ADVERTISEMENT

ಹೊಸ ಗೆಟಪ್‌ನಲ್ಲಿ ಸಂಚಾರಿ ವಿಜಯ್‌: ಹರಳು ವ್ಯಾಪಾರಿ ‘ಮೇಲೊಬ್ಬ ಮಾಯಾವಿ’

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 11:23 IST
Last Updated 11 ಫೆಬ್ರುವರಿ 2022, 11:23 IST
ಸಂಚಾರಿ ವಿಜಯ್‌
ಸಂಚಾರಿ ವಿಜಯ್‌   

ಹರಳು ಕಲ್ಲು ದಂಧೆ ಹೇಗೆಲ್ಲಾ ನಮ್ಮ ನಾಡಿನಲ್ಲೂ ವ್ಯಾಪಿಸಿದೆ? ಇದರಿಂದಾಗುವ ಪರಿಣಾಮ ಏನು ಎಂಬ ಕಥೆ ಹೇಳಲು ಹೊರಟಿದೆ ‘ಮೇಲೊಬ್ಬ ಮಾಯಾವಿ’ ಚಿತ್ರ. ಅಂದಹಾಗೆ ಇಲ್ಲಿ ಮಾಯಾವಿ ಆಗಿರುವವರು ದಿವಂಗತ ಸಂಚಾರಿ ವಿಜಯ್‌.

ಅರಣ್ಯಪ್ರದೇಶವನ್ನೇ ಹೊದ್ದುಕೊಂಡಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ಹರಳು ಕಲ್ಲು ದಂಧೆ ಮತ್ತೆ ಶುರುವಾಗಿದೆ.ಕೂಜಿಮಲೆ, ಸುಟ್ಟತ್ ಮಲೆ ಅರಣ್ಯ ಪ್ರದೇಶದಲ್ಲಿ ಹೊಳೆಯುವ ಕಲ್ಲಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.ಹಣದ ಆಸೆಗೆ ಕಾರ್ಮಿಕರು ಗುಡ್ಡದಲ್ಲಿ ಅಪಾಯಕಾರಿ ಸುರಂಗ ಕೊರೆದು ಹೊಳೆಯುವ ಕಲ್ಲುಗಳಿಗಾಗಿ ಹುಡುಕಾಟ ನಡೆಸುತ್ತಾರೆ.. ಇನ್ನು ಸುರಂಗ ಕೊರೆದು ಹರಳುಕಲ್ಲು ತೆಗೆಯುವ ವೇಳೆ ಸುರಂಗ ಕುಸಿದು ಅಲ್ಲಿಯೇ ಸಮಾಧಿಯಾದ ಘಟನೆಗಳು ಕೂಡ ನಡೆದಿವೆ. ಚಿತ್ರತಂಡ ಇಂತಹಅಪಾಯದ ಜಾಗಗಳಲ್ಲೇ ಚಿತ್ರೀಕರಣ ಮಾಡಿತ್ತು. ಮಾಫಿಯಾ ಕಥೆಯ ಜೊತೆಈ ಎಲ್ಲಾ ಅಂಶಗಳನ್ನು ಚಿತ್ರತಂಡ `ಮೇಲೊಬ್ಬ ಮಾಯಾವಿ’ಯಲ್ಲಿ ಮನೋರಂಜನೆಯೊಂದಿಗೆ ಪ್ರೇಕ್ಷಕರ ಮುಂದಿಡಲಿದೆ.

`ಶ್ರೀಕಟೀಲ್ ಸಿನಿಮಾಸ್’ ಬ್ಯಾನರ್‌ನ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮೀನ್ ಕೊಲ್ಯ 'ಮೇಲೊಬ್ಬ ಮಾಯಾವಿ' ಚಿತ್ರದ ನಿರ್ಮಾಪಕರು. ನಿರ್ದೇಶಕ ಬಿ.ನವೀನ್‌ಕೃಷ್ಣ, ಸಂಚಾರಿ ವಿಜಯ್ ಅವರ ‘ಇರುವೆ’ ಅನ್ನುವ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ಅನನ್ಯಾ ಶೆಟ್ಟಿ ನಾಯಕಿ. ಬಿಗ್‌ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿದ್ದಾರೆ. ಕೃಷ್ಣಮೂರ್ತಿ ಕವತ್ತಾರ್, ಪವಿತ್ರಾ ಜಯರಾಮ್, ಬೆನಕ ನಂಜಪ್ಪ, ಎಂ.ಕೆ.ಮಠ, ನವೀನ್‌ಕುಮಾರ್, ಲಕ್ಷ್ಮೀಅರ್ಪಣ್, ಮುಖೇಶ್, ಡಾ.ಮನೋನ್ಮಣಿ.. ಹೀಗೆ ಸಾಕಷ್ಟು ರಂಗಭೂಮಿ ಪ್ರತಿಭೆಗಳನ್ನು ಚಿತ್ರದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕಾಣಬಹುದು.

ಚಿತ್ರಕ್ಕೆ ಎಲ್.ಎನ್.ಶಾಸ್ತ್ರಿ ಅವರ ಸಂಗೀತವಿದೆ. ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಚಿತ್ರದ ಕಂಟೆಂಟ್ ಬಗ್ಗೆ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ. ಇನ್ನು, ಚಿತ್ರದ ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿಯವರದ್ದು. ಕೆ.ಗಿರೀಶ್ ಕುಮಾರ್ ಚಿತ್ರಕ್ಕೆ ಸಂಕಲನವಿದೆ. ದೀಪಿತ್ ಬಿಜೈ ರತ್ನಾಕರ್ ಛಾಯಾಗ್ರಾಹಕ. ರಾಮು ಅವರ ನೃತ್ಯ ಸಂಯೋಜನೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.