ADVERTISEMENT

ಚಿತ್ರಮಂದಿರ ಆಗಸ್ಟ್ 1ರಿಂದ ಓಪನ್‌ ನಿರೀಕ್ಷೆ! ಆದರೆ?

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 19:30 IST
Last Updated 27 ಜುಲೈ 2020, 19:30 IST
ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್   

ಕೋವಿಡ್‌- 19 ಲಾಕ್‌ಡೌನ್‌ ಕಾರಣಕ್ಕೆ ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಬಾಗಿಲು ಮುಚ್ಚಿರುವ ಚಿತ್ರಮಂದಿರಗಳು, ರಾಜ್ಯ ಸರ್ಕಾರದ ಅನುಮತಿ ಸಿಕ್ಕಿದರೆಆಗಸ್ಟ್ 1ರಿಂದ ಬಾಗಿಲು ತೆರೆಯುವ ನಿರೀಕ್ಷೆ ಇದೆ. ಇದಕ್ಕಾಗಿ ಕೇಂದ್ರ ಸರ್ಕಾರ ನೀಡಲಿರುವ ಮಾರ್ಗದರ್ಶಿ ಸೂತ್ರವನ್ನು ರಾಜ್ಯ ಸರ್ಕಾರ ಮತ್ತು ಕನ್ನಡ ಚಿತ್ರೋದ್ಯಮವು ಎದುರು ನೋಡುತ್ತಿವೆ.

‘ನಟ ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚಿತ್ರೋದ್ಯಮದ ಚೇತರಿಕೆಗೆ ತಕ್ಷಣದ ನೆರವು ಕಲ್ಪಿಸುವಂತೆ ಮನವಿ ಮಾಡಲಿದ್ದೇವೆ. ಅದಕ್ಕೂ ಮೊದಲು ಗುರುವಾರ ಅಥವಾ ಶುಕ್ರವಾರ ಫಿಲ್ಮ್‌ ಛೇಂಬರ್‌ (ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ)ನಲ್ಲಿ ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರು ಸೇರಿ ಚಿತ್ರೋದ್ಯಮದ ಪ್ರಮುಖರೆಲ್ಲರೂ ಸಭೆ ನಡೆಸಲಿದ್ದೇವೆ’ ಎಂದುಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ‘ಪ್ರಜಾಪ್ಲಸ್‌’ಗೆ ತಿಳಿಸಿದ್ದಾರೆ.

‘ನಿರ್ಮಾಪಕರು ಚಿತ್ರಗಳ ಮೇಲೆ ಹೂಡಿರುವ ಬಂಡವಾಳ ಮರಳಿ ಪಡೆಯುವುದು ಹೇಗೆ, ಚಿತ್ರೋದ್ಯಮದ ಚಟುವಟಿಕೆಗಳನ್ನು ಯಥಾಸ್ಥಿತಿಗೆಮರಳಿ ತರುವುದು ಹೇಗೆ? ಚಿತ್ರದ ಗಳಿಕೆಯನ್ನು ಯಾವ ಬಗೆಯಲ್ಲಿ ಹಂಚಿಕೊಳ್ಳುವುದು? ನಿರ್ಮಾಪಕ, ನಿರ್ದೇಶಕ, ಪ್ರದರ್ಶಕ, ವಿತರಕ, ಕಲಾವಿದರು ಹೀಗೆ ನಾವೆಲ್ಲ ಏನೆಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕೆನ್ನುವ ಬಗ್ಗೆಯೂ ಚರ್ಚಿಸಲಿದ್ದೇವೆ. 60–70 ವರ್ಷಗಳಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಇಂತಹ ಬಿಕ್ಕಟ್ಟು ಬಂದಿರಲಿಲ್ಲ. ಮೊದಲು ಜನರು ಚಿತ್ರಮಂದಿರದತ್ತ ಬರುವ ವಾತಾವರಣ ನಿರ್ಮಾಣವಾಗಬೇಕಿದೆ. ಜತೆಗೆ ಅಣ್ಣಾವ್ರು ಹೇಳಿರುವಂತೆ ಅಭಿಮಾನಿಗಳೇ ನಮ್ಮ ದೇವರು. ಅಭಿಮಾನಿ ದೇವರುಗಳ ಆರೋಗ್ಯವೂ ಈ ಸಂದರ್ಭದಲ್ಲಿ ಮುಖ್ಯ. ನಮ್ಮ ಉಳಿವಿಗಾಗಿ ಅಭಿಮಾನಿಗಳನ್ನು ಅಪಾಯಕ್ಕೆ ಸಿಲುಕಿಸದಂತೆಯೂ ಎಚ್ಚರವಹಿಸಬೇಕಿದೆ’ ಎಂದಿದ್ದಾರೆ ಅವರು.

