ಸುದೀಪ್
ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರ ಡಿ.25ರ (ಬುಧವಾರ) ಕಾಣುತ್ತಿದೆ. ಎರಡು ವರ್ಷಗಳ ಬಳಿಕ ತೆರೆಗೆ ಬರುತ್ತಿರುವ ತಮ್ಮ ಚಿತ್ರ, ಸಿನಿಮಾ ಪಯಣ ಹಾಗೂ ವೈಯಕ್ತಿಕ ಬದುಕು ಕುರಿತು ಮಾತನಾಡಿದ್ದಾರೆ.
* ಈ ಚಿತ್ರದ ಕಥೆ ಬರೆದವರು ತಮಿಳಿನವರು ಎಂದಾಕ್ಷಣ ಅದರಲ್ಲಿ ತಮಿಳಿನ ನೇಟಿವಿಟಿ ಇರುತ್ತದೆ ಎಂದಲ್ಲ. ನನಗೆ ನೇಟಿವಿಟಿಯಲ್ಲಿ ನಂಬಿಕೆ ಇಲ್ಲ. ನಾನು ಬೇರೆ ದೇಶದ ಸಿನಿಮಾಗಳನ್ನು ಎಂಜಾಯ್ ಮಾಡಿಕೊಂಡು ನೋಡುತ್ತೇನೆ. ಹಾಗಂತ ನಾನು ಅಲ್ಲಿಯವನಲ್ಲ. ನಮ್ಮ ‘ಕಾಂತಾರ’ದಂತಹ ಚಿತ್ರವನ್ನು ಜಗತ್ತು ಸ್ವೀಕರಿಸುತ್ತದೆ. ಅವರು ನಮ್ಮ ನೇಟಿವಿಟಿಯವರಲ್ಲ. ಹೀಗಾಗಿ ಇಲ್ಲಿ ನೇಟಿವಿಟಿಯ ಪ್ರಶ್ನೆ ಬರುವುದಿಲ್ಲ. ನಿರ್ದೇಶಕರು ‘ಮ್ಯಾಕ್ಸ್’ ಕಥೆ ಹೇಳಿದಾಗ ಚಿತ್ರ ಕುರಿತು ಅವರಿಗಿದ್ದ ಕ್ಲಾರಿಟಿ ನನಗೆ ಕಾಣಿಸುತ್ತಿತ್ತು. ಹೀಗಾಗಿ ಇದನ್ನು ಒಪ್ಪಿಕೊಂಡೆ. ನಿರ್ಮಾಪಕರು ತಮಿಳುನಾಡಿನವರು, ಅವರಿಗೆ ತಮ್ಮ ಜಾಗದಲ್ಲಿ ನಿರ್ಮಾಣಕ್ಕೆ ಹಿಡಿತ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಮಹಾಬಲಿಪುರಂನಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಿದೆವು. ಆದರೆ ಇದು ತಮಿಳುನಾಡಿಗೆ ಸೀಮಿತವಾದ ಕಥೆಯಲ್ಲ. ಒಂದು ರಾತ್ರಿಯಲ್ಲಿ ನಡೆಯುವ ಕಥೆ.
* ದಿನನಿತ್ಯ ಮನೆಯಲ್ಲಿ ಅಮ್ಮನ ಊಟ. ದಿನ ಹೊಸತು ಏನು ಮಾಡಿದ್ದಾರೆ ಎಂದು ಹುಡುಕುವುದಕ್ಕಿಂತ ಬಡಿಸುವವರ ಪ್ರೀತಿ ಮುಖ್ಯ. ಜನ ನನ್ನನ್ನು ಒಪ್ಪಿಕೊಂಡು ಬಹಳ ವರ್ಷವಾಯ್ತು. ಹೀಗಾಗಿ ಅವರಿಗೆ ಸಿನಿಮಾ ಕೊಡಬೇಕು ಎಂಬುದು ಆಸೆ. ಅದನ್ನು ಅವರು ಪ್ರೀತಿಯಿಂದ ನೋಡುತ್ತಾರೆ. ಹೊಸತನ ನಾನೇನು ಕೊಡಲು ಆಗುವುದಿಲ್ಲ. ನನಗೆ ಬರುವ ಕಥೆಯಲ್ಲಿ ನನಗೇನು ಹೊಸತಿದೆ? ನಾನು ಈ ರೀತಿ ಪಾತ್ರ ಮಾಡಿದ್ದೇನಾ? ಎಂದು ಯೋಚಿಸುತ್ತೇನೆ. ಆಗ ಸಿನಿಮಾ ಕೂಡ ಹೊಸತಾಗುತ್ತದೆ.
