ADVERTISEMENT

‘ಕಾಂತಾರ ಅಧ್ಯಾಯ–1’ ಚಿತ್ರ ಅ.2ರಂದು ತೆರೆಗೆ: ದಸರಾಗಿಲ್ಲ ಸಿನಿಮಾಗಳ ಅಬ್ಬರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 23:30 IST
Last Updated 25 ಸೆಪ್ಟೆಂಬರ್ 2025, 23:30 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ದಸರಾ, ದೀಪಾವಳಿ ಎಂದರೆ ಚಿತ್ರಮಂದಿರಗಳಲ್ಲಿ ಸಿನಿಮಾ ಸುಗ್ಗಿ ಸಾಮಾನ್ಯವಾಗಿತ್ತು. ಕನ್ನಡದ ಸ್ಟಾರ್‌ ನಟರ ಚಿತ್ರಗಳ ಜೊತೆಗೆ ಪರಭಾಷಾ ಸ್ಟಾರ್‌ಗಳ ಚಿತ್ರಗಳು ಕೂಡ ತೆರೆಯಲ್ಲಿ ಇರುತ್ತಿದ್ದವು. ಆದರೆ ‘ಕಾಂತಾರ ಅಧ್ಯಾಯ–1’ ಚಿತ್ರ ತೆರೆಗೆ ಬರುತ್ತಿರುವುದರಿಂದ ಈ ದಸರಾಗೆ ಯಾವುದೇ ನಿರೀಕ್ಷಿತ ಚಿತ್ರಗಳು ತೆರೆ ಕಾಣುತ್ತಿಲ್ಲ.

ಹಬ್ಬದ ಸಡಗರ, ಶಾಲೆಗಳಿಗೆ ರಜೆ ಎಂದರೆ ಸಿನಿಮಾ ಬಿಡುಗಡೆಗೆ ಸೂಕ್ತ ಸಮಯ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಸಂಕ್ರಾಂತಿ, ದಸರಾ, ದೀಪಾವಳಿ, ಕ್ರಿಸ್‌ಮಸ್‌ಗೆ ಸ್ಟಾರ್‌ಗಳ ಒಂದಿಷ್ಟು ನಿರೀಕ್ಷಿತ ಚಿತ್ರಗಳು ತೆರೆಗೆ ಬರುತ್ತಿದ್ದವು. ಆದರೆ ಈ ಸಲ ದಸರಾ, ದೀಪಾವಳಿಗೆ ಯಾವ ನಿರೀಕ್ಷಿತ ಚಿತ್ರಗಳು ತೆರೆ ಕಾಣುತ್ತಿಲ್ಲ. ಬಹುನಿರೀಕ್ಷಿತ ‘ಕಾಂತಾರ ಅಧ್ಯಾಯ–1’ ಚಿತ್ರ ಅ.2ರಂದು ತೆರೆಗೆ ಬರುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಕಾರಣದಿಂದ ಸಣ್ಣ ಬಜೆಟ್‌ನ ಚಿತ್ರಗಳು ಕೂಡ ಬಿಡುಗಡೆ ಧೈರ್ಯ ತೋರುತ್ತಿಲ್ಲ.

ವರ್ಷದ ಪ್ರಾರಂಭದ ಮೂರು ತಿಂಗಳು ವಾರಕ್ಕೆ ಆರೆಂಟು ಸಿನಿಮಾಗಳು ತೆರೆಕಂಡವು. ಬಳಿಕ ಚಿತ್ರಗಳ ಬಿಡುಗಡೆ ಸಂಖ್ಯೆ ಗಣನೀಯವಾಗಿ ಇಳಿಯಿತು. ಜುಲೈನಲ್ಲಿ ತೆರೆಕಂಡ ‘ಸು ಫ್ರಂ ಸೋ’ ಚಿತ್ರರಂಗಕ್ಕೆ ಶಕ್ತಿ ತುಂಬಿತು. ಪರಿಣಾಮವಾಗಿ ಆಗಸ್ಟ್‌ನಿಂದ ಇಲ್ಲಿಯ ತನಕ  ವಾರಕ್ಕೆ ಸರಾಸರಿ ಆರು ಸಿನಿಮಾಗಳು ತೆರೆ ಕಂಡಿವೆ. ‘ಕಾಂತಾರ’ ತಂಡ ಕೆಲ ತಿಂಗಳ ಹಿಂದೆಯೇ ಬಿಡುಗಡೆ ದಿನಾಂಕ ಘೋಷಿಸಿತ್ತು. ಹೀಗಾಗಿ ಈ ವಾರದಿಂದಲೇ ಚಿತ್ರಗಳ ಬಿಡುಗಡೆ ಸಂಖ್ಯೆ ಕಡಿಯೆಯಾಗಿದ್ದು, ದೀಪಾವಳಿವರೆಗೂ ಇದೇ ಸ್ಥಿತಿ ಇರಲಿದೆ ಎನ್ನುತ್ತಿದ್ದಾರೆ ಚಿತ್ರ ವಿತರಕರು. 

