ಉಪೇಂದ್ರ ಸಿನಿಮಾದ ‘ಏನಿಲ್ಲ ಏನಿಲ್ಲ ಕರಿಮಣಿ ಮಾಲೀಕ ನೀ ನಲ್ಲ’ ಹಾಡು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಜನಪ್ರಿಯವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ, ರೀಲ್ಸ್‌ಗಳ ಮೂಲಕ ಈ ಹಾಡು ಸಾಕಷ್ಟು ಹರಿದಾಡಿತ್ತು. ಈ ಜನಪ್ರಿಯ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡು ‘ಕರಿಮಣಿ ಮಾಲಿಕ ನೀನಲ್ಲ’ ಚಿತ್ರ ಸೆಟ್ಟೇರಿದ್ದು ಗೊತ್ತೇ ಇದೆ. ಇದೀಗ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಗೊಂಡಿದೆ.
ಚಂದ್ರು ಓಬಯ್ಯ ಈ ಚಿತ್ರದ ನಿರ್ದೇಶಕರು. ಅವರು ಈ ಹಿಂದೆ ‘ಯು ಟರ್ನ್ 2’ ಚಿತ್ರ ನಿರ್ದೇಶಿಸಿದ್ದರು. ಯುವ ನಟ ಮಾರುತಿಗೆ ರಮಿಕ ಸುತಾರ ಜೋಡಿಯಾಗಿದ್ದಾರೆ.
‘ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದು ನನ್ನ ನಿರ್ದೇಶನದ ಒಂಬತ್ತನೆ ಚಿತ್ರ. ಬೆಂಗಳೂರಿನಲ್ಲಿಯೇ ನಡೆ ನೈಜಘಟನೆ ಆಧಾರಿತ ಚಿತ್ರ. ಎಳನೀರು ಮಾರುವ ಹುಡುಗ, ಹೂ ಮಾರುವ ಹುಡುಗ ನಡುವಿನ ನಡೆಯುವ ವಿಭಿನ್ನ ಪ್ರೇಮಕಥೆ ಇದಾಗಿದ್ದು, ಇವರಿಬ್ಬರ ನಡುವೆ ಮತ್ತೊಬ್ಬನ ಎಂಟ್ರಿ ಆಗುತ್ತೆ. ಇಲ್ಲಿ ನಾಯಕಿಯ ಕರಿಮಣಿ ಮಾಲೀಕ ಯಾರಾಗ್ತಾರೆ ಎಂಬುದೇ ಚಿತ್ರಕಥೆ. ನನ್ನ ಕಥೆಗೆ ಇದೇ ಟೈಟಲ್ ಸೂಕ್ತ ಎನಿಸಿ ಈ ಶೀರ್ಷಿಕೆ ಇಟ್ಟಿದ್ದೇನೆ. ಬೆಂಗಳೂರು ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಚಿತ್ರದ ಶೀರ್ಷಿಕೆ ಗೀತೆಯನ್ನು ಪಾವಗಡದ ನಿಡಗಲ್ ಬೆಟ್ಟದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳಿದ್ದು ಸಂಗೀತ ನಿರ್ದೇಶನ ಹಾಗೂ ಚಿತ್ರದ ನಿರ್ಮಾಣದ ಹೊಣೆ ನನ್ನದೇ’ ಎಂದರು ನಿರ್ದೇಶಕರು.
‘ನಾಯಕ ಮತ್ತು ನಾಯಕಿ ಕಥೆಯಲ್ಲಿ ಬರುವ ಮತ್ತೊಬ್ಬ ವ್ಯಕ್ತಿಯ ಪಾತ್ರವನ್ನು ನಾನು ಮಾಡಿದ್ದೇನೆ. ನೀನಲ್ಲ, ನೀನೇ ನಲ್ಲ ಎಂದು ನಾಯಕಿ ಯಾರ್ಯಾರಿಗೆ ಹೇಳ್ತಾಳೆ ಎಂಬುದೇ ಚಿತ್ರದ ಕಥೆ ಎಂದರು’ ಚಿತ್ರದ ಮತ್ತೋರ್ವ ನಾಯಕ ಕಾಕ್ರೋಚ್ ಸುಧೀ.
ಮೀನಾಕುಮಾರಿ, ಮೂಗು ಸುರೇಶ್, ರೇಖಾದಾಸ್ ಮುಂತಾದವರು ಚಿತ್ರದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.