ADVERTISEMENT

ಈ ವಾರ ತೆರೆ ಕಾಣಲಿವೆ ಆರು ಸಿನಿಮಾಗಳು: ಇಲ್ಲಿದೆ ಪಟ್ಟಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 23:52 IST
Last Updated 23 ಅಕ್ಟೋಬರ್ 2025, 23:52 IST
ಈ ವಾರ  ತೆರೆಗೆ
ಈ ವಾರ ತೆರೆಗೆ   

‘ಕಾಂತಾರ ಅಧ್ಯಾಯ–1’ ಚಿತ್ರದ ಅಬ್ಬರದಿಂದ ಕಳೆದ ಕೆಲವು ವಾರಗಳಿಂದ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ತೆರೆ ಕಂಡಿರಲಿಲ್ಲ. ಈ ವಾರದಿಂದ ಮತ್ತೆ ಚಿತ್ರ ಬಿಡುಗಡೆ ಚಟುವಟಿಕೆಗಳು ಗರಿಗೆದರಿದ್ದು, ಆರು ಸಿನಿಮಾಗಳು ತೆರೆಯಲ್ಲಿವೆ.

ಬಿಳಿಚುಕ್ಕಿ ಹಳ್ಳಿಹಕ್ಕಿ

ಮಹೇಶ್ ಗೌಡ ನಿರ್ಮಾಣ, ನಿರ್ದೇಶನ ಮಾಡಿ ನಟಿಸಿರುವ ಚಿತ್ರವಿದು. ತೊನ್ನಿನ ಸಮಸ್ಯೆ ಕುರಿತಾದ ಅಪರೂಪದ ಕಥಾವಸ್ತು ಹೊಂದಿರುವ ಚಿತ್ರವನ್ನು ಶ್ರೀಮುರಳಿ ಅರ್ಪಿಸುತ್ತಿದ್ದಾರೆ.

‘ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಸಲ ತೊನ್ನು ಎಂಬ ಸಮಸ್ಯೆಯ ಸುತ್ತ ರೂಪುಗೊಂಡಿರುವ ಚಿತ್ರವಿದು. ಸಮಸ್ಯೆ ಎಂಬ ಗೋಳಿನ ಕಥೆ ಇದರಲ್ಲಿ ಇಲ್ಲ. ಬದಲಿಗೆ ಇದೊಂದು ರಾಂಕಾಮ್‌ ಜಾನರ್‌ನ ಚಿತ್ರ. ನಗಿಸುತ್ತಲೇ ಅಳು ಮೂಡಿಸುವ ಕಥೆ’ ಎಂದಿದ್ದಾರೆ ಶ್ರೀಮುರಳಿ. ‌

ADVERTISEMENT

ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಚಿತ್ರಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ. 

ನ್ಯೂಟನ್ ಥರ್ಡ್ ಲಾ 

ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ಧಪಡಿಸಿರುವ ಚಿತ್ರವಿದು. ಸುಧಾಕರ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಸನ್‌ಕ್ರಾಫ್ಟ್ ಸಂಸ್ಥೆ ನಿರ್ಮಾಣವಿದೆ.

‘ನಾಲ್ಕು ಹುಡುಗರು, ಇಬ್ಬರು ಹುಡುಗಿಯರು ಪ್ರೀತಿಯನ್ನು ಹೇಳಿಕೊಳ್ಳಲು ಲಾಂಗ್ ವೀಕೆಂಡ್ ಹೋಗುತ್ತಾರೆ. ಅಲ್ಲಿ ಗೆಳೆಯರು ಕುಡಿದು ಗಲಾಟೆ ಮಾಡಿಕೊಂಡು ಪಾರ್ಟಿ ಹಾಳು ಮಾಡುತ್ತಾರೆ. ಮಾರನೇ ದಿನ ಅಹಿತಕರ ಘಟನೆ ನಡೆಯುತ್ತದೆ. ಅದು ಏನು? ಯಾಕೆ ಎಂಬುದನ್ನು ಸಸ್ಪೆನ್ಸ್ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ’ ಎಂದಿದ್ದಾರೆ ನಿರ್ದೇಶಕ. 

