ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್–1’ ಗುರುವಾರ ತೆರೆಕಂಡಿದೆ. ಪ್ರೇಕ್ಷಕರ ಮಿಶ್ರಪ್ರತಿಕ್ರಿಯೆಯ ನಡುವೆಯೂ ಗಳಿಕೆಯಲ್ಲಿ ಹಲವು ದಾಖಲೆಗಳನ್ನು ಬದಿಗೊತ್ತಿದೆ. ಸುಮಾರು 5000ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಂಡಿರುವ ಚಿತ್ರ ಗುರುವಾರ ಬೃಹತ್ ಗಳಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ ಬುಕ್‌ಮೈ ಶೋ ಒಂದರಲ್ಲಿಯೇ 12.8 ಲಕ್ಷ ಟಿಕೆಟ್‌ಗಳು ಮಾರಾಟಗೊಂಡಿವೆ ಎಂದು ಹೊಂಬಾಳೆ ಫಿಲ್ಸ್ಮ್ಸ್ ತಿಳಿಸಿದೆ. ಆದಾಗ್ಯೂ ಮೊದಲ ದಿನದ ಒಟ್ಟಾರೆ ಗಳಿಕೆ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
‘ಕಾಂತಾರ: ಚಾಪ್ಟರ್–1’ ಮೊದಲ ದಿನದ ಗಳಿಕೆಯಲ್ಲಿ ಈ ವರ್ಷದ ಬಾಲಿವುಡ್ ಸೂಪರ್ ಹಿಟ್ ಚಿತ್ರಗಳಾದ ‘ಛಾವಾ’, ‘ಸೈಯಾರಾ’ ಮೊದಲಾದ ಚಿತ್ರಗಳನ್ನು ಹಿಂದಿಕ್ಕಿದೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.
ಚಿತ್ರತಂಡ ವಾರಗಳ ಹಿಂದೆಯೇ ಮುಂಗಡ ಬುಕ್ಕಿಂಗ್ ಪ್ರಾರಂಭಿಸಿತ್ತು. ದುಬಾರಿ ಟಿಕೆಟ್ ದರದ ನಡುವೆಯೂ ಭಾನುವಾರದವರೆಗೂ ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿವೆ. ವಾರದ ದಿನವಾದ ಶುಕ್ರವಾರ ಗಳಿಕೆ ತುಸು ಕುಗ್ಗಬಹುದೆಂದು ಅಂದಾಜಿಸಲಾಗಿದೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಬೃಹತ್ ಗಳಿಕೆ ನಿಶ್ಚಿತ.
ಬೆಂಗಳೂರಿನಲ್ಲಿಯೇ 600ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಿಗ್ಗೆ 6.30 ರಿಂದಲೇ ಪ್ರದರ್ಶನ ಪ್ರಾರಂಭಗೊಂಡಿದ್ದು ರಾತ್ರಿ 10.30ರ ತನಕವೂ ದಿನಕ್ಕೆ ಸರಾಸರಿ 10 ಪ್ರದರ್ಶನಗಳಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಭಾನುವಾರದವರೆಗೂ ಟಿಕೆಟ್‌ಗಳು ಮಾರಾಟಗೊಂಡಿದ್ದು, ಏಕಪರದೆಯ ಕೆಲ ಚಿತ್ರಮಂದಿರಗಳಲ್ಲಷ್ಟೇ ಟಿಕೆಟ್ ಲಭ್ಯವಿದೆ.
ದುಬಾರಿ ಟಿಕೆಟ್ ದರ ಕೂಡ ಗಳಿಕೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ. ದೇಶದ ಬೇರೆ ಭಾಗಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮೊದಲ ಮೂರು ದಿನಗಳಲ್ಲಿ ₹200 ಕೋಟಿ ಗಳಿಕೆ ಅಂದಾಜಿಸಲಾಗಿದೆ. ‘ಒಟ್ಟಾರೆ ₹1000 ಕೋಟಿ ಗಳಿಕೆ ನಿರೀಕ್ಷೆಯಲ್ಲಿ ನಿರ್ಮಾಣ ಸಂಸ್ಥೆಯಿದೆ’ ಎಂದು ಚಿತ್ರತಂಡದ ಮೂಲಗಳು ಹೇಳಿವೆ.
ಈ ನಡುವೆ ಚಿತ್ರಕ್ಕೆ ಪೈರಸಿ ಭೀತಿ ಪ್ರಾರಂಭಗೊಂಡಿದೆ. ’ಪೈರಸಿಯಿಂದ ಈ ಕನಸನ್ನು ವ್ಯರ್ಥವಾಗಲು ಬಿಡಬೇಡಿ. ಚಿತ್ರದ ಯಾವುದೇ ತುಣುಕುಗಳನ್ನು ಹಂಚಿಕೊಳ್ಳಬೇಡಿ. ಚಿತ್ರಮಂದಿರಗಳಲ್ಲಿ ಯಾವುದೇ ದೃಶ್ಯಗಳನ್ನು ಚಿತ್ರೀಕರಿಸಬೇಡಿ. ಸಣ್ಣ ವಿಡಿಯೊ ತುಣುಕು ಸಿನಿಮಾದ ಅಸಲಿ ಮಾಯೆಯನ್ನು ಮಲಿನಗೊಳಿಸುತ್ತದೆ. ದೊಡ್ಡ ಪರೆದಯಲ್ಲಿಯೇ ಚಿತ್ರವನ್ನು ಆನಂದಿಸಿ’ ಎಂದು ಹೊಂಬಾಳೆ ಸಂಸ್ಥೆ ಮನವಿ ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.