ADVERTISEMENT

ದಿಗಂತ್‌ ಸಂದರ್ಶನ | ಹೊಸ ವರ್ಷದ ಹೊಸ್ತಿಲಲ್ಲಿ ‘...ಶುಭಾಶಯ’

ಶರತ್‌ ಹೆಗ್ಡೆ
Published 30 ಡಿಸೆಂಬರ್ 2021, 19:30 IST
Last Updated 30 ಡಿಸೆಂಬರ್ 2021, 19:30 IST
ದಿಗಂತ್‌
ದಿಗಂತ್‌   

ಹೊಸ ವರ್ಷದ ಹೊಸ್ತಿಲಲ್ಲಿ ‘ಹುಟ್ಟು ಹಬ್ಬದ ಶುಭಾಶಯ’ಗಳನ್ನು ಹೇಳುತ್ತಿದ್ದಾರೆ ನಟ ದಿಗಂತ್‌. ಸಿನಿಮಾ ಹಾಗೂ ಅದರಾಚೆಗೂ ಈ ವರ್ಷ ಸುದ್ದಿಯಾದ ದಿಗಂತ್‌ ತಮ್ಮ ಸಿನಿಬದುಕಿನ ಏಳುಬಿಳುಗಳನ್ನು ತೆರೆದಿಟ್ಟಿದ್ದಾರೆ. ದಿಗಂತ್‌ ಬದುಕು, ಅಭಿರುಚಿಗಳ ಬಗೆಗಿನ ಝಲಕ್‌ ಇಲ್ಲಿದೆ.

* ಹೊಸ ವರ್ಷದ ಶುಭಾಶಯ ಹೇಳುವ ಹೊತ್ತಿನಲ್ಲಿ ‘ಹುಟ್ಟುಹಬ್ಬದ ಶುಭಾಶಯಗಳು’ ಹೇಳುತ್ತಿದ್ದೀರಲ್ಲಾ?

ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಆದರೆ, ಮೂರು ದಿನ ಮೊದಲು ಅಂದರೆ ಡಿ. 28ರಂದು ನನ್ನ ಜನ್ಮದಿನ ಇತ್ತು. ಹಾಗಾಗಿ ನನ್ನ ಜನ್ಮದಿನದ ಹೊತ್ತಿಗೇ ಆ ಸಿನಿಮಾ ಬಿಡುಗಡೆ ಮಾಡೋಣ ಎಂದು ನನ್ನ ನಿರ್ಮಾಪಕರು ಹೇಳಿದರು. ಹಾಗಾಗಿ ಈ ಶೀರ್ಷಿಕೆ ಇಟ್ಟಿದ್ದೇವೆ.

ADVERTISEMENT

* ಪ್ರೀತಿ, ಲಘು ವಿಷಯಗಳ ಮೇಲೆ ಸಿನಿಮಾ ಮಾಡುತ್ತಿದ್ದವರು, ಈಗ ಪತ್ತೇದಾರಿಕೆ ಆರಂಭಿಸಿದ್ದೀರಲ್ಲಾ?
ನನಗೆ ಮೊದಲಿನಿಂದಲೂ ಸಸ್ಪೆನ್ಸ್‌, ಥ್ರಿಲ್ಲರ್‌, ಪತ್ತೇದಾರಿಕೆ ಕಥೆಗಳು ಇಷ್ಟ. ನಾನು ಸಿನಿಮಾ, ಒಟಿಟಿ ಸರಣಿಗಳಲ್ಲಿ ಇಂಥದ್ದನ್ನೇ ಹುಡುಕಿ ನೋಡುತ್ತೇನೆ. ನನ್ನ ಪ್ರೇಕ್ಷಕರಿಗೂ ಹೊಸ ರೀತಿಯ ಸಿನಿಮಾ ಕೊಡೋಣ ಎಂದು ಯೋಚಿಸಿ ಈ ಚಿತ್ರ ಕೊಟ್ಟಿದ್ದೇನೆ. ಜನರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಈ ಕಥೆ ನನ್ನನ್ನು ಸೀಟಿನ ತುದಿಯಲ್ಲೇ ಕೂರಿಸಿತು.

