ADVERTISEMENT

ಹೊಸಬರಿಂದಲೇ ಕೂಡಿರುವ ‘ಪಿಂಗಾಕ್ಷ’ದಲ್ಲಿ ಆಂಜನೇಯನ ಕಥೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 0:30 IST
Last Updated 15 ಆಗಸ್ಟ್ 2025, 0:30 IST
ರಿಶಾ ಗೌಡ, ಐರಾ ಮೆನನ್‌
ರಿಶಾ ಗೌಡ, ಐರಾ ಮೆನನ್‌   

ಬಹುತೇಕ ಹೊಸಬರಿಂದಲೇ ಕೂಡಿರುವ ‘ಪಿಂಗಾಕ್ಷ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಬಿ.ಭರತ್‌ ವಾಸುದೇವ್ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌–ಕಟ್‌ ಹೇಳುತ್ತಿದ್ದಾರೆ.

‘ಆಂಜನೆಯನಿಗೆ ಭಜರಂಗಿ, ಹನುಮಾನ್‌ ಮುಂತಾದ ಹೆಸರುಗಳು ಇವೆ. ಅದೇ ರೀತಿ ‘ಪಿಂಗಾಕ್ಷ’ ಕೂಡ ಆತನ ಹೆಸರು. ಇದು ಸಂಸ್ಕೃತ ಪದ. ನಮ್ಮ ಕಥೆಗೆ ಹೊಂದಿಕೊಳ್ಳುವುದರಿಂದ ಈ ಶೀರ್ಷಿಕೆ ಆಯ್ದುಕೊಂಡಿದ್ದೇವೆ. ಇದೊಂದು ಹಾರರ್‌ ಜಾನರ್‌ನ ಚಿತ್ರ. ಮನೆ ಯಜಮಾನ ದುಷ್ಟಶಕ್ತಿಯಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಯಾವ ರೀತಿ ಹೋರಾಟ ನಡೆಸುತ್ತಾನೆ? ಇದಕ್ಕೆ ದೈವಶಕ್ತಿ ಹೇಗೆ ಬಲ ನೀಡುತ್ತದೆ ಎಂಬುದೇ ಮುಖ್ಯ ಕಥೆ. ಪ್ರೀತಿ, ಮದುವೆ, ಸಂಸಾರ ಮುಂತಾದ ವಿಷಯಗಳೊಂದಿಗೆ ಮನರಂಜನೀಯ ಅಂಶಗಳೂ ಇವೆ. ನಾಲ್ಕು ಹಾಡು, ಮೂರು ಫೈಟ್‌ಗಳಿವೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಮಡಕೇರಿ, ಮುನ್ನಾರ್, ಕೊಚ್ಚಿ ಮುಂತಾದೆಡೆ ಚಿತ್ರೀಕರಣ ನಡೆಸುವ ಯೋಜನೆಯಿದೆ’ ಎಂದರು ನಿರ್ದೇಶಕರು. 

ಬಿ.ವಾಸುದೇವರಾವ್ ನಿರ್ಮಾಣ ಮಾಡುತ್ತಿದ್ದಾರೆ. ಸಂತೋಷ್‌ ಕುಮಾರ್ ನಾಯಕ. ರಿಷಾ ಗೌಡ, ಐರಾ ಮೆನನ್‌ ನಾಯಕಿಯರು. ಅವಿನಾಶ್, ರಂಗಾಯಣ ರಘು, ಕಿಟ್ಟಿ ತಾಳಿಕೋಟೆ, ಬಲ ರಾಜವಾಡಿ, ಶರತ್‌ ಲೋಹಿತಾಶ್ವ ಮುಂತಾದವರು ಅಭಿನಯಿಸುತ್ತಿದ್ದಾರೆ. ಕ್ರಿಸ್ಟೋಫರ್ ಜಾಯ್ಸನ್‌ ಸಂಗೀತ,  ಜೆ.ಕೆ.ಗಣೇಶ್‌ ಛಾಯಾಚಿತ್ರಗ್ರಹಣವಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳ ಭಾಷೆಗಳಲ್ಲಿ ಚಿತ್ರ ಸಿದ್ದಗೊಳ್ಳುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.