ADVERTISEMENT

ಚಂದನವನಕ್ಕೆ ಹೆಜ್ಜೆ ಇಟ್ಟ ‘ರಾಧೆ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 19:30 IST
Last Updated 2 ಮಾರ್ಚ್ 2023, 19:30 IST
ಮಲ್ಲಿಕಾ ಸಿಂಗ್‌
ಮಲ್ಲಿಕಾ ಸಿಂಗ್‌   

ನಿರ್ದೇಶಕ ‘ಸಿಂಪಲ್‌’ ಸುನಿ ನಿರ್ದೇಶನದ, ವಿನಯ್‌ ರಾಜ್‌ಕುಮಾರ್‌ ನಟಿಸುತ್ತಿರುವ ಹೊಸ ಚಿತ್ರಕ್ಕೆ ಎರಡನೇ ನಾಯಕಿಯ ಆಯ್ಕೆಯಾಗಿದೆ.

ಹಿಂದಿಯ ಜನಪ್ರಿಯ ಧಾರಾವಾಹಿ ‘ರಾಧಾ ಕೃಷ್ಣ’ದ ಮುಖ್ಯಪಾತ್ರಧಾರಿ ಮಲ್ಲಿಕಾ ಸಿಂಗ್‌ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಚಿತ್ರತಂಡದ ಮೂಲಗಳು ಈ ವಿಚಾರವನ್ನು ಖಚಿತಪಡಿಸಿದ್ದು, ಅಧಿಕೃತವಾಗಿ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಮ್ಯೂಸಿಕಲ್ ಲವ್‌ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ, ತಮಿಳಿನ ಹಿಟ್‌ ಸಿನಿಮಾ ‘ವಿಕ್ರಮ್’ನಲ್ಲಿ ನಟಿಸಿದ್ದ ಸ್ವತಿಷ್ಠ ಕೃಷ್ಣನ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಎರಡನೇ ನಾಯಕಿಯ ಪಾತ್ರ ಉತ್ತರ ಭಾರತೀಯಳದ್ದಾಗಿದ್ದು, ಇದಕ್ಕಾಗಿ ಹುಡುಕಾಟ ನಡೆದಿದೆ ಎಂದಿದ್ದರು ಸುನಿ. ಇದೀಗ ಎರಡನೇ ನಾಯಕಿಯ ಆಯ್ಕೆಯೂ ಆಗಿದೆ.

ವಿನಯ್ ರಾಜ್‌ಕುಮಾರ್ ಹಾಗೂ ಸುನಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸರಳ ಪ್ರೇಮಕಥೆಯಲ್ಲಿ ನಟಿಸಲು ಮಲ್ಲಿಕಾ ಸಿಂಗ್ ಹಸಿರು ನಿಶಾನೆ ತೋರಿದ್ದಾರೆ. ಈ ಮೂಲಕ ಅವರು ತಮ್ಮ ಸಿನಿಪಯಣವನ್ನೂ ಆರಂಭಿಸುತ್ತಿದ್ದಾರೆ ಎಂದಿದೆ ಚಿತ್ರತಂಡ. ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಬರೆದು ಸುನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸುನಿ ಸದ್ಯದಲ್ಲೇ ಸಿನಿಮಾದ ಶೀರ್ಷಿಕೆ, ಪೂರ್ಣ ತಾರಾಬಳಗದ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರಕ್ಕೆ ಮೈಸೂರು ರಮೇಶ್ ಬಂಡವಾಳ ಹೂಡುತ್ತಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನ, ಸಭಾ ಛಾಯಾಗ್ರಾಹಣ ಚಿತ್ರಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.