ADVERTISEMENT

‘ಕಾಂತಾರ’ದಲ್ಲಿಲ್ಲ ಮೂಲ ‘ವರಾಹ ರೂಪಂ...’; ತುಳುವಿನಲ್ಲಿ ಡಿ.2ಕ್ಕೆ ರಿಲೀಸ್‌

ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 7:30 IST
Last Updated 24 ನವೆಂಬರ್ 2022, 7:30 IST
ಕಾಂತಾರ
ಕಾಂತಾರ    

ಅಮೆಜಾನ್‌ ಪ್ರೈಂ ಒಟಿಟಿ ವೇದಿಕೆಯಲ್ಲಿ ಗುರುವಾರ(ನ.24) ಬಿಡುಗಡೆಯಾದ ‘ಕಾಂತಾರ’ ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ನಿರಾಸೆಯನ್ನು ಉಂಟುಮಾಡಿದೆ. ಸಿನಿಮಾದ ಆಧಾರಸ್ತಂಭದಂತಿದ್ದ ಮೂಲ ‘ವರಾಹ ರೂಪಂ...’ ಹಾಡಿಗೆ ಬದಲಾಗಿ ಹೊಸದಾದ ‘ವರಾಹ ರೂಪಂ...’ ಹಾಡನ್ನು ಸೇರ್ಪಡಿಸಿರುವುದು ಇದಕ್ಕೆ ಕಾರಣ.

ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ‘ವರಾಹ ರೂಪಂ’ ಹಾಡು ಇಡೀ ಸಿನಿಮಾವನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿತ್ತು. ಕ್ಲೈಮ್ಯಾಕ್ಸ್‌ನಲ್ಲಿನ ದೃಶ್ಯಗಳು, ರಿಷಬ್‌ ಶೆಟ್ಟಿ ನಟನೆ ಈ ಹಾಡಿಗೆ ಮತ್ತಷ್ಟು ಶಕ್ತಿ ತುಂಬಿದ್ದವು. ಆದರೆ ಕೇರಳದಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್ ತೈಕುಡಂ ಬ್ರಿಡ್ಜ್ ತಮ್ಮ ‘ನವರಸಂ’ ಆಲ್ಬಂನಲ್ಲಿರುವ ಹಾಡು ಮತ್ತದರ ಸಂಗೀತ ‘ವರಾಹರೂಪಂ’ ಹಾಡಿಗೆ ಹೋಲಿಕೆಯಾಗುತ್ತಿದ್ದು, ಇದು ಕೃತಿಚೌರ್ಯ ಎಂದು ಆರೋಪಿಸಿ, ಹಾಡಿನ ಪ್ರಸಾರಕ್ಕೆ ತಡೆ ಕೋರಿ ಕಳೆದ ಅಕ್ಟೋಬರ್‌ನಲ್ಲಿ ನ್ಯಾಯಾಲಯದ ಮೆಟ್ಟಲೇರಿತ್ತು. ಈ ಹಾಡನ್ನು ಪ್ರಸಾರ ಮಾಡದಂತೆ ಕೋಯಿಕ್ಕೋಡ್‌ನ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿತ್ತು. ಹೀಗಿದ್ದರೂ ಕೆಲ ಚಿತ್ರಮಂದಿರಗಳಲ್ಲಿ ಈ ಹಾಡು ಪ್ರಸಾರವಾಗುತ್ತಲೇ ಇತ್ತು.

ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ಕಾಂತಾರ’ ಚಿತ್ರದಲ್ಲಿ ಈ ಹಾಡನ್ನು ತೆಗೆಯಲಾಗಿದೆ. ಬದಲಾಗಿ ಸಂಗೀತವನ್ನು ಬದಲಾಯಿಸಿ ಹೊಸದಾಗಿ ‘ವರಾಹ ರೂಪಂ...’ ಹಾಡನ್ನು ಸೇರ್ಪಡಿಸಲಾಗಿದೆ. ಇದು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೇಕ್ಷಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ADVERTISEMENT

ಚಿತ್ರದ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಸಿಟ್ಟಿನಿಂದಲೇ ಕಮೆಂಟ್ ಮಾಡಿದ್ದಾರೆ. ಗುರುವಾರ ಅಜನೀಶ್‌ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಚಿತ್ರವೊಂದಕ್ಕೆ ಬಂದಿರುವ ಸಾಲು ಸಾಲು ಕಮೆಂಟ್‌ಗಳೇ ಇದಕ್ಕೆ ಸಾಕ್ಷ್ಯ. ‘ವರಾಹ ರೂಪಂ’ ಹಾಡಷ್ಟೇ ಅಲ್ಲದೆ ಕೆಲವೆಡೆ ಹಿನ್ನೆಲೆ ಸಂಗೀತ ಬದಲಾಗಿರುವುದಕ್ಕೂ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಳು ಭಾಷೆಯಲ್ಲೂ ‘ಕಾಂತಾರ’

ಸೆ.30ರಂದು ಕೇವಲ ಕನ್ನಡದಲ್ಲಷ್ಟೇ ಬಿಡುಗಡೆಯಾಗಿ ನಂತರ ಹಿಂದಿ, ತೆಲುಗು, ಮಲಯಾಳಂ, ತಮಿಳು ಭಾಷೆಗೆ ಡಬ್‌ ಆಗಿದ್ದ ‘ಕಾಂತಾರ’ ಸಿನಿಮಾ ಕೊನೆಗೂ ತುಳು ಭಾಷೆಗೆ ಡಬ್‌ ಆಗಿದೆ. ತುಳು ಭಾಷೆಗೆ ಡಬ್‌ ಆದ ಸಿನಿಮಾ ಡಿ.2ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಡಬ್‌ ಆದ ಟ್ರೈಲರ್‌ ಅನ್ನು ಹೊಂಬಾಳೆ ಫಿಲ್ಮ್ಸ್‌ ಬಿಡುಗಡೆ ಮಾಡಿದೆ. ವಿದೇಶಗಳಲ್ಲಿ ನ.25ರಂದೇ ತುಳು ಭಾಷೆಯಲ್ಲಿ ಡಬ್‌ ಆದ ‘ಕಾಂತಾರ’ ಬಿಡುಗಡೆಯಾಗಲಿದೆ. ಈ ಕುರಿತು ತುಳು ಭಾಷೆಯಲ್ಲೇ ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ ಮಾಡಿದೆ.

ಕರಾವಳಿಯ ದೈವಗಳ ಕಥಾಹಂದರ ಹೊಂದಿದ್ದ ಸಿನಿಮಾ ತುಳು ಭಾಷೆಯಲ್ಲೂ ಡಬ್‌ ಆಗಿ ಬಿಡುಗಡೆಯಾಗಬೇಕು ಎಂಬ ಆಗ್ರಹ ಅಲ್ಲಿನ ಪ್ರೇಕ್ಷಕರಿಂದ ಮೊದಲೇ ಕೇಳಿಬಂದಿತ್ತು. ಇದಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ತುಳು ಭಾಷೆಯಲ್ಲಿ ಅಚ್ಯುತ್‌ ಕುಮಾರ್‌ ಪಾತ್ರಕ್ಕೆ ತುಳು ರಂಗಭೂಮಿಯ ಖ್ಯಾತ ನಟ ದೇವದಾಸ್‌ ಕಾಪಿಕಾಡ್‌ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ನಟಿಸಿದ್ದ ಹಲವು ಕಲಾವಿದರು ಕರಾವಳಿಯವರೇ ಆಗಿದ್ದ ಕಾರಣ, ಅವರ ಪಾತ್ರಗಳಿಗೆ ಅವರೇ ಧ್ವನಿಯಾಗಿದ್ದಾರೆ.

ಕಾಂತಾರತುಳು ಟ್ರೈಲರ್‌:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.