* ‘...ಶುಭಾಶಯಗಳು’ ಸಿದ್ಧತೆ ಹೇಗಿತ್ತು?
ಕೋವಿಡ್‌ ಸಾಂಕ್ರಾಮಿಕಕ್ಕಿಂತ (ಮೊದಲ ಲಾಕ್‌ಡೌನ್‌) ಮೊದಲೇ ಈ ಚಿತ್ರ ಬರಬೇಕಿತ್ತು. ಎಲ್ಲವೂ ಸಿದ್ಧವಾಗಿತ್ತು. ಆದರೆ, ಅನಿವಾರ್ಯವಾಗಿ ಎರಡು ವರ್ಷ ಕಾಯಬೇಕಾಯಿತು.

*ನಿಮ್ಮನ್ನು ದೂದ್‌ಪೇಢಾ ಎಂದು ಯಾಕೆ ಕರೆಯುತ್ತಾರೆ?
‘ಗಾಳಿಪಟ’ ಚಿತ್ರದಲ್ಲಿ ಗಣೇಶ್‌ ಅವರು ನನ್ನನ್ನು ದೂದ್‌ ಎಂದು ಕರೆಯುತ್ತಿದ್ದರು. ಹಾಗೆ ಮುಂದೆ ಹಲವರು ದೂದ್‌ಪೇಢಾ ಎಂದು ಕರೆದರು. ಈ ಚಿತ್ರದಲ್ಲೂ ಅದೇ ಘಟನೆಯ ಹಿನ್ನೆಲೆಯಲ್ಲಿ ಹಾಸ್ಯನಟ ಮನು ಅವರು ನನ್ನನ್ನು ತಮಾಷೆಗಾಗಿ ಹಾಗೆ ಕರೆದಿದ್ದಾರೆ ಅಷ್ಟೆ.

*‘ಮಿಸ್‌ ಕ್ಯಾಲಿಫೋರ್ನಿಯಾ’ದಿಂದ ‘...ಶುಭಾಶಯಗಳು’ವರೆಗಿನ ಪಯಣ ನೆನಪಿಸಬಹುದಾ?
ಹೌದು ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಬಿದ್ದಿದ್ದೇನೆ. ಬಿದ್ದವನು ಎದ್ದು ಮಣ್ಣು ಕೊಡವಿಕೊಂಡಿದ್ದೇನೆ. ಒಂದಿಷ್ಟು ಜನರನ್ನು ನಗಿಸಿದ್ದೇನೆ, ಅಳಿಸಿದ್ದೇನೆ. ಜನರ ಪ್ರೀತಿ ಸಾಕಷ್ಟು ಸಿಕ್ಕಿದೆ. ಮಾತ್ರವಲ್ಲ ಸಿನಿಮಾ ಪಯಣದಲ್ಲೇ ಧರ್ಮಪತ್ನಿಯೂ ಸಿಕ್ಕಿದಳು. ಚಿತ್ರರಂಗ ಎಲ್ಲವನ್ನೂ ಕೊಟ್ಟಿದೆ. ಹಾಗಾಗಿ ಚಿತ್ರರಂಗಕ್ಕೆ ನಾನು ಆಭಾರಿ.

*ಸಿನಿಮಾ ಹೊರತಾದ ಕಾರಣಗಳಿಗೆ ಸುದ್ದಿಯಾದಿರಲ್ಲಾ?
ನಾವು ಸಿನಿಮಾದಲ್ಲಿ ಇರುವ ಕಾರಣಕ್ಕೆ ಇಂಥದ್ದನ್ನೆಲ್ಲಾ ಎದುರಿಸಬೇಕಾಗಿ ಬಂದಿತು. ಏನು ಮಾಡಲಿ ಹೇಳಿ, ಇವೆಲ್ಲಾ ಬದುಕಿನ ಭಾಗ. ಅನುಭವಿಸಿ ಮುಂದೆ ಹೋಗಬೇಕು. ಕೆಲವರು ಇಲಿ ಹೋದರೆ ಹುಲಿ ಹೋಯ್ತು ಅನ್ನುತ್ತಾರಲ್ಲಾ ಹಾಗೆ. ಇಂಥದ್ದೆಲ್ಲ ಇರುತ್ತೆ ಬಿಡಿ.

