ADVERTISEMENT

ಭಟ್ಟರ ಹಾಡಿಗೆ ಸೋನಲ್, ವಿಹಾನ್ ಪ್ರಣಯ

‘ಪಂಚತಂತ್ರ’ ಪುಸ್ತಕದ ಶೃಂಗಾರಕಥನ

ಪದ್ಮನಾಭ ಭಟ್ಟ‌
Published 14 ಸೆಪ್ಟೆಂಬರ್ 2018, 5:17 IST
Last Updated 14 ಸೆಪ್ಟೆಂಬರ್ 2018, 5:17 IST
ವಿಹಾನ್ ಹಾಗೂ ಸೋನಲ್ ಮೊಂತೆರೊ
ವಿಹಾನ್ ಹಾಗೂ ಸೋನಲ್ ಮೊಂತೆರೊ   

ಶೃಂಗಾರದ ಹೊಂಗೆಮರ ಹೂಬಿಟ್ಟಿದೆ
ನಾಚಿಕೆ ನಮ್ಮಾ ಜತೆ ಠೂ ಬಿಟ್ಟಿದೆ
ಕಳ್ಳಾಟಕೆ ಮಳ್ಳಾ ಮನ ಛೀ ಎಂದಿದೆ
ಚೆಲ್ಲಾಟಕೆ ಚೆಲುವು ಹೂ ಎಂದಿದೆ

ಯೋಗರಾಜ್ ಭಟ್ ತಮ್ಮ ನಿರ್ದೇಶಕ ಹೊಸ ಸಿನಿಮಾ ‘ಪಂಚತಂತ್ರ’ಕ್ಕೆ ಬರೆದಿರುವ ಹಾಡಿನ ಆರಂಭಿಕ ಸಾಲುಗಳು ಹೀಗಿವೆ. ಶೃಂಗಾರಕ್ಕೂ ಆಶ್ಲೀಲಕ್ಕೂ ಇರುವ ತುಂಬಾ ತೆಳವಾದ ಗೆರೆಯ ಪ್ರಜ್ಞೆ ಇರುವ ಕೆಲವೇ ಕೆಲವು ನಿರ್ದೇಶಕರಲ್ಲಿ ಭಟ್ಟರೂ ಒಬ್ಬರು. ಅವರೀಗ ತಮ್ಮ ಹೊಸ ಸಿನಿಮಾದಲ್ಲಿ ಶೃಂಗಾರದ ಹೊಂಗೆಮರದಲ್ಲಿ ಬಿಟ್ಟ ಹೂಗಳನ್ನು ನೋಡಿ ತಾವೇ ಮೈಮರೆಯುತ್ತಿದ್ದಾರೆ.

‘ನವರಸಗಳಲ್ಲಿ ಶೃಂಗಾರ ತುಂಬ ಮಹತ್ವದ ರಸ. ಅದನ್ನು ಶಕ್ತಿಯುತವಾಗಿ ಮತ್ತು ಸತ್ವಯುತವಾಗಿ ಕಟ್ಟಿಕೊಡಬೇಕು ಎಂಬ ಪ್ರಯತ್ನವನ್ನು ನಾನು ಹರಿಕೃಷ್ಣ ಮಾಡಿದ್ದೇವೆ. ಭತೃಹರಿ ‘ಶಂಗಾರ ಶತಕ’ ಕೃತಿಯಲ್ಲಿ ಶೃಂಗಾರದ ಕುರಿತು ಅದ್ಭುತವಾಗಿ ಬರೆದಿದ್ದಾನೆ. ಇದು ಭಟ್ಟರು ಮತ್ತು ಹರಿಯ ಶೃಂಗಾರ ಶತಕ’ ಎಂದು ತುಸು ತಮಾಷೆಯಾಗಿಯೇ ಹೇಳುತ್ತಾರೆ ಭಟ್ಟರು.

ಹದಿಹರೆಯದ ಹುಡುಗರ ಹಸಿಬಿಸಿ ಕಾಮನೆಗಳು, ಕುತೂಹಲ ಮತ್ತು ಪ್ರಣಯಕ್ಕಿರುವ ಇನ್ನೊಂದು ದಿವ್ಯ ಆಯಾಮ ಎರಡನ್ನೂ ಇಟ್ಟುಕೊಂಡು ಹಾಡುಕಟ್ಟಿದ್ದಾರೆ ಭಟ್ಟರು. ಸಾಲುಸಾಲಿನಲ್ಲಿ ತುಳುಕುವ ಪ್ರಯಣ ನದಿಗೆ ಭಾವಗೀತಾತ್ಮಕ ಸಂಗೀತ ಸಂಯೋಜನೆಯ ಹರಿವು ನೀಡಿದ್ದಾರೆ ಹರಿಕೃಷ್ಣ.