* ನಿರ್ದೇಶಕರು ಈ ಚಿತ್ರದ ಕಥೆ ಹೇಳುವಾಗ ರಾತ್ರಿ ದೀರ್ಘವಾಯಿತು ಅನಿಸಲಿಲ್ಲ. ಕಥೆಯಲ್ಲಿ ಸಾಕಷ್ಟು ವಿಚಾರಗಳು ನಡೆಯುತ್ತವೆ. ಸಾಕಷ್ಟು ದೊಡ್ಡ ನಟರಿದ್ದಾರೆ. ಅಮಾನತುಗೊಂಡ ಪೊಲೀಸ್ ಅಧಿಕಾರಿಯೊಬ್ಬ ಮತ್ತೆ ಕೆಲಸಕ್ಕೆ ವರದಿ ಮಾಡಿಕೊಳ್ಳುವ ಹಿಂದಿನ ದಿನ ನಡೆಯುವ ಕಥೆ. ಹೀಗಾಗಿ ಚಿತ್ರದಲ್ಲಿ ನಾನು ಅಧಿಕೃತವಾಗಿ ಪೊಲೀಸ್ ಅಲ್ಲ, ಸಾಮಾನ್ಯ ವ್ಯಕ್ತಿ. ಆ ರಾತ್ರಿ ನಡೆಯುವ ಒಂದು ಘಟನೆಯೆ ಚಿತ್ರಕಥೆ. ಇದು ಯಾವುದೇ ಚಿತ್ರದಿಂದ, ಬೇರೆ ಕಥೆಯಿಂದ ಸ್ಫೂರ್ತಿ ಪಡೆದ ಕಥೆಯಲ್ಲ.
* ನಾನು ನಟಿಸಲು ಪ್ರಾರಂಭಿಸಿ 28 ವರ್ಷಗಳಾಯ್ತು. ಮುಂದಿನ ಕೆಲ ವರ್ಷಗಳು ನಾಯಕನಾಗಿ ನಟಿಸಿಬೇಕೆಂಬ ಹಂಬಲವಿದೆ. ಇದು ನನಗೆ ಇನ್ನೆಷ್ಟು ಸಿನಿಮಾಗಳನ್ನು ಮಾಡಬಹುದೆಂಬ ಸ್ಪಷ್ಟನೆ ನೀಡುತ್ತದೆ. ಈಗಾಗಲೇ ನನಗೆ ಒಂದು ಸ್ಪೀಡ್ ಬಂದಿದೆ. ಇನ್ನೊಂದು ಚೂರು ಸ್ಪೀಡ್‌ನಲ್ಲಿ ಹೋಗಬಹುದು. ಮುಂದಿನ 18 ತಿಂಗಳಲ್ಲಿ ಎರಡು ಸಿನಿಮಾ ಮಾಡುವೆ. ನಾನು ಮಾಡದಿರುವಂತಹ ಪಾತ್ರಗಳನ್ನು, ನೋಡದಿರುವಂತಹ ಜಗತ್ತನ್ನು ಮುಂದಿನ ಸಿನಿಮಾಗಳಲ್ಲಿ ತೋರಿಸಬೇಕೆಂಬ ಆಸೆಯಿದೆ. ಒಳ್ಳೆ ಸ್ಕ್ರಿಪ್ಟ್‌ಗಳು ಬಂದರೆ ಮಾಡಿದ ಹಳೆಯ ಪಾತ್ರಗಳನ್ನೇ ಮತ್ತೆ ಮಾಡಲು ಆಸಕ್ತಿ ಇರುತ್ತದೆ.
