ADVERTISEMENT

ಚಲನಚಿತ್ರ ಪ್ರಶಸ್ತಿಗಳು ಪ್ರಕಟ: ಉಮಾಶ್ರೀಗೆ ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ

2019ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 16:23 IST
Last Updated 30 ಅಕ್ಟೋಬರ್ 2025, 16:23 IST
ಉಮಾಶ್ರೀ
ಉಮಾಶ್ರೀ   

ಬೆಂಗಳೂರು: ರಾಜ್ಯ ಸರ್ಕಾರವು 2019ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗೆ ನೀಡಲಾಗುವ ‘ಡಾ.ರಾಜಕುಮಾರ್‌ ಪ್ರಶಸ್ತಿ’ಗೆ ಹಿರಿಯ ನಟಿ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ.

‘ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ’ಗೆ ನಿರ್ದೇಶಕ ಎನ್‌.ಆರ್‌.ನಂಜುಂಡೇಗೌಡ, ‘ಡಾ.ವಿಷ್ಣುವರ್ಧನ್‌ ಪ್ರಶಸ್ತಿ’ಗೆ ನಿರ್ಮಾಪಕ–ನಿರ್ದೇಶಕ ರಿಚರ್ಡ್‌ ಕ್ಯಾಸ್ಟಲಿನೊ ಅವರು ಆಯ್ಕೆಯಾಗಿದ್ದಾರೆ. ಈ ಮೂರೂ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಮತ್ತು ₹5 ಲಕ್ಷ ನಗದು ಒಳಗೊಂಡಿವೆ.

ಅದೇ ಸಾಲಿನ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ‘ಪ್ರಜಾವಾಣಿ’ಯ ರಘುನಾಥ ಚ.ಹ. ಅವರು ಬರೆದಿರುವ ‘ಬೆಳ್ಳಿತೊರೆ– ಸಿನಿಮಾ ಪ್ರಬಂಧಗಳು’ ಆಯ್ಕೆಯಾಗಿದೆ. ಪ್ರಶಸ್ತಿಯು ₹20,000 ನಗದು ಮತ್ತು 50 ಗ್ರಾಂ ಬೆಳ್ಳಿಯ ಪದಕ ಒಳಗೊಂಡಿದೆ. ಪುಸ್ತಕದ ಪ್ರಕಾಶಕ, ಅಂಕಿತ ಪುಸ್ತಕದ ಪ್ರಕಾಶ ಕಂಬತ್ತಳ್ಳಿ ಅವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ₹20,000 ನಗದು ಮತ್ತು 50 ಗ್ರಾಂ ಬೆಳ್ಳಿಯ ಪದಕ ಒಳಗೊಂಡಿದೆ.

ADVERTISEMENT

ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಶ್ರೀನಾಥ್ ಎಸ್‌. ಹಡಗಲಿ ಅವರ ನಿರ್ದೇಶನದ ‘ಗುಳೆ’ ಕಿರುಚಿತ್ರ ಆಯ್ಕೆಯಾಗಿದೆ. ನಿರ್ದೇಶಕ ಶ್ರೀನಾಥ್ ಮತ್ತು ನಿರ್ಮಾಪಕ ಮನೋಹರ್ ಎಸ್‌.ಐಯರ್ ಅವರಿಗೆ ತಲಾ ₹25,000 ನಗದು ಮತ್ತು 50 ಗ್ರಾಂ ಬೆಳ್ಳಿಯ ಪದಕ ನೀಡಲಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.

2025ನೇ ಸಾಲಿನ ‘ವಿದ್ಯಾಶಂಕರ ಪ್ರಶಸ್ತಿ’ ಪ್ರಕಟ

ಬೆಂಗಳೂರು: ಡಾ.ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ 2025ನೇ ಸಾಲಿನ ‘ವಿದ್ಯಾಶಂಕರ ಪ್ರಶಸ್ತಿ’ಗೆ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಸಂಗಮೇಶ ಸವದತ್ತಿಮಠ ಹಾಗೂ ‘ವಿದ್ಯಾಶಂಕರ ಪುರಸ್ಕಾರ’ಕ್ಕೆ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಜಯಲಲಿತಾ ಆಯ್ಕೆಯಾಗಿದ್ದಾರೆ.

‘ವಿದ್ಯಾಶಂಕರ ಪ್ರಶಸ್ತಿ’ಯು ₹30 ಸಾವಿರ ನಗದು, ‘ವಿದ್ಯಾಶಂಕರ ಪುರಸ್ಕಾರ’ವು ₹15 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ.

ನವೆಂಬರ್‌ 18ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಆರ್.ಕೆ. ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.

ರಿಚರ್ಡ್ ಕ್ಯಾಸ್ಟಲಿನೊ
ರಘುನಾಥ ಚ.ಹ.
ಎನ್‌.ಆರ್‌.ನಂಜುಂಡೇಗೌಡ