ತಾರಾಗಣದಲ್ಲಿ ವಿಶೂ, ವಿದ್ಯಾಶ್ರೀ ಗೌಡ, ವಿಜಯ್‌ ಚೆಂಡೂರ್, ಅಂಬರೀಷ ಸಾರಗಿ, ಶ್ರೀಧರ್‌ ಭಟ್, ಅಥರ್ವ, ರೋಹಿತ್‌ ಮುಂತಾದವರಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಗಂಧರ್ವ ರಾಯರಾವುತ ಅವರದ್ದು. ಪ್ರವೀಣ್‌ ಕುಮಾರ್‌ ಛಾಯಾಚಿತ್ರಗ್ರಹಣ, ಶಿವರಾಜ್‌ ಮೇಹು ಸಂಕಲನವಿದೆ. ಬೆಂಗಳೂರು, ಕನಕಪುರ, ಮಡಿಕೇರಿ, ಹೊನ್ನಾವರ, ಕುಮಟಾ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ.

ಯಾರಿಗೂ ಹೇಳ್ಬೇಡಿ

ನಟಿ ಚೈತ್ರಾ ಜೆ. ಆಚಾರ್‌ ಮುಖ್ಯಭೂಮಿಕೆಯಲ್ಲಿರುವ ಚಿತ್ರವಿದು. ಶಿವಗಣೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹರೀಶ್ ಅಮ್ಮಿನೇನಿ ಬಂಡವಾಳ ಹೂಡಿದ್ದಾರೆ.

ಚೇತನ್‌ ವಿಕ್ಕಿ ಚಿತ್ರದ ನಾಯಕ. ಅಪ್ಪಣ್ಣ, ಅಶ್ವಿನಿ ಪೊಲೆಪಲ್ಲಿ, ಶರತ್ ಲೋಹಿತಾಶ್ವ, ಚೈತ್ರಾ ರಾವ್ ಮುಂತಾದವರು ನಟಿಸಿದ್ದಾರೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಸ್ನೇಹಿತನಾಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಶ್ವಿನಿ ಪೊಲೆಪಲ್ಲಿ ಉಪನಾಯಕಿ. ಶರತ್ ಲೋಹಿತಾಶ್ವ, ಚೈತ್ರಾರಾವ್, ಶಭರೇಶ್, ಕಾರ್ತಿಕ್ ಮುಂತಾದವರು ನಟಿಸಿದ್ದಾರೆ.

‘ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ. ನಾಯಕ ವಿಡಿಯೊ ಜಾಕಿ. ಮದುವೆ ಮುಂಚಿನ ಒಂದು ಸಂದರ್ಭದಲ್ಲಿ ಸುಳ್ಳು ಹೇಳಿ ಕಷ್ಟಕ್ಕೆ ಸಿಲುಕುತ್ತಾನೆ. ನಂತರ ‘ಯಾರಿಗೂ ಹೇಳ್ಬೇಡಿ’ ಎಂದು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಾನೆ. ಅದನ್ನು ಮುಚ್ಚಿಡಲು ಹೋದಾಗ ಏನೆಲ್ಲಾ ಅವಾಂತರಗಳು ಆಗುತ್ತವೆ ಎಂಬುದೇ ಚಿತ್ರ’ ಎಂದಿದ್ದಾರೆ ನಿರ್ದೇಶಕ.

ಶಶಾಂಕ್ ಶೇಷಗಿರಿ ಸಂಗೀತ, ಡೇವಿಡ್‌ ಆನಂದರಾಜ್‌ ಛಾಯಾಚಿತ್ರಗ್ರಹಣ, ದೀಪಕ್.ಸಿ.ಎಸ್‌ ಸಂಕಲನವಿದೆ. 

ಗ್ರೀನ್‌

ವಿಜಯ್ ನಿರ್ದೇಶನದ ಚಿತ್ರವಿದು. ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಆರ್.ಜೆ. ವಿಕ್ಕಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ರಾಜ್ ವಿಜಯ್ ಹಾಗೂ ಬಿ.ಎನ್. ಸ್ವಾಮಿ ಬಂಡವಾಳ ಹೂಡಿದ್ದಾರೆ.

‘ಸೈಕಾಲಜಿಕಲ್ ಮೈಂಡ್ ಬೈಡಿಂಗ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವೂ ಹೌದು. ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೋರಾಡುವ ನಾಯಕನ ಕಥೆಯೇ ‘ಗ್ರೀನ್’. ಇದೊಂದು ಕಾಡಿನಲ್ಲಿ ನಡೆಯುವ ಕಥೆಯಾಗಿದ್ದು, ಊಟಿ ಬಳಿಯಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ. ಜಗತ್ತಿನ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಚಿತ್ರ ಪ್ರದರ್ಶನವಾಗಿದ್ದು, ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ. 

ಟಾರ್ಟರೀಸ್‌, ಆರಿದ್ರಾ ಸಿನಿಮಾಗಳು ಈ ವಾರ ತೆರೆಯಲ್ಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.