* ಇವತ್ತು ಸಿನಿಮಾ ನೋಡುವ ತಲೆಮಾರು ಭಿನ್ನವಾಗಿದೆ. ಜನಕ್ಕೆ ಸಿನಿಮಾ ಎಂಬುದು ಮನರಂಜನೆ ಎಂದು ಗೊತ್ತಿದೆ. ಹೀಗಾಗಿ ಸಿನಿಮಾದಲ್ಲಿ ಸಂದೇಶ, ಉಪದೇಶ ಸಾಧ್ಯವಿಲ್ಲ. ಮನರಂಜನೆ ಜೊತೆಗೆ ಸಂದೇಶ ನೀಡಬಹುದಷ್ಟೆ. ಯಾರು ಸಿನಿಮಾಗೆ ಏನನ್ನಾದರೂ ಕಲಿಯಲು ಅಥವಾ ಕಲಿಯಬೇಕೆಂದು ಹೋಗುವುದಿಲ್ಲ. ಮನೆಯಲ್ಲಿ ಬೇಸರವಾದಾಗ ಸಿನಿಮಾಕ್ಕೆ ಹೋಗುತ್ತಾರೆ. ಜೀವನಕ್ಕೆ ಸಿನಿಮಾ ಪಾಠ ಮಾಡುವುದಿಲ್ಲ. ಬೆಳವಣಿಗೆಗೆ ಸಹಕಾರಿಯಾಗಬಹುದು. ಇವತ್ತು ಮನರಂಜನೆ ಪ್ರತಿಯೊಬ್ಬನ ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಪ್ರಾರಂಭವಾಗುತ್ತಿದೆ. ಹೀಗಾಗಿ ರಕ್ತಸಿಕ್ತ ಸಿನಿಮಾಗಳು, ಮಾಸ್ ಸಿನಿಮಾಗಳು ಎಲ್ಲರಿಗೂ ಅಲ್ಲ ಎನ್ನುವಂತಿಲ್ಲ. ಹೆಣ್ಣುಮಕ್ಕಳು ಕೂಡ ಇಂಥ ಸಿನಿಮಾವನ್ನು ಎಂಜಾಯ್ ಮಾಡುತ್ತಾರೆ.
* ಮಾಸ್ ಸಿನಿಮಾಗಳ ಬಜೆಟ್ ದೊಡ್ಡದಿರುತ್ತದೆ. ಅದನ್ನು ಮರಳಿ ಪಡೆಯಬೇಕಾದರೆ ಚಿತ್ರಮಂದಿರದಿಂದ ಇಷ್ಟ ಹಣ ಬರಬೇಕೆಂಬ ಲೆಕ್ಕಾಚಾರವಿರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡೇ ಸ್ಟಾರ್‌ಗಳ ಸಿನಿಮಾದ ಟಿಕೆಟ್ ಬೆಲೆ ನಿರ್ಧಾರವಾಗುತ್ತದೆ. ಅದನ್ನು ತಪ‍್ಪು ಎನ್ನಲು ಸಾಧ್ಯವಿಲ್ಲ. ಕಾಫಿಯನ್ನು ಮಾಲ್‌ನಲ್ಲಿ ಕುಡಿದರೆ ದುಬಾರಿ. ಅವರು ಜಾಗಕ್ಕೆ ನೀಡುವ ಬಾಡಿಗೆ ಸೇರಿದಂತೆ ಹಲವು ಅಂಶಗಳಿರುತ್ತವೆ. ಅದೇ ಕಾಫಿ ಹೊರಗಡೆ ಕಡಿಮೆ ಬೆಲೆಗೆ ಸಿಗುತ್ತದೆ. ಅದನ್ನು ಕುಡಿಯುವ ಆಯ್ಕೆಯೂ ಗ್ರಾಹಕನಿಗಿದೆ. ಅದೇ ರೀತಿ ಸಿನಿಮಾ ಟಿಕೆಟ್ ದರ ಕೂಡ.