*ಸಿನಿಬದುಕಿನ ಕನಸುಗಳು?
ಸಿನಿಮಾ ರಂಗದಲ್ಲಿ ಗಳಿಸಿದ್ದನ್ನು ಸಿನಿಮಾ ಕ್ಷೇತ್ರಕ್ಕೇ ಕೊಡಬೇಕು. ನನ್ನದೇ ಆದ ನಿರ್ಮಾಣ ಕಂಪನಿ ತೆರೆಯಬೇಕು. ಹೊಸಬರಿಗೆ ಅವಕಾಶ ಕೊಟ್ಟು ಬೆಳೆಸಬೇಕು ಎಂಬ ಕನಸಿದೆ. ನಾನೇ ದುಡಿದು ರಾಶಿ ಹಾಕಿಕೊಳ್ಳಬೇಕು ಎಂಬ ಉದ್ದೇಶ ಇಲ್ಲ. ಹೊಸ ಪ್ರತಿಭೆಗಳನ್ನು ಮೇಲೆ ತರಲು ನನ್ನ ಕೈಲಾದ ಮಟ್ಟದಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡಬೇಕು ಎಂಬ ಆಸೆ ಇದೆ.

*ಬೇರೆ ಭಾಷೆಗಳಲ್ಲಿ ಪ್ರಯತ್ನಗಳು?
ಹೌದು, ಎಂಎಕ್ಸ್‌ ಪ್ಲೇಯರ್‌ ಒಟಿಟಿ ವೇದಿಕೆಯಲ್ಲಿ ಪ್ರಯತ್ನ ಮಾಡಿದ್ದೇನೆ. ಹಿಂದಿ ಭಾಷೆಯಲ್ಲಿ ಮಾಡಿದ ‘ರಾಮ್‌ಯುದ್ಧ್‌’ ಸರಣಿಯಲ್ಲಿ ರಾಮನ ಪಾತ್ರ ಮಾಡಿದ್ದೇನೆ. ಅದನ್ನು ಸುಮಾರು ಎರಡೂವರೆ ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇಂಥ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇನೆ.

* ಹೊಸ ವರ್ಷದ ಗುರಿಗಳು?
ಹೌದು ಓಮೈಕ್ರಾನ್‌ನಂಥ ಪಿಡುಗು ಯಾರಿಗೂ ಸಂಕಷ್ಟ ತರದಿರಲಿ. ಈಗಾಗಲೇ ಐದು ಸಿನಿಮಾಗಳು ಬಿಡುಗಡೆಗೆ ಕಾದಿವೆ. ಈ ಪೈಕಿ ಬಹುನಿರೀಕ್ಷಿತ ‘ಗಾಳಿಪಟ–2’ ಚಿತ್ರವೂ ಒಂದು. ಅದು ಜನರಿಗೆ ತಲುಪಿ ಅವರಿಗೆ ಖುಷಿ ಸಿಕ್ಕರೆ ಸಾಕು.

* ಸಿನಿಮಾದಾಚೆಗಿನ ದಿಗಂತ್‌?
ನಾನೊಬ್ಬ ಒಳ್ಳೆಯ ಬ್ಯಾಡ್ಮಿಂಟನ್‌ ಆಟಗಾರ. ಸೈಕ್ಲಿಂಗ್‌, ಬೈಕ್‌ ಸವಾರಿ, ಚಾರಣ ನನಗಿಷ್ಟ. ಕುಂಗ್‌ಫೂ ಕಲಿತಿದ್ದೇನೆ. ಬ್ಯಾಕ್‌ಫ್ಲಿಪ್‌, ಸ್ಕೂಬಾ ಡೈವಿಂಗ್‌ ನನಗೆ ತುಂಬಾ ಖುಷಿಕೊಡುವ ಸಂಗತಿಗಳು. ಹೀಗೆ ತುಂಬಾ ಹವ್ಯಾಸಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.