ADVERTISEMENT

ಈ ಹಾಡನ್ನು ಬರೆದ ನಂತರ ಸಾಹಿತ್ಯ– ಸಂಗೀತಕ್ಕೆ ಜೀವ ತುಂಬುವ ಹಾಗೆ ದೃಶ್ಯೀಕರಿಸುವುದು ಹೇಗೆ ಎಂಬ ಸವಾಲೂ ಅವರಿಗೆ ಎದುರಾಗಿತ್ತಂತೆ. ಆದರೆ ಇತ್ತೀಚೆಗಷ್ಟೇ ಹಾಡಿನ ಚಿತ್ರೀಕರಣ ಮುಗಿಸಿರುವ ಅವರು ಅಂದುಕೊಂಡಿದ್ದಕ್ಕಿಂತ ಮೋಹಕವಾಗಿ ಮೂಡಿಬಂದಿರುವ ಖುಷಿಯಲ್ಲಿದ್ದಾರೆ. ಈ ಹಾಡಿಗೆ ನೃತ್ಯ ಸಂಯೋಜಿಸಿರುವವರು ಇಮ್ರಾನ್ ಸರ್ದಾರಿಯಾ. ಹಾಲಿವುಡ್‌ ಸ್ಟೈಲ್‌ ಕಂಟೆಂಪೊರರಿ ನೃತ್ಯವನ್ನು ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ಬಳಸಿಕೊಂಡಿದ್ದಾರಂತೆ.

ವಿಹಾನ್ ಮತ್ತು ಸೋನಲ್ ಮೊಂತೆರೊ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಬೆಳ್ಳಗಿನ ತೆಳು ಬಟ್ಟೆಯಲ್ಲಿ ಇಬ್ಬರೂ ಸೇರಿಕೊಂಡು ಬಾಗಿ ಬಳುಕಿರುವ ಚಿತ್ರಗಳು, ಫ್ರೇಮಿನೊಳಗೆ ರಾಗಕೆ ಶ್ರುತಿಯಾಗಿ ಸೇರಿಹೋದಂತಿರುವ ಭಂಗಿಗಳೇ ದೃಶ್ಯಶ್ರೀಮಂತಿಕೆಗೆ ಪುರಾವೆಯಾಗುವಂತಿವೆ. ಈ ಹಾಡಿನ ಚಿತ್ರೀಕರಣದ ಕುರಿತು ನಾಯಕ ವಿಹಾನ್ ಅವರೂ ಉತ್ಸಾಹದಿಂದಲೇ ಮಾತನಾಡುತ್ತಾರೆ.

‘ಚಿತ್ರದ ಮೊದಲ ಹಾಡಿಗೆ ನಾನು ಮಾಡಿದ ನೃತ್ಯವನ್ನು ನೋಡಿ ಇಮ್ರಾನ್ ಅವರು ಈ ಹಾಡಿಗೆ ಇನ್ನಷ್ಟು ಸಂಕೀರ್ಣ ನೃತ್ಯ ಸಂಯೋಜನೆ ಮಾಡೋಣ ಎಂದು ಹೇಳಿದರು. ಪ್ರಾಕ್ಟೀಸ್ ಟೈಮಲ್ಲಿ ಅರ್ಧಗಂಟೆಯಲ್ಲಿ ನಾನು ಕನಿಷ್ಠ ಹದಿನೈದು ಇಪ್ಪತ್ತು ಸಲ ನಾಯಕಿ (ಸೋನಲ್ ಮೊಂತೆರೊ)ಯನ್ನು ಎತ್ತಿ ಹಿಡಿಯಬೇಕಿತ್ತು. ದಿನಕ್ಕೆ ನಾಲ್ಕು ಗಂಟೆ ಪ್ರಾಕ್ಟೀಸ್. ಅಂದರೆ ಕನಿಷ್ಠ ನೂರೈವತ್ತು ಸಲ ಅವರನ್ನು ಎತ್ತಿ ಹಿಡಿಯಬೇಕಿತ್ತು. ಆದರೆ ಅಷ್ಟು ಕಷ್ಟಪಟ್ಟು ಪ್ರಾಕ್ಟೀಸ್‌ ಮಾಡಿದ್ದರಿಂದ ಚಿತ್ರೀಕರಣದ ಸಮಯದಲ್ಲಿ ತುಂಬ ಸಹಾಯವಾಯ್ತು’ ಎನ್ನುತ್ತಾರೆ ವಿಹಾನ್.

ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಎರಡು ದಿನ ಈ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಎರಡನೇ ದಿನ ವಿಹಾನ್‌ಗೆ ಆರೋಗ್ಯ ಹದಗೆಟ್ಟಿತ್ತಂತೆ. ಆದರೆ ಅದರ ನಡುವೆಯೂ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದರು. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ‘ನೀನು ಆರೋಗ್ಯ ಸರಿ ಇಲ್ಲದಿದ್ದಾಗಲೇ ತುಂಬ ಚೆನ್ನಾಗಿ ನೃತ್ಯ ಮಾಡ್ತೀಯಾ’ ಎಂದಿದ್ದನ್ನು ವಿಹಾನ್ ಖುಷಿಯಿಂದ ಹೇಳಿಕೊಳ್ಳುತ್ತಾರೆ. ‘ಇದು ಯೋಗರಾಜ್ ಭಟ್, ಇಮ್ರಾನ್ ಸರ್ದಾರಿಯಾ, ಹರಿಕೃಷ್ಣ, ಸುಜ್ಞಾನ್ ಇವರೆಲ್ಲರ ಪ್ರಯತ್ನದ ಫಲವಷ್ಟೆ. ನನ್ನ ಪಾತ್ರ ಏನೂ ಇಲ್ಲ. ಹಾಡು ಚೆನ್ನಾಗಿ ಬಂದಿರುವುದಕ್ಕ ಅವರ ಶ್ರಮವೇ ಹೆಚ್ಚಿದೆ’ ಎಂದೂ ಅವರು ಹೇಳುತ್ತಾರೆ.

‘ಡ್ಯೂಯೆಟ್ ಅಂದಾಕ್ಷಣ ಅಶ್ಲೀಲ ಎಂಬುದೊಂದು ಮನೋಭಾಗ ಹಲವರಲ್ಲಿದೆ. ಆದರೆ ಈ ಹಾಡು ಹಾಗಿಲ್ಲ. ಇಪ್ಪತ್ತರ ವಯಸ್ಸಿನ ಹುಡುಗರ ಪ್ರಣಯವನ್ನು ಕ್ಲಾಸಿಕ್ ಆಗಿ ತೋರಿಸಿದ್ದಾರೆ. ಅದು ಒಂದೊಂದು ಫ್ರೇಮ್ ಕೂಡ ಯಾವುದೋ ಮ್ಯಾಗಜಿನ್ ಕವರ್ ಪುಟದ ಚಿತ್ರದ ಹಾಗೆ ಕಾಣುತ್ತದೆ’ ಎಂದು ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ ವಿಹಾನ್.

‘ಯೋಗರಾಜ್ ಭಟ್ ಅವರ ಸಿನಿಮಾದಲ್ಲಿ ಒಂದು ರೊಮ್ಯಾಂಟಿಕ್ ಹಾಡು ಇದ್ದೇ ಇರುತ್ತದೆ. ಆದರೆ ಈ ಹಾಡು ತುಂಬಾ ತುಂಬಾ ರೋಮ್ಯಾಂಟಿಕ್ ಆಗಿದೆ. ಸಾಹಿತ್ಯದಲ್ಲಿಯೂ ಈ ಹಾಡಿನ ಮೂಲಕ ಭಟ್ಟರು ಇನ್ನೊಂದು ಮಟ್ಟಕ್ಕೆ ಏರಿದ್ದಾರೆ’ ಎನ್ನುತ್ತಾರೆ ಸೋನಲ್ ಮೊಂತೆರೊ. ಅದೇ ಸಮಯದಲ್ಲಿ ಹಾಡಿಗಾಗಿ ತಾವು ಪಟ್ಟ ಶ್ರಮವನ್ನೂ ಅವರು ಅರುಹುತ್ತಾರೆ. ‘ಸುಮಾರು ಇಪ್ಪತ್ತೈದು ದಿನ ಪ್ರಾಕ್ಟೀಸ್ ಮಾಡಿದ್ದೇವೆ. ಇದು ಪೂರ್ತಿ ಹೊಸ ಬಗೆಯ ನೃತ್ಯವಾಗಿತ್ತು ನಮಗೆ. ಬಹುಶಃ ಕನ್ನಡ ಚಿತ್ರರಂಗದಲ್ಲಿಯೇ ಈ ರೀತಿಯ ನೃತ್ಯವನ್ನು ಯಾರೂ ಬಳಸಿಲ್ಲ. ನಾನು ಮತ್ತು ವಿಹಾನ್ ಇಬ್ಬರೂ ನೃತ್ಯವನ್ನು ರೂಢಿಸಿಕೊಳ್ಳಲು ಸಾಕಷ್ಟು ಒದ್ದಾಡಿದ್ದೇವೆ. ವೃತ್ತಿಪರ ನೃತ್ಯಗಾರರಷ್ಟೇ ದೇಹವನ್ನು ಫ್ಲೆಕ್ಸಿಬಲ್ ಮಾಡಿಕೊಳ್ಳಬೇಕಿತ್ತು ನಾವು. ಬೆಳಿಗ್ಗೆ ತಿಂಡಿಯನ್ನೂ ತಿನ್ನದೆ ಪ್ರಾಕ್ಟೀಸ್ ಮಾಡುತ್ತಿದ್ದೆವು.

