ADVERTISEMENT

ಪೇ ಪರ್‌ ವ್ಯೂನಲ್ಲಿ ಸಿಗೋದು ಕೇವಲ ₹10!: ‘ತೀರ್ಥರೂಪ ತಂದೆಯವರಿಗೆ’ ಚಿತ್ರತಂಡ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 22:30 IST
Last Updated 2 ಮಾರ್ಚ್ 2026, 22:30 IST
ನಿಹಾರ್‌ ಮುಕೇಶ್‌, ರಚನಾ ಇಂದರ್‌
ನಿಹಾರ್‌ ಮುಕೇಶ್‌, ರಚನಾ ಇಂದರ್‌   

‘ನಿಮ್ಮೆಲ್ಲರಲ್ಲೂ ಒಂದು ವಿನಂತಿ. ನಮ್ಮ ‘ತೀರ್ಥರೂಪ ತಂದೆಯವರಿಗೆ’ ಚಿತ್ರ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ತಾವೆಲ್ಲರೂ ಚಿತ್ರದ ಪೈರೇಟೆಡ್‌ ಕಾಪಿ ನೋಡಬೇಡಿ ಹಾಗೂ ಅದರ ಲಿಂಕ್‌ ಅನ್ನು ಯಾರಿಗೂ ಕಳುಹಿಸಬೇಡಿ. ನೀವು ಪ್ರೈಮ್‌ನಲ್ಲಿ ನಮ್ಮ ಚಿತ್ರವನ್ನು ಸಂಪೂರ್ಣವಾಗಿ ನೋಡಿದರೆ ನಮಗೆ ₹10 ಬರುತ್ತದೆ..’ 

ಇದು ಕಳೆದ ಜ.1ರಂದು ಚಿತ್ರಮಂದಿರಗಳಲ್ಲಿ ತೆರೆಕಂಡು, ಸದ್ಯ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿರುವ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ‘ಎಕ್ಸ್‌’ ಮೂಲಕ ಮಾಡಿರುವ ಮನವಿ. ಈ ಮನವಿ ಒಟಿಟಿ ವೇದಿಕೆಗಳಲ್ಲಿ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಯನ್ನು ಬಹಿರಂಗವಾಗಿ ಹೇಳಿದೆ.

ಈ ಹಿಂದೆ ಶೂಟಿಂಗ್‌ ಹಂತದಲ್ಲಿರುವಾಗಲೇ ಒಟಿಟಿ ವೇದಿಕೆಗಳು ಸ್ಟಾರ್‌ ನಟರ ಸಿನಿಮಾಗಳನ್ನು ಖರೀದಿಸುತ್ತಿದ್ದವು. ನಟ ರಿಷಬ್‌ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿದ್ದ ‘ಕಾಂತಾರ’ ಪ್ರೀಕ್ವೆಲ್‌ ಇದೇ ರೀತಿ ದೊಡ್ಡ ಮೊತ್ತಕ್ಕೆ ಖರೀದಿಯಾಗಿತ್ತು. ಇತ್ತೀಚೆಗೆ ಒಟಿಟಿ ವೇದಿಕೆಗಳು ಸಿನಿಮಾ ಖರೀದಿಯನ್ನು ನಿಲ್ಲಿಸಿವೆ. ಹೆಚ್ಚಿನ ಸಿನಿಮಾಗಳನ್ನು ‘ಪೇ ಪರ್‌ ವ್ಯೂ’ ಆಧಾರದಲ್ಲೇ ಪಡೆಯುತ್ತಿವೆ. ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ, ಉತ್ತಮ ವಿಮರ್ಶೆಗಳನ್ನು ಪಡೆದ ಸಿನಿಮಾಗಳನ್ನಷ್ಟೇ ಈ ಆಧಾರದಲ್ಲಿ ಒಟಿಟಿ ಸಂಸ್ಥೆಗಳು ಪಡೆಯುತ್ತಿವೆ. ಹೀಗಿದ್ದರೂ ಇನ್ನೂ ನೂರಾರು ಕನ್ನಡ ಸಿನಿಮಾಗಳು ‘ಪೇ ಪರ್‌ ವ್ಯೂ’ ಆಧಾರದಲ್ಲೂ ಖರೀದಿಯಾಗಿಲ್ಲ. 

ADVERTISEMENT

‘ಜನರು ನಮ್ಮ ಸಿನಿಮಾವನ್ನು ಪ್ರೈಮ್‌ನಲ್ಲಿ ನೋಡಿದರೆ ನಮಗೆ ಗಂಟೆಗೆ ₹4 ದೊರೆಯುತ್ತದೆ. ಓರ್ವ ಪ್ರೇಕ್ಷಕ ಸಂಪೂರ್ಣವಾಗಿ ನಮ್ಮ ಸಿನಿಮಾ ನೋಡಿದರೆ ₹10 ದೊರೆಯುತ್ತದೆ. ಇದುವೇ ನಮ್ಮ ಮುಖ್ಯ ಆದಾಯ ಮೂಲ. ಹೆಚ್ಚಿನವರು ಒಟಿಟಿ ವೇದಿಕೆಗಳು ಸಿನಿಮಾವನ್ನು ಖರೀದಿಸಿವೆ ಎಂದು ಭಾವಿಸುತ್ತಾರೆ. ಆದರೆ ಇವು ಪೇ ಪರ್‌ ವ್ಯೂ ಆಧಾರದಲ್ಲೇ ಇರುತ್ತವೆ’ ಎಂದಿದ್ದಾರೆ ರಾಮೇನಹಳ್ಳಿ ಜಗನ್ನಾಥ್‌.

 ‘ಹೊಂದಿಸಿ ಬರೆಯಿರಿ’ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದ ರಾಮೇನಹಳ್ಳಿ ಜಗನ್ನಾಥ್‌, ಸದ್ಯ ಗಣೇಶ್‌ ಮುಖ್ಯಭೂಮಿಕೆಯಲ್ಲಿರುವ ‘ತಮ್ಮ ಸುಖಾಗಮನ ಬಯಸುವ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.