ADVERTISEMENT

ಚಿತ್ರಮಂದಿರಗಳ ಬಾಗಿಲು ತೆರೆಯುವುದು ಸಾಧ್ಯವೇ?

ಕೋವಿಡ್‌- 19 ವೈರಾಣುಮೊದಲು ಕಾಣಿಸಿಕೊಂಡ ಚೀನಾದಲ್ಲಿ, ಸೋಂಕು ನಿಯಂತ್ರಣಕ್ಕೆ ಬಂದ ಕಾರಣಕ್ಕೆ ಆರು ತಿಂಗಳ ನಂತರ, ಕಳೆದ ಸೋಮವಾರ ಚಿತ್ರಮಂದಿರಗಳು ಬಾಗಿಲು ತೆರೆದಿದ್ದವು. ಮತ್ತೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾದ ಕಾರಣಕ್ಕೆ ನಾಲ್ಕೇ ದಿನಗಳಲ್ಲಿ ಪುನಃ ಬಾಗಿಲು ಮುಚ್ಚಿಸಲಾಗಿದೆ ಎಂದು ಅಂತರರಾಷ್ಟ್ರೀಯ ಸಿನಿಮಾನಿಯತಕಾಲಿಕೆ ‘ವೆರೈಟಿ’ ವರದಿ ಮಾಡಿದೆ.

‘ಅಮೆರಿಕ, ವಿಯೆಟ್ನಾಂ ಹಾಗೂ ಯುಕೆಯಲ್ಲೂ ಚಿತ್ರಮಂದಿರಗಳು ಬಾಗಿಲು ತೆರೆದಿಲ್ಲ. ಹಾಲಿವುಡ್‌ನಲ್ಲಿ ಬಿಗ್‌ಬಜೆಟ್‌ನ ಬಹುತೇಕ‌ ಸಿನಿಮಾಗಳ ಬಿಡುಗಡೆಯನ್ನು ಎರಡು ವರ್ಷಗಳವರೆಗೆ ಮುಂದೂಡಲಾಗಿದೆ. ಅಲ್ಲದೆ, ಭಾರತದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕೊರೊನಾ ಅಬ್ಬರ ತೀವ್ರವಾಗಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಮತ್ತು ಚಿತ್ರೋದ್ಯಮದ ಪ್ರಮುಖರು‌ಈ ಬಗ್ಗೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಚಿತ್ರರಂಗದ ಪ್ರಮುಖರೊಬ್ಬರು.

‘ಬಾಗಿಲು ತೆರೆಯಲು ಏಕಪರದೆಯ ಚಿತ್ರಮಂದಿರಗಳ ಮಾಲೀಕರು ಅಷ್ಟಾಗಿ ಅವಸರಿಸುತ್ತಿಲ್ಲ. ಆದರೆ, ನಾಲ್ಕು ತಿಂಗಳಿನಿಂದ ವ್ಯವಹಾರ ಸ್ಥಗಿತಗೊಂಡಿರುವುದರಿಂದ ಮತ್ತು ಮಲ್ಟಿಪ್ಲೆಕ್ಸ್‌ಗಳ ಷೇರುಗಳ ಬೆಲೆ ಕುಸಿಯುತ್ತಿರುವ ಕಾರಣಕ್ಕೆ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ಮಾಲೀಕರು ಬಾಗಿಲು ತೆರೆಯಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವಂತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶೇ 25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸುವ ಮಾತು ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯಸಾಧ್ಯ?ಈ ಬಗ್ಗೆಯೂ ಆಲೋಚಿಸಬೇಕಿದೆ’ ಎನ್ನುತ್ತಾರೆ ಅವರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.