ADVERTISEMENT

ಮೋಹನ್‌ ಲಾಲ್‌ ನಟನೆಯ ತೆಲುಗು ಚಿತ್ರ ‘ವೃಷಭ’ ಚಿತ್ರ ಅ.16ರಂದು ತೆರೆ ಕಾಣಲಿದೆ. ಪವನ್‌ ಕಲ್ಯಾಣ್‌ ಅವರ ‘ಒಜಿ’ ಈಗಾಗಲೇ ತೆರೆ ಕಂಡಿದೆ. ಇವೆರಡರ ಹೊರತಾಗಿ ತಮಿಳು, ತೆಲುಗು, ಮಲಯಾಳ ಭಾಷೆಗಳ ಸ್ಟಾರ್‌ಗಳ ಸಿನಿಮಾಗಳೂ ಕೂಡ ತೆರೆ ಕಾಣುತ್ತಿಲ್ಲ. 

ಧ್ರುವ ಸರ್ಜಾ ನಟನೆಯ ‘ಕೆಡಿ’ ದಸರಾಗೆ ತೆರೆಗೆ ಬರಲಿದೆ ಎಂದು ಮೊದಲು ನಿರೀಕ್ಷಿಸಲಾಗಿತ್ತು. ಆದರೆ ಚಿತ್ರೀಕರಣವೇ ಪೂರ್ತಿಗೊಳ್ಳದ ಕಾರಣ ಚಿತ್ರ ಬಿಡುಗಡೆ ದಿನಾಂಕ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.

ಮತ್ತೊಂದು ನಿರೀಕ್ಷಿತ ಚಿತ್ರ ದುನಿಯಾ ವಿಜಯ್‌ ನಟನೆಯ ‘ಲ್ಯಾಂಡ್‌ಲಾರ್ಡ್‌’. ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ ಎಂದು ತಂಡ ಈ ಹಿಂದೆ ಘೋಷಿಸಿತ್ತು. ‘ದೀಪಾವಳಿಗೆ ಚಿತ್ರ ಬಿಡುಗಡೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಕಾಂತಾರದ ಅಬ್ಬರ ನೋಡಿಕೊಂಡು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ತಂಡ ಆಲೋಚಿಸಿದೆ’ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

‘ಅಕ್ಟೋಬರ್‌ನಲ್ಲಿ ತೆರೆಗೆ ಬರಲು ಆಲೋಚಿಸಿದ್ದ ಕೆಲ ಸಣ್ಣಪುಟ್ಟ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿವೆ. ಪ್ರಚಾರ ಕಾರ್ಯವನ್ನೂ ಸದ್ಯಕ್ಕೆ ಸ್ಥಗಿತಗೊಳಿಸಿವೆ. ಕಾಂತಾರ ಬಿಡುಗಡೆಯಾಗಿ ವಾರದ ಬಳಿಕ ಮತ್ತೆ ಚಟುವಟಿಕೆಗಳು ಪ್ರಾರಂಭವಾಗಲಿವೆ’ ಎನ್ನುತ್ತಿದ್ದಾರೆ ಚಿತ್ರ ಪ್ರಚಾರಕರ್ತ ಕನ್ನಡ ಪಿಚ್ಚರ್ಸ್‌ ಪ್ರವೀಣ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.