ಕೊನೆಗೆ ತೆರೆಯ ಮೇಲೆ ನೋಡಿದಾಗ ಇದನ್ನು ಮಾಡಿದ್ದು ನಾವೇನಾ ಎಂಬಷ್ಟು ಆಶ್ಚರ್ಯವಾಗುತ್ತಿತ್ತು. ಸೆಟ್, ಕಾಸ್ಟ್ಯೂಮ್ ಎಲ್ಲವೂ ಅಷ್ಟು ಅದ್ಭುತವಾಗಿಯೇ ಇದೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಸೋನಲ್. ಪ್ರಾಕ್ಟೀಸ್ ಮಾಡುವಾಗ ಸೋನಲ್ ಏನಾದರೂ ತಿನ್ನಲು ಕೂತರೆ ವಿಹಾನ್ ‘ಜಾಸ್ತಿ ತಿನ್ಬೇಡ, ನನಗೆ ನಿನ್ನನ್ನು ಎತ್ತಲಿಕ್ಕೆ ಕಷ್ಟ ಆಗತ್ತೆ’ ಎಂದು ತಮಾಷೆ ಮಾಡುತ್ತಿದ್ದರಂತೆ. ‘ಹಾಡು ತುಂಬ ಚೆನ್ನಾಗಿ ಬಂದಿದೆ’ ಎಂಬ ಮಾತು ಕೇಳಿಬಂದಾಗ ಅದುವರೆಗೆ ಪಟ್ಟ ಶ್ರಮವೆಲ್ಲವೂ ಮರೆತುಹೋಯ್ತು ಎಂದೂ ಸೋನಲ್ ಹೇಳುತ್ತಾರೆ.

ದೊಡ್ಡದೊಂದು ಕಾರ್ಯಕ್ರಮ ಮಾಡಿ ಈ ಶೃಂಗಾರಗೀತೆಯನ್ನು ಬಿಡುಗಡೆ ಮಾಡುವ ಆಲೋಚನೆ ಯೋಗರಾಜ್ ಭಟ್ ಅವರಿಗಿದೆ. ಈ ಹಾಡು ಕನ್ನಡ ಚಿತ್ರಗೀತೆಗಳ ದೆಸೆಯನ್ನು ಬದಲಿಸುತ್ತದೆ ಎಂಬ ವಿಶ್ವಾಸವೂ ಅವರಿಗಿದೆ.

‘ಬಿಚ್ಚಿದ ಕೂದಲ ಘನತೆ/
ಅರೆಮುಚ್ಚಿದ ಕಂಗಳ ಕವಿತೆ
ಪ್ರಯಣಕ್ಕೊಂದು ಬೇರೆ ಮುಖವಿದೆ’

ಇವು ಈ ಹಾಡಿನ ಕೊನೆಯ ಸಾಲುಗಳು. ಪ್ರಣಯಕ್ಕಿರುವ ಆ ಮತ್ತೊಂದು ಮುಖವನ್ನು ತೋರಿಸುವ ಉತ್ಸಾಹದಲ್ಲಿ ಭಟ್ಟರಿದ್ದಾರೆ. ಅದು ಹರೆಯದವರ ಮನಸಲ್ಲಿ ಕಿಚ್ಚನ್ನೂ, ಹಿರಿಯರ ಮನಸಲ್ಲಿ ನೆನಪುಗಳ ಕಾವನ್ನೂ ಎಬ್ಬಿಸಲಿದೆ ಎಂಬ ವಿಶ್ವಾಸವೂ ಅವರಿಗಿದೆ.

ಯೋಗರಾಜ್ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.