ADVERTISEMENT

61ನೇ ವಸಂತಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್: ಸಿಎಂ, ಡಿಸಿಎಂ ಸೇರಿ ಗಣ್ಯರಿಂದ ಶುಭ ಹಾರೈಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2023, 10:11 IST
Last Updated 12 ಜುಲೈ 2023, 10:11 IST
ಶಿವರಾಜ್‌ ಕುಮಾರ್‌
ಶಿವರಾಜ್‌ ಕುಮಾರ್‌   

ಬೆಂಗಳೂರು: ಸೆಂಚುರಿ ಸ್ಟಾರ್‌, ಕರುನಾಡ ಚಕ್ರವರ್ತಿ ನಟ ಶಿವರಾಜ್‌ ಕುಮಾರ್‌ ಅವರಿಗೆ ಇಂದು (ಜುಲೈ 12) 61ನೇ ಜನ್ಮದಿನದ ಸಂಭ್ರಮ.

ನೆಚ್ಚಿನ ನಟನ ಹುಟ್ಟುಹಬ್ಬದ ಅಂಗವಾಗಿ ಚಿತ್ರರಂಗ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಹಾರೈಸಿದ್ದಾರೆ.

‘ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಪ್ರತಿಭಾವಂತ ನಟ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಟನಾ ಕೌಶಲದಿಂದ ಮಾತ್ರವಲ್ಲ ತಮ್ಮ ವಿನಯಶೀಲ ನಡೆ-ನುಡಿಗಳಿಂದಲೂ ಕೋಟ್ಯಂತರ ಜನರ ಪ್ರೀತಿ-ಅಭಿಮಾನಗಳಿಗೆ ಪಾತ್ರರಾಗಿರುವ ಶಿವರಾಜ್ ಕುಮಾರ್ ಅವರಿಗೆ ಆಯುಷ್ಯ ಮತ್ತು ಆರೋಗ್ಯದ ಭಾಗ್ಯ ದೊರೆಯಲಿ ಎಂದು ಹಾರೈಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಕನ್ನಡದ ಖ್ಯಾತ ನಟ, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮಿಂದ ಚಿತ್ರರಂಗ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತಾ, ಭಗವಂತನ ಆಶೀರ್ವಾದ ಸದಾ ತಮ್ಮ ಮೇಲೆ ಇರಲಿ ಎಂದು ಶುಭ ಹಾರೈಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ, ಸಂತೋಷ, ಯಶಸ್ಸು ಮತ್ತಷ್ಟು ಸಿಗಲೆಂದು ಹಾರೈಸುತ್ತೇನೆ. ಯಾವಾಗಲೂ ಸ್ಫೂರ್ತಿದಾಯಕವಾಗಿರಿ ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ನಟ ರಾಘವೇಂದ್ರ ರಾಜ್‌ಕುಮಾರ್ ಟ್ವೀಟ್ ಮಾಡಿದ್ದಾರೆ.

‘ಘೋಸ್ಟ್‘ ಚಿತ್ರದ ಟೀಸರ್ ಬಿಡುಗಡೆ

ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ‘ಘೋಸ್ಟ್’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.

ಸಂತೋಷ್ ಚಿತ್ರಮಂದಿರಕ್ಕೆ ಆಗಮಿಸುವ ಮುನ್ನ ಕಂಠೀರವ ಸ್ಟುಡಿಯೊಗೆ ಭೇಟಿ ನೀಡಿ ತಂದೆ ರಾಜ್ ಕುಮಾರ್ ಹಾಗೂ ತಾಯಿ ಪಾರ್ವತಮ್ಮ ಅವರ ಸಮಾಧಿಗೆ ಶಿವರಾಜ್‌ ಕುಮಾರ್‌ ಪೂಜೆ ಸಲ್ಲಿಸಿದ್ದಾರೆ.

ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರದ ಟ್ರೇಲರ್ ಮುಂದಿನ ತಿಂಗಳು ಬಳ್ಳಾರಿಯಲ್ಲಿ ಬಿಡುಗಡೆಯಾಗಲಿದೆ. ದಸರಾ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.