ADVERTISEMENT

ತೆಲುಗು ಸಿನಿಮಾಗಳಲ್ಲಿ ಕನ್ನಡತಿಯರ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 19:31 IST
Last Updated 24 ಅಕ್ಟೋಬರ್ 2019, 19:31 IST
   

ಟಾಲಿವುಡ್‌ ಪ್ರೇಕ್ಷಕರಿಗೆ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿ ಮನರಂಜಿಸಿದ ಹೆಗ್ಗಳಿಕೆ ಮಹೇಶ್‌ಬಾಬು ಮತ್ತು ಅಲ್ಲು ಅರ್ಜುನ್‌‌ಗೆ ಸಲ್ಲುತ್ತದೆ. ಈ ಇಬ್ಬರು ನಟಿಸುವ ಸಿನಿಮಾಗಳ ವಿತರಣೆಯಲ್ಲೂ ಪೈಪೋಟಿ ಏರ್ಪಡುವುದು ಸಹಜ. ಈ ಪೈಪೋಟಿ ಚಿತ್ರ ಬಿಡುಗಡೆಯಲ್ಲೂ ಎದುರಾಗಿದೆ. ಇಬ್ಬರ ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿದ್ದು, ಅಭಿಮಾನಿಗಳ ಹುಬ್ಬೇರುವಂತಾಗಿದೆ.

ಅಲ್ಲು ಅರ್ಜುನ್‌ ನಟನೆಯ ‘ಅಲಾ ವೈಕುಂಠಪುರಮುಲೋ’ ಮತ್ತು ಮಹೇಶ್‌ ಬಾಬು ಮುಖ್ಯಭೂಮಿಕೆಯಲ್ಲಿರುವ ‘ಸರಿಲೇರು ನೀಕೆವ್ವರು’ ಸಿನಿಮಾಗಳು ಮುಂಬರುವ ಜನವರಿ 12ರಂದು ತೆರೆಗೆ ಅಪ್ಪಳಿಸಲಿವೆ. ಸಂಕ್ರಾಂತಿ ಹಬ್ಬದ ವೇಳೆಗೆ ಥಿಯೇಟರ್‌ ಲಗ್ಗೆ ಇಡಲು ಈ ಸಿನಿಮಾಗಳ ನಿರ್ಮಾಪಕರು ಮುಂದಾಗಿದ್ದಾರೆ. ಹಾಗಾಗಿ, ಇಬ್ಬರೂ ನಟರ ಅಭಿಮಾನಿಗಳ ನಡುವೆ ಬಿಕ್ಕಟ್ಟು ಸೃಷ್ಟಿಸಿದೆ.

ಅಂದಹಾಗೆ ‘ಅಲಾ ವೈಕುಂಠಪುರಮುಲೋ’ ಚಿತ್ರದಲ್ಲಿ ಕನ್ನಡತಿ ಪೂಜಾ ಹೆಗ್ಡೆ ನಟಿಸಿದ್ದರೆ, ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ಅಭಿಯಿಸಿರುವುದು ರಶ್ಮಿಕಾ ಮಂದಣ್ಣ. ಇತ್ತೀಚಿನ ದಿನಗಳಲ್ಲಿ ಟಾಲಿವುಡ್‌ನಲ್ಲಿ ಕನ್ನಡದ ನಟಿಯರಿಬ್ಬರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿಗೆ ಇಳಿದಿರುವುದು ಇದೇ ಮೊದಲು.

ADVERTISEMENT
ಮಹೇಶ್ ಬಾಬು, ಅಲ್ಲು ಅರ್ಜುನ್

‘ಅಲಾ ವೈಕುಂಠಪುರಮುಲೋ’ ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಮತ್ತು ಅಲ್ಲು ಅರ್ಜುನ್‌ ಅವರ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಮೂರನೇ ಚಿತ್ರ. ಈ ಜೋಡಿಯ ನೇತೃತ್ವದಡಿ ಹಿಂದೆ ‘ಜುಲಾಯಿ’ ಮತ್ತು ‘s/o ಸತ್ಯಮೂರ್ತಿ’ ಸಿನಿಮಾ ತೆರೆಕಂಡಿದ್ದವು. ಎರಡೂ ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು.ಹಲವು ವರ್ಷದ ಬಳಿಕ ತಬು ಈ ಚಿತ್ರದ ಮೂಲಕ ಮತ್ತೆ ಟಾಲಿವುಡ್‌ ಅಂಗಳಕ್ಕೆ ಬರುತ್ತಿದ್ದಾರೆ.

ಕಳೆದ ವರ್ಷ ತೆರೆಕಂಡ ಮಹೇಶ್‌ಬಾಬು ನಟನೆಯ ‘ಮಹರ್ಷಿ’ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಕಾರ್ಪೋರೇಟ್‌ ಕಂಪನಿಯ ಸಿಇಒ ಮತ್ತು ರೈತರ ಬದುಕಿನ ಸುತ್ತ ಹೆಣೆದ ಈ ಚಿತ್ರದಲ್ಲಿನ ಕಥೆ ತೆಲುಗು ಸಿನಿ ಪ್ರಿಯರಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಇದರಲ್ಲಿನ ಪ್ರಿನ್ಸ್‌ ಮತ್ತು ಪೂಜಾ ಹೆಗ್ಡೆ ನಟನೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅನಿಲ್ ರವಿಪುರಿ ನಿರ್ದೇಶನದ ‘ಸರಿಲೇರು ನೀಕೆವ್ವರು’ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಆ್ಯಕ್ಷನ್‌ ಕಾಮಿಡಿ ಚಿತ್ರ ಇದು. ಅಂದಹಾಗೆ ಒಂದೂವರೆದಶಕದ ಬಳಿಕ ಹಿರಿಯ ನಟಿ ವಿಜಯಶಾಂತಿ ಈ ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆಗೆ ಅಡಿ ಇಡುತ್ತಿದ್ದಾರೆ. ಚಿತ್ರದಲ್ಲಿ ಅವರದು ಮಹೇಶ್‌ಬಾಬು ಅವರ ಸ್ನೇಹಿತನ ತಾಯಿಯ ಪಾತ್ರವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.