* ಅಮ್ಮನ ಸಾವಿನ ನಂತರ ಮೊದಲಿನ ಉತ್ಸಾಹ ನನ್ನಲ್ಲಿ ಉಳಿದಿಲ್ಲ. ನಿಧಾನಕ್ಕೆ ಉತ್ಸಾಹ ತಂದುಕೊಳ್ಳಲು ಯತ್ನಿಸುತ್ತಿರುವೆ. ಅಮ್ಮ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇದ್ದಾಗ ನಾನು ಬಿಗ್‌ಬಾಸ್ ಚಿತ್ರೀಕರಣದಲ್ಲಿದ್ದೆ. ಸಾಕಷ್ಟು ಕಾರಣದಿಂದ ಅದನ್ನು ಬಿಟ್ಟು ಬರಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ಬಂದು ಅಮ್ಮನನ್ನು ಉಳಿಸಿಕೊಳ್ಳಲು ನನ್ನ ಕೈಯಲ್ಲಿ ಸಾಧ್ಯವಾಗದೇ ಇದ್ದಾಗ ನನಗೆ ನಾನು ಕೆಲಸಕ್ಕೆ ಬಾರದ ವ್ಯಕ್ತಿ ಎನ್ನಿಸಿಬಿಟ್ಟಿತ್ತು. ಅವಳ ಹೃದಯ ಬಡಿತ ನಿಲ್ಲುತ್ತಿದ್ದರೆ ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಅಷ್ಟು ಅಸಹಾಯಕನಾಗಿದ್ದೆ. ಉಳಿಸಿಕೊಡಿ ಎಂದು ಬೇಡಿಕೊಳ್ಳುತ್ತಿದ್ದೆ. ಅಮ್ಮನ ಪ್ರೀತಿ, ಅವರ ಜೊತೆಗಿನ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ. ನನ್ನನ್ನು ಸಿನಿಮಾದಲ್ಲಿ ಮಾಸ್ ಆಗಿ ತೋರಿಸಿದಾಗ ಅಮ್ಮನಿಗೆ ಬಹಳ ಖುಷಿಯಾಗುತ್ತಿತ್ತು.
ಹೆಚ್ಚೆಚ್ಚು ಸಿನಿಮಾ ಮಾಡುವೆ
ಮುಂದಿನ ದಿನಗಳಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಬೇಕೆಂಬ ಆಲೋಚನೆಯಿದೆ. ಜನವರಿಯಿಂದ ‘ಬಿಲ್ಲ ರಂಗ ಬಾಷಾ’ ಚಿತ್ರೀಕರಣ ಪ್ರಾರಂಭವಾಗುತ್ತದೆ. ಬೇರೆಯದೆ ಜಗತ್ತಿಗೆ ಕರೆದುಕೊಂಡು ಹೋಗುವ ಸಿನಿಮಾವದು. ಅದರ ಕೆಲಸಗಳು ಭರದಿಂದ ಸಾಗಿವೆ. ಜೊತೆಗೆ ಮೂರು ಕಥೆ ಕೇಳಿರುವೆ. ಅದರ ವಿಸ್ತರಣೆ ಕೆಲಸ ನಡೆಯುತ್ತಿದೆ. ಅದರಲ್ಲಿ ಅತ್ಯುತ್ತಮವಾದ ಒಂದನ್ನು ಆಯ್ಕೆ ಮಾಡಿಕೊಳ್ಳುವೆ. ಮುಂದಿನ ಒಂದೂವರೆ ವರ್ಷದಲ್ಲಿ ನನ್ನ ಎರಡು ಸಿನಿಮಾಗಳು ಬಿಡುಗಡೆಯಾಗಿರುತ್ತವೆ ಎನ್ನುವ ಭರವಸೆ ನೀಡುತ್ತೇನೆ. ನಿರ್ದೇಶನಕ್ಕೂ ಮರಳುವ ಯೋಚನೆಯಿದೆ. ಕಾಲ ಕೂಡಿ ಬರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.