ADVERTISEMENT

ಭೂಮಿ ತಾಯಿಯ ಮಡಿಲು ಸೇರಿದ ಚಂದನವನದ 'ರಾಜಕುಮಾರ' ಪುನೀತ್

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 11:52 IST
Last Updated 31 ಅಕ್ಟೋಬರ್ 2021, 11:52 IST
ಭೂಮಿ ತಾಯಿಯ ಮಡಿಲು ಸೇರಿದ ಗಂಧದ ಗುಡಿಯ 'ರಾಜಕುಮಾರ' ಪುನೀತ್
ಭೂಮಿ ತಾಯಿಯ ಮಡಿಲು ಸೇರಿದ ಗಂಧದ ಗುಡಿಯ 'ರಾಜಕುಮಾರ' ಪುನೀತ್   

ಬೆಂಗಳೂರು: ಪೂರ್ವದಲ್ಲಿ ಸೂರ್ಯ ಉದಯಿಸುತ್ತಿರುವ ಹೊತ್ತಿನಲ್ಲೇ ಗಂಧದ ಗುಡಿಯ 'ರಾಜಕುಮಾರ' ಪುನೀತ್, ಭೂಮಿ ತಾಯಿಯ ಮಡಿಲಿನೊಳನೆ ಚಿರನಿದ್ರೆಗೆ ಜಾರಿದರು.

ಮಾನವತೆಯ ಪಡಿಚ್ಚಿನಂತೆ ಬದುಕಿನುದ್ದಕ್ಕೂ ಜೀವಿಸಿದ ನಟ ಪುನೀತ್ ರಾಜ್‌ಕುಮಾರ್ ಇನ್ನು ನೆನಪು ಮಾತ್ರ. ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದ ಅಪ್ಪು ಭಾನುವಾರ ಬೆಳಿಗ್ಗೆ ಭೂ ತಾಯಿಯ ಗರ್ಭ ಸೇರಿದರು.

ಅಪ್ಪ ಡಾ.ರಾಜ್‌ಕುಮಾರ್, ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಅವರ ಮುದ್ದಿನ‌ ಮಗ, ತಂದೆ ತಾಯಿಯೊಂದಿಗೆ ಕಂಠೀರವ ಸ್ಟುಡಿಯೊದಲ್ಲಿ ಚಿರ ನಿದ್ರೆಗೆ ಜಾರಿದರು.

ADVERTISEMENT

ಸರಳತೆಯ ಪ್ರತಿರೂಪದಂತಿದ್ದ ಪ್ರೀತಿಯ ಅಪ್ಪು, ಶ್ವೇತ ವಸ್ತ್ರಧಾರಿಯಾಗಿ ನಿಸ್ತೇಜವಾಗಿ ಮಲಗಿರುವುದನ್ನು ಕಂಡು ರಾಜ್ ಕುಟುಂಬ ಸದಸ್ಯರಲ್ಲಿ ಮಡುಗಟ್ಟಿದ್ದ ದುಃಖ ಕಣ್ಣೀರ ಧಾರೆಯಾಗಿ ಹರಿಯಿತು. ಸ್ಟುಡಿಯೊದ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರೀತಿಯ ಅಪ್ಪು, ಭೌತಿಕವಾಗಿ ಇನ್ನೆಂದೂ ತನ್ನ ಜೊತೆ ಇರಲಾರ ಎಂಬುದನ್ನು ನೆನೆದು ಶಿವರಾಜ್‌ಕುಮಾರ್ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಕಂಠೀರವ ಸ್ಟುಡಿಯೊದಲ್ಲಿ ತೋಡಲಾಗಿದ್ದ ಗುಂಡಿಯಲ್ಲಿ ಇಟ್ಟಿದ್ದ ಮೃತದೇಹದ ಮೇಲೆ ನೆರೆದಿದ್ದವರೆಲ್ಲಾ ಹಿಡಿ ಮಣ್ಣು ಹಾಕಿ ನೆಚ್ಚಿನ ನಟ, ಆಪ್ತ ಗೆಳೆಯನನ್ನು ಬಾರದ ಲೋಕಕ್ಕೆ ಬೀಳ್ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.