರಾಮ’.
ಕರಾವಳಿ ಭಾಗದ ಕಥೆಗೆ ಹೊಂದಿಕೊಂಡಿದ್ದು ಹೇಗೆ?
ಇದಕ್ಕಾಗಿ ಹಲವು ವರ್ಕ್‌ಶಾಪ್‌ಗಳನ್ನು ಮಾಡಿದ್ದರು. ಕರ್ನಾಟಕದ ಯಾವುದೇ ಭಾಗದಲ್ಲಿ ಸಿನಿಮಾ ಮಾಡಿದರೂ ಅದು ಕನ್ನಡವೇ. ಕನ್ನಡ ಉಚ್ಚಾರ, ಶೈಲಿಯಲ್ಲಿ ಬದಲಾವಣೆ ಇರಬಹುದು. ಹಾಗಾಗಿ ಕಲಿಯುವುದಕ್ಕೆ ಕಷ್ಟವೇನಿಲ್ಲ. ನನಗೆ ಮೊದಲಿನಿಂದಲೂ ಕರಾವಳಿ ಕನ್ನಡ ಎಂದರೆ ಇಷ್ಟ. ಬಹಳ ಗ್ರಾಂಥಿಕವಾದ, ಸ್ಪಷ್ಟವಾದ ಕನ್ನಡ ಅಲ್ಲಿಯದ್ದು. ಈ ಕಥೆಯ ಸ್ಕ್ರಿಪ್ಟ್ ಬಂದಾಗ ರಂಗಭೂಮಿಯ ವಿದು ಎನ್ನುವವರು ನನಗೆ ಹಾಗೂ ಚೈತ್ರಾ ಅವರಿಗೆ ವರ್ಕ್‌ಶಾಪ್ ಮಾಡಿದರು. ನಾನು ಅಲ್ಲಿನ ಜನರ ಜೀವನಶೈಲಿ, ನಡವಳಿಕೆಯನ್ನು ತಿಳಿದುಕೊಳ್ಳಲು ಸ್ಥಳೀಯ ಬಸ್‌ಗಳಲ್ಲಿ ಓಡಾಡಿದೆ. ಸುಮಾರು ಒಂದು ವರ್ಷ ನಾನು ಕರಾವಳಿಯಲ್ಲಿ ಕಳೆದೆ. ತಿಂಗಳ ಮೊದಲಾರ್ಧ ಧಾರಾವಾಹಿ ಮಾಡುತ್ತಾ, ದ್ವಿತೀಯಾರ್ಧದಲ್ಲಿ ಸಿನಿಮಾ ಮಾಡುತ್ತಿದ್ದೆ.
ಚೈತ್ರಾ ಅವರು ಈಗಾಗಲೇ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ತಂಡದ ಜೊತೆ ಬೆರೆಯುವ, ಕಲ್ಲನ್ನೂ ಮಾತನಾಡಿಸುವ ಸಾಮರ್ಥ್ಯವುಳ್ಳ ಹುಡುಗಿ ಅವರು.
ಸಿನಿಮಾದ ಕಥಾವಸ್ತು ಮತ್ತು ಪಾತ್ರದ ಬಗ್ಗೆ...
ನಾನು ‘ಚೇತು’ ಎನ್ನುವ ಪಾತ್ರ ಮಾಡಿದ್ದೇನೆ. ಮಂಗಳೂರಿನಲ್ಲಿರುವ ಹುಲಿವೇಷದ ಗುಂಪಿನಲ್ಲಿ ಇರುವ ಓರ್ವ ಸರಳ ವ್ಯಕ್ತಿತ್ವದ ಹುಡುಗ. ತನ್ನದೊಂದು ಕುಟುಂಬ ಕಟ್ಟಿಕೊಳ್ಳಬೇಕು ಎಂಬ ಆಸೆ ಇಟ್ಟುಕೊಂಡು ಜೀವನ ನಡೆಸುವಾತ. ಹೆಚ್ಚಿನ ಕನಸುಗಳೇನು ಈತನಿಗಿಲ್ಲ. ಈ ಹುಡುಕಾಟದಲ್ಲಿ ಒಬ್ಬಳು ಸಿಗುತ್ತಾಳೆ. ಬಳಿಕ ಏನೇನಾಗುತ್ತದೆ ಎನ್ನುವುದೇ ಕಥೆ. ಮುಖ್ಯವಾಗಿ ಹುಲಿವೇಷ ಎನ್ನುವುದು ಕಥೆಯ ಜೊತೆಗೇ ಸಾಗುತ್ತದೆ. ಹುಲಿವೇಷ ಎನ್ನುವುದು ಮೆರವಣಿಗೆ, ಕಾರ್ಯಕ್ರಮಕ್ಕೆ ಅಂದುಕೊಂಡಿದ್ದಾರೆ. ಆದರೆ ಹುಲಿವೇಷ ಹಾಕುವುದಕ್ಕೆ ಒಂದು ಹಿನ್ನೆಲೆ ಇದೆ. ಹರಕೆಯಾಗಿ ವೇಷ ಹಾಕುತ್ತಾರೆ. ಇದನ್ನು ಯಾವ ಸಿನಿಮಾಗಳಲ್ಲೂ ತೋರಿಸಿಲ್ಲ. ಸಿನಿಮಾದಲ್ಲಿ 90ರ ದಶಕದಿಂದ ಹಿಡಿದು ಮೂರು ದಶಕಗಳ ‘ಮಾರ್ನಮಿ’ ಎಂದರೆ ದಸರಾ ತೋರಿಸುತ್ತೇವೆ. ಈ ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ ಹಾಗೂ ನನ್ನ ಪಾತ್ರಕ್ಕೂ ಮೂರು ಶೇಡ್ಸ್ ಇವೆ.
ಧಾರಾವಾಹಿ–ಸಿನಿಮಾ ನಡುವೆ ನಿಮ್ಮ ಆಯ್ಕೆ?
ಇಷ್ಟು ವರ್ಷ ನಾನೂ ಎರಡೂ ದೋಣೆಯಲ್ಲಿ ಕಾಲಿಟ್ಟುಕೊಂಡು ಬಂದೆ. ಮೂರು ಧಾರಾವಾಹಿಗಳನ್ನು ಮಾಡಿದ್ದೇನೆ. ಮೂರೂ ಒಳ್ಳೆಯ ರೇಟಿಂಗ್ಸ್ ತಂದುಕೊಟ್ಟಿವೆ. ಜನರನ್ನು ಕಿರುತೆರೆಯಲ್ಲಿ ರಂಜಿಸಿದ್ದೇನೆ. ಇದೀಗ ಹಿರಿಪರದೆಗೆ ಹೆಜ್ಜೆ ಇಡುವ ಸಂದರ್ಭ. ಪ್ರತಿಯೊಬ್ಬರ ಜೀವನದಲ್ಲೂ ಒಂದು ತಿರುವು ಇರುತ್ತದೆ. ನನಗೆ ಅದು ಕಾಣುತ್ತಿದೆ. ಸಿನಿಮಾದಲ್ಲೇ ಮುಂದುವರಿಯುವ ನಿರ್ಧಾರ ಮಾಡಿದ್ದೇನೆ. ಧಾರಾವಾಹಿಗಳ ಅವಕಾಶಗಳು ಬಂದಿವೆ. ಆದರೆ ಒಪ್ಪಿಕೊಂಡಿಲ್ಲ. ಎರಡು ಸಿನಿಮಾ ಕಥೆಗಳನ್ನು ಕೇಳಿದೆ. ಆದರೆ ಪಾತ್ರಕ್ಕೆ ನಾನು ಸೂಕ್ತ ಎಂದೆನಿಸದೇ ಇದ್ದ ಕಾರಣ ಒಪ್ಪಿಕೊಂಡಿಲ್ಲ.
ರಿತ್ವಿಕ್ ಮಠದ್
ಸಿನಿಮಾ ಪದೇ ಪದೇ ಮುಂದೂಡಿಕೆಯಾಗಿದ್ದು ಪರಿಣಾಮ ಬೀರಲಿದೆಯೇ?
ಟ್ರೇಲರ್ ಬಿಡುಗಡೆ ಮಾಡಿದ್ದರೂ ನಮ್ಮ ಸಿನಿಮಾದ ಬಗ್ಗೆ ಆಗ ಹೆಚ್ಚಿನ ಜನರಿಗೆ ತಿಳಿದೇ ಇರಲಿಲ್ಲ. ಈ ಕಾರಣಕ್ಕಾಗಿಯೇ ಮುಂದೂಡಿದ್ದೆವು. ಒಳ್ಳೆಯ ಕಾಂಟೆಂಟ್ ಇರುವ ಸಿನಿಮಾವನ್ನು ಜನರಿಗೆ ತಲುಪಿಸುವುದು ಸದ್ಯದ ಸ್ಥಿತಿಯಲ್ಲಿ ಬಹುಮುಖ್ಯ. ಆಗ ಜನ ಖಂಡಿತವಾಗಿಯೂ ಬರುತ್ತಾರೆ. ಸಿನಿಮಾದ ಪರಿಚಯ ಮಾಡಿಸದೇ ಸಿನಿಮಾ ಸೋತರೆ ಬಳಿಕ ಜನರಿಗೆ ಬೈಯುವುದೂ ಸರಿಯಲ್ಲ. ನಮ್ಮ ಸಿನಿಮಾದ ಕಥೆಗೆ ಗೆಲ್ಲುವ ಸಾಮರ್ಥ್ಯವಿದೆ. ಹೀಗಾಗಿ ಜನರಿಗೆ ಪರಿಚಯ ಮಾಡಿಸಿ ನಂತರ ಬರುತ್ತಿದ್ದೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.