ADVERTISEMENT

ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ನಿಲ್ಲಬೇಕು: ನಟಿ ರಮ್ಯಾ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 23:36 IST
Last Updated 6 ಮಾರ್ಚ್ 2025, 23:36 IST
16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ಮಹಿಳೆ ಹಾಗೂ ಸಿನಿಮಾ’ ಎಂಬ ಗೋಷ್ಠಿಯಲ್ಲಿ ಚಿತ್ರ ನಟಿ ರಮ್ಯಾ.
16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ಮಹಿಳೆ ಹಾಗೂ ಸಿನಿಮಾ’ ಎಂಬ ಗೋಷ್ಠಿಯಲ್ಲಿ ಚಿತ್ರ ನಟಿ ರಮ್ಯಾ.   

ಬೆಂಗಳೂರು: ಚಿತ್ರರಂಗದಲ್ಲಿ ಪುರುಷ ಹಾಗೂ ಮಹಿಳಾ ಕಲಾವಿದರಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಮಹಿಳಾ ಸಮಸ್ಯೆಗಳ ಕುರಿತು ಹೇಳಬೇಕಾದ ಕತೆಗಳು ಸಾಕಷ್ಟಿವೆ. ಆದರೆ ಯಾರೂ ಹೇಳುವ ಧೈರ್ಯ ಮಾಡುತ್ತಿಲ್ಲ ಎಂದು ಚಿತ್ರನಟಿ ರಮ್ಯಾ ಬೇಸರ ವ್ಯಕ್ತಪಡಿಸಿದರು. 

16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ಮಹಿಳೆ ಹಾಗೂ ಸಿನಿಮಾ’ ಎಂಬ ಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಒಂದು ಸಿನಿಮಾ ಯಶಸ್ವಿಯಾದರೆ ನಾಯಕರು ಮುಂದಿನ ಸಿನಿಮಾದಲ್ಲಿ ಶೇಕಡ 50ರಷ್ಟು ಸಂಭಾವನೆ ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ಮಹಿಳಾ ಕಲಾವಿದರಿಗೆ ಕೇವಲ ಶೇಕಡ 5ರಷ್ಟು ಮಾತ್ರ ಹೆಚ್ಚಿಸುತ್ತಾರೆ. ಕೆಲವೊಮ್ಮೆ ಅದೂ ಇಲ್ಲ. ಅವರಷ್ಟೇ ಕೆಲಸ ನಾವೂ ಮಾಡುವಾಗ ನಮಗೆ ಕಡಿಮೆ ಸಂಭಾವನೆ, ಅವರಿಗೆ ಹೆಚ್ಚು ಸಂಭಾವನೆ ಏಕೆ? ಈ ತಾರತಮ್ಯ ನಿಲ್ಲಬೇಕು’ ಎಂದರು.

‘ಈಗಲೂ ನಾವು ಮಹಿಳಾ ಪ್ರಧಾನ ಸಿನಿಮಾ ಎಂದರೆ ಮಹಿಳೆಯರು ಪೊಲೀಸ್ ಡ್ರೆಸ್ ಹಾಕಿಕೊಂಡು ರೌಡಿಗಳನ್ನು ಹೊಡೆಯುವ ಸಿನಿಮಾಗಳನ್ನೇ ಮಾಡುತ್ತಿದ್ದೇವೆ. ಮಲಯಾಳ ಸಿನಿಮಾಗಳು ಅದ್ಭುತವಾದ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುತ್ತಿವೆ. ಕನ್ನಡದಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳು ಕಡಿಮೆಯಾಗುತ್ತಿವೆ. ನಾಯಕನನ್ನು ನೋಡಲು ಸಿನಿಮಾಕ್ಕೆ ಪ್ರೇಕ್ಷಕರು ಬರುತ್ತಾರೆ ಎಂಬ ಮನಸ್ಥಿತಿಯಿಂದ ನಾವು ಹೊರಬರಬೇಕಿದೆ’ ಎಂದು ಅವರು ಕರೆ ನೀಡಿದರು.

ADVERTISEMENT

‘ಕನ್ನಡದಲ್ಲಿ ನನ್ನ ಪಾತ್ರ ಮುಖ್ಯ ಎನಿಸುವಂಥ ಕಥೆಗಳು ಬಂದರೆ ಖಂಡಿತ ನಾನು ಮತ್ತೆ ಚಿತ್ರರಂಗಕ್ಕೆ ಮರಳುತ್ತೇನೆ. ಆ ಕಥೆಯಲ್ಲಿ ನಾನು ಮುಖ್ಯ ಎನಿಸಬೇಕು. ನಮ್ಮದೇ ನಿರ್ಮಾಣ ಸಂಸ್ಥೆಯಿಂದ ನಾಲ್ಕು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗುತ್ತಿದ್ದೇವೆ. ಅದರಲ್ಲಿ ಒಂದು ಸಿನಿಮಾದಲ್ಲಿ ನಾನು ಅಭಿನಯಿಸುವ ಸಾಧ್ಯತೆಯಿದೆ’ ಎಂದು ತಮ್ಮ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು. 

ನಿರ್ದೇಶಕಿಯರಾದ ಪ್ರೀತಾ ಜಯರಾಮ್‌, ನಂದಿನಿ ರೆಡ್ಡಿ ತಮ್ಮ ವಿಚಾರಗಳನ್ನು